ಮತಗಟ್ಟೆಯಲ್ಲಿನ ಅಗತ್ಯ ಸಿದ್ಧತೆ ಖಾತ್ರಿ ಪಡಿಸಿ: ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್

KannadaprabhaNewsNetwork |  
Published : May 03, 2024, 01:08 AM IST
ದ | Kannada Prabha

ಸಾರಾಂಶ

ರಾಜ್ಯದಲ್ಲಿ ಬಿಸಿಲಿನ ತಾಪಮಾನದ ಶಾಖಾಘಾತವಿದ್ದು, ಆ್ಯಂಬುಲೆನ್ಸ್ ಸೇವೆ ಒದಗಿಸಬೇಕು

ಬಳ್ಳಾರಿ: ರಾಜ್ಯದ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಮೇ 7ರಂದು ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿನ ಅಗತ್ಯ ಸಿದ್ಧತೆ ಖಾತ್ರಿ ಪಡಿಸಿಕೊಳ್ಳಬೇಕು. ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಎರಡನೇ ಹಂತದ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಯ ಕುರಿತು ಬುಧವಾರ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.

ಆಯಾ ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೂ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ ವ್ಯವಸ್ಥೆ, ರ್‍ಯಾಂಪ್, ವೀಲ್‍ಚೇರ್ ಹಾಗೂ ಇತರೆ ಅಗತ್ಯ ವ್ಯವಸ್ಥೆಗಳ ಸಿದ್ಧತೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ಬಿಸಿಲಿನ ತಾಪಮಾನದ ಶಾಖಾಘಾತವಿದ್ದು, ಆ್ಯಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ತಿಳಿಸಿದರು.

ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಇನ್ನಿತರೆ ಚುನಾವಣೆ ಸಂಬಂಧಿತ ತರಬೇತಿ ಕಾರ್ಯಾಗಾರ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಮೇ 7 ರಂದು ಮತದಾನ ದಿನವಾಗಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಕೆಲವು ವಿಶೇಷ ನಿಯಮಾವಳಿಗಳು ಜಾರಿಯಲ್ಲಿರುತ್ತವೆ. ಬಹಿರಂಗ ಸಭೆಗೆ ಅನುಮತಿಯಿಲ್ಲ. ಎಲ್ಲ ಜಿಲ್ಲಾ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಟೆಲ್ ಮುಚ್ಚಲು ಕ್ರಮ ವಹಿಸಬೇಕು. ಕ್ಷೇತ್ರದ ಮತದಾರರಲ್ಲದವರನ್ನು ಕ್ಷೇತ್ರದಿಂದ ಹೊರ ನಡೆಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.48 ಗಂಟೆಗಳ ಮುಂಚಿನ ಅವಧಿಯಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಅನುಮೋದನೆಗೊಂಡಿರಬೇಕು. ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಸಂಬಂಧಪಟ್ಟ ಅಭ್ಯರ್ಥಿ ಅಥವಾ ಪಕ್ಷವು ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಪ್ರಮಾಣಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ನಿಗಾ ವಹಿಸಲು ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.

ಟಿವಿ, ರೇಡಿಯೋ, ಸ್ಥಳೀಯ ಕೇಬಲ್ ನೆಟ್‍ವರ್ಕ್ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿತ ವಿಷಯಗಳು ಪ್ರಸಾರ ಮಾಡದಂತೆ ಕ್ರಮವಹಿಸಬೇಕು ಎಂದರು.

ಮತದಾನ ದಿನದಂದು, ಮತಗಟ್ಟೆಗಳಿಗೆ ಚುನಾವಣಾಧಿಕಾರಿಗಳನ್ನು ಹೊರತುಪಡಿಸಿ, ಮತ್ಯಾರು ಮೊಬೈಲ್ ಬಳಸುವಂತಿಲ್ಲ. ಮತದಾರರೂ ಮತಗಟ್ಟೆ ಕೇಂದ್ರಗಳ ಒಳಗಡೆ ತರದಂತೆ ನೋಡಿಕೊಳ್ಳಬೇಕು. ಮತಗಟ್ಟೆ ಕೇಂದ್ರಗಳ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಾಗೃತರಾಗಿರಬೇಕು ಎಂದು ತಿಳಿಸಿದರು.

ಈ ವೇಳೆ ಅಪರ ಮುಖ್ಯ ಚುನಾವಣಾಧಿಕಾರಿ ಎಂ.ಕೂರ್ಮಾರಾವ್, ವೆಂಕಟೇಶ್ ಅವರು ಇದ್ದರು.

ವಿಡಿಯೋ ಸಂವಾದದಲ್ಲಿ ಜಿಲ್ಲಾ ಮಟ್ಟದಿಂದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ