ಅಳ್ನಾವರ:
ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈಯಕ್ತಿಕ ಅಥವಾ ಸಾರ್ವಜನಿಕ ಕೆಲಸಗಳಿಗಾಗಿ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಅಭಿಯಾನ ಹಮ್ಮಿಕೊಂಡಿದ್ದು ಸ್ಥಳದಲ್ಲಿಯೇ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರು ಮತ್ತು ಸಚಿವರ ಮೂಲಕ ಪ್ರಸ್ತಾವನೆ ಸಲ್ಲಿಸಿ ಹಂತ-ಹಂತವಾಗಿ ಅನುದಾನದ ಲಭ್ಯತೆಯ ಮೇರೆಗೆ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿದರು.
ಕೆಲಸ ಮಾಡಿ ಹಲವು ತಿಂಗಳು ಕಳೆದರೂ ಕೂಲಿ ಪಾವತಿಸಿಲ್ಲವೆಂದು ನರೇಗಾ ಕಾರ್ಮಿಕರು ದೂರಿದರೆ, ಬಸ್ ಸೇವೆಯಲ್ಲಿ ಅಡಚಣೆ, ಪಡಿತರ ಕಾರ್ಡ್‌ಗಳ ವಿತರಣೆ, ರದ್ದಾದ ಮಾಸಾಶನ ಪುನರ್ ಮಂಜೂರಾತಿ, ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಸೇರಿದಂತೆ ರಸ್ತೆ, ಚರಂಡಿ, ಮಕ್ಕಳಿಗೆ ಶಾಲಾ ಆಟದ ಮೈದಾನ ಮುಂತಾದ ಸಮಸ್ಯೆಗಳನ್ನು ಜನರು ಅಧಿಕಾರಿಗಳ ಮುಂದಿಟ್ಟರು.ಆಹಾರ ಅರಸಿ ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿಯೇ ಹಣ್ಣಿನ ಗಿಡ ನೆಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಕಡಬಗಟ್ಟಿ ಗ್ರಾಮದ ಗೋವಿಂದ ಪಾಟೀಲ ಹೇಳುವ ಮೂಲಕ ಅಧಿಕಾರಗಳ ಗಮನ ಸೆಳೆದರು. ಕಾಡು ಹಂದಿ ಮತ್ತಿತರ ಪ್ರಾಣಿಗಳಿಂದ ಉಂಟಾದ ಬೆಳೆ ನಾಶಕ್ಕೆ ಪರಿಹಾರ ನೀಡುವಂತೆಯೂ ರೈತರು ಸಭೆಯಲ್ಲಿ ಆಗ್ರಹಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ಸಭೆಯಲ್ಲಿ ವಿತರಿಸಲಾಯಿತು. ಭಾಗ್ಯಲಕ್ಷ್ಮೀ ಬಾಂಡಗಳ ಪುಸ್ತಕಗಳನ್ನು ಇದೇ ವೇಳೆ ಹಂಚಿಕೆ ಮಾಡಲಾಯಿತು. ಹುಲಿಕೇರಿ, ಕಾಶೆನಟ್ಟಿ ರಸ್ತೆ ಅಗಲಿಕರಣ, ದುರಸ್ತಿ, ರಸ್ತೆಯ ಅಕ್ಕ ಪಕ್ಕದಲ್ಲಿ ಬೆಳೆದು ನಿಂತಿರುವ ಗಿಡ-ಕಂಟಿಗಳ ಕಟಾವು ಮಾಡುವುದು, ವಿದ್ಯುತ್ ದೀಪಗಳ ಅಳವಡಿಕೆ, ನೀರು ಸರಬರಾಜು ಸೇರಿದಂತೆ ವಿವಿಧ ಮನವಿಗಳು ಸಲ್ಲಿಕೆಯಾದವು.