ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಅಡುಗೆ ಅನಿಲ ವಿತರಕರ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ ಉತ್ಪನ್ನಗಳು, ಆತ್ಮವಿಶ್ವಾಸದ ಗ್ರಾಹಕರು ಎಂಬ ಘೋಷವಾಕ್ಯದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಲಭ್ಯವಿರುವ ನಕಲಿ ಬ್ರ್ಯಾಂಡ್‍ಗಳ ಬಗ್ಗೆ ಎಚ್ಚರದಿಂದಿರಬೇಕು. ಗ್ರಾಹಕರು ಕಾನೂನಿನ ಅರಿವು ಹೊಂದಿದ್ದರೆ ಮಾತ್ರ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಇಂತಹ ಮಾಹಿತಿಗಳನ್ನು ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.10 ವರ್ಷಗಳ ಹಿಂದೆ ಜನರು ನೇರವಾಗಿ ಅಂಗಡಿಗಳಿಗೆ ಭೇಟಿ ನೀಡಿ, ವಸ್ತುವಿನ ಗುಣಮಟ್ಟ ಪರಿಶೀಲಿಸಿ ಖರೀದಿ ಮಾಡುತ್ತಿದ್ದರು. ಆದರೆ ಇಂದು ಆನ್‍ಲೈನ್ ಶಾಪಿಂಗ್ ವ್ಯಾಪಕವಾಗಿದ್ದು, ಅದರೊಂದಿಗೆ ಗ್ರಾಹಕರು ವಂಚನೆಗೊಳಗಾಗುವ ಸಾಧ್ಯತೆಗಳೂ ಹೆಚ್ಚಿವೆ. ಹೀಗಾಗಿ ಪ್ರತಿಯೊಬ್ಬ ಗ್ರಾಹಕನೂ ಜಾಗೃತನಾಗಿರುವುದು ಇಂದಿನ ಅಗತ್ಯ. ಆನ್‍ಲೈನ್ ವೇದಿಕೆಗಳಲ್ಲಿ ವಂಚನೆಗೊಳಗಾದ ಸಂದರ್ಭದಲ್ಲಿ ಗ್ರಾಹಕರು ಎದೆಗುಂದದೆ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು. ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ಆನ್‍ಲೈನ್ ಮೂಲಕವೂ ದೂರನ್ನು ದಾಖಲಿಸುವ ಸೌಲಭ್ಯಗಳು ಲಭ್ಯವಿವೆ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಬಿ.ಎಚ್.ಯಶೋಧ ಮಾತನಾಡಿ, ಮಗು ತಾಯಿಯ ಗರ್ಭದಲ್ಲಿ ಇದ್ದಾಗಿನಿಂದಲೇ ಯಾವುದಾದರೂ ಒಂದು ರೂಪದಲ್ಲಿ ಗ್ರಾಹಕನಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಬೇಕು. ಯಾವುದೇ ವಸ್ತು ಅಥವಾ ಸೇವೆಯನ್ನು ಹಣ ನೀಡಿ ಪಡೆದಾಗ ಅದಕ್ಕೆ ಸಂಬಂಧಿಸಿದ ಅಧಿಕೃತ ರಶೀದಿಯನ್ನು ಪಡೆಯುವುದು ಅತ್ಯಗತ್ಯ. ರಶೀದಿ ಇಲ್ಲದಿದ್ದರೆ ಗ್ರಾಹಕರು ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ ಎಂದು ತಿಳಿಸಿದರು.
ಉಪ ಪ್ರಧಾನ ಕಾನೂನು ಅಭಿರಕ್ಷಕ ಎಂ.ಮೂರ್ತಿ ಉಪನ್ಯಾಸ ನೀಡಿದರು. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಕಾನೂನು ಮಾಪನಾ ಶಾಸ್ತ್ರ ಸಹಾಯಕ ನಿಯಂತ್ರಕ ಚನ್ನಬಸಪ್ಪ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಯು.ಬಿ.ಗೀತಾ ಇದ್ದರು.