ಬೀದರ್: ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ಸರ್ಕಾರಿ ಅಧಿಕಾರಿಗಳ ಮೇಲಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಿವೃತ್ತ ಮುಖ್ಯ ನ್ಯಾ.ಎಲ್.ನಾರಾಯಣ ಸ್ವಾಮಿ ಹೇಳಿದರು.
ನಗರದ ಹಬ್ಸಿಕೋಟ ಅತಿಥಿಗೃಹದ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ಹಮ್ಮಿಕೊಂಡಿದ್ದ ಸಿಟ್ಟಿಂಗ್ಸ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಜನರು ದೂರುಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬರಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕಾಗಿ ನಮ್ಮ ಆಯೋಗ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಜನರು ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಅವುಗಳಿಗೆ ಪರಿಹಾರ ನೀಡಲಾಗುತ್ತದೆ ಎಂದರು.ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲವು ವಲಯಗಳಲ್ಲಿ ಕೆಲಸ ಮಾಡಬೇಕಿದೆ. ನಮಗೆ ಬಹಳಷ್ಟು ಮಾಹಿತಿಗಳು ಪತ್ರಿಕೆಯಿಂದ ತಿಳಿಯುತ್ತವೆ ಅಂತಹ ಪ್ರಕರಣಗಳಿಗೆ ಸೊಮೊಟೊ ಪ್ರಕರಣ ದಾಖಲಿಸಿ ಕ್ರಮವಹಿಸಲಾಗುತ್ತದೆ. ಬಾಲ ಮಂದಿರ. ಸರ್ಕಾರದ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳನ್ನು ನೀಡದಿದ್ದರು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಟಿ.ಶ್ಯಾಂಭಟ್ ಮಾತನಾಡಿ, ಮಾನವ ಹಕ್ಕುಗಳ ಆಯೋಗ ಜಿಲ್ಲೆಗಳಿಗೆ ಬಂದಿರುವ ಉದ್ದೇಶ ದೂರುಗಳಿಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಇರುವುದರಿಂದ ಜಿಲ್ಲೆಗಳಿಗೆ ಭೇಟಿ ನೀಡಲಾಗುತ್ತಿದೆ. ಬರುವ ದೂರುಗಳಿಗೆ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಸ್ಪಂದಿಸಿದರೆ ದೂರುಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದು ಹೇಳಿದರು.ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೊಡಿ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಲ್ಲರೂ ಗೌರವಯುತವಾಗಿ ಬಾಳಬೇಕಾದರೆ ಯಾವುದೇ ತಾರತಮ್ಯ ಮಾಡಬಾರದು ಇವುಗಳಲ್ಲಿ ಅನ್ಯಾಯವಾದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತೆ ಇವುಗಳ ಉಲ್ಲಂಘನೆ ತಡೆಯುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳ ಮೇಲಿದೆ ಎಂದರು.
ಜಿ.ಪಂ ಸಿಇಓ ಡಾ.ಗಿರೀಶ್ ಬದೋಲೆ ಹಾಗೂ ಎಸ್ಪಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆದರೆ ಯಾವುದೇ ರೀತಿಯ ಸಮಸ್ಯೆ ಆಗಲ್ಲ ಇದನ್ನು ನಾವು ಮಾಡುತ್ತೇವೆ ಎಂದರು.ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಲೋಕಸ್ಪಂದನ ಮೂಲಕ ಜನರಿಗೆ ಠಾಣೆಗಳಲ್ಲಿ ಯಾವ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಪ್ರತಿದಿನ ಮುಂಜಾನೆ ವರದಿ ಮಾಡಲಾಗುತ್ತಿದೆ ಜನರು ಶೇ.86ರಷ್ಟು ನಮ್ಮ ಇಲಾಖೆಯ ಸೇವೆಯ ಕುರಿತು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬೀದರ ಜಿಲ್ಲೆಯಿಂದ ದಾಖಲಾದ 55 ಪ್ರಕರಣಗಳನ್ನು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಪರಿಶೀಲನೆ ನಡೆಸಿ ಕೆಲವು ದೂರುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಆಯೋಗದ ಕಾರ್ಯದರ್ಶಿ ದಿನೇಶ ಸಂಪತರಾಜ, ಅರುಣ ಪೂಜಾರ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಪ್ರಭಾಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.