ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದಂತೆ ನೋಡಿಕೊಳ್ಳಿ : ಜಿಲ್ಲಾಧಿಕಾರಿ ರವಿ

KannadaprabhaNewsNetwork |  
Published : Mar 13, 2025, 12:47 AM IST
೧೨ಕೆಎಲ್‌ಆರ್-೪ಕೋಲಾರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಯರಗೋಳ್ ಹಾಗೂ ಕೆಸಿವ್ಯಾಲಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಯರಗೋಳ ಹಾಗೂ ಕೆ.ಸಿ.ವ್ಯಾಲಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಯರಗೋಳ ಹಾಗೂ ಕೆ.ಸಿ.ವ್ಯಾಲಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೋಲಾರ ನಗರ ಬಂಗಾರಪೇಟೆ ಹಾಗೂ ಮಾಲೂರು ಪಟ್ಟಣಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಯರಗೋಳ ಯೋಜನೆಯಡಿ ಈವರೆಗೆ ಮಧ್ಯರಾತ್ರಿಯವರೆಗೆ ಪಂಪಿಂಗ್ ಮಾಡಲಾಗುತ್ತಿತ್ತು. ಆದರೆ ಇಂದಿನಿಂದ ಸತತವಾಗಿ ಪಂಪಿಂಗ್ ಮಾಡಲು ಉದ್ದೇಶಿಸಲಾಗಿದೆ.

ಪ್ರಸ್ತುತ ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ಕುಡಿಯುವ ನೀರನ್ನು ಪೂರೈಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಈವರೆಗೆ ೮ ರಿಂದ ೧೨ ಗಂಟೆಗಳ ಕಾಲ ನೀರು ಪಂಪಿಂಗ್ ಮಾಡಲಾಗುತ್ತಿತ್ತು. ಇಂದಿನಿಂದ ೧೪ ರಿಂದ ೧೮ ಗಂಟೆಗಳ ಕಾಲ ಪಂಪಿಂಗ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪಂಪಿಂಗ್ ಮಾಡಲಾದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಕೋಲಾರ ನಗರದಲ್ಲಿ ೧೧ ಒವರ್‌ಹೆಡ್ ಟ್ಯಾಂಕ್‌ಗಳಿಂದ ೧೭ ವಾರ್ಡ್‌ಗಳಿಗೆ ೪ ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಮುಂದೆ ಪ್ರತಿ ೨ ದಿನಗಳಿಗೊಮ್ಮೆ ೨ ಗಂಟೆಗಳಂತೆ ಕುಡಿಯುವ ನೀರನ್ನು ಸರಬರಾಜು ಮಾಡಲು ಸೂಚಿಸಿದರು.

೧೩ ವಾಡ್‌ಗಳಲ್ಲಿ ಯರಗೊಳ ಜಲಾಶಯದ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ೯ ವಾರ್ಡ್‌ಗಳಲ್ಲಿ ಯರಗೋಳ ಹಾಗೂ ಕೊಳವೆ ಬಾವಿಗಳ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪ್ರತಿನಿತ್ಯ ೩೫ ಟ್ರಿಪ್‌ಗಳಲ್ಲಿ ೭ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಟ್ಯಾಂಕರ್‌ಗಳ ಬೇಡಿಕೆ ಹೆಚ್ಚಾಗಿರುವುದರಿಂದ ಹೆಚ್ಚುವರಿಯಾಗಿ ೪ ಹೊಸ ಟ್ಯಾಂಕರ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಪೌರಾಯುಕ್ತ ಪ್ರಸಾದ್ ತಿಳಿಸಿದರು.

ಉಳಿದ ವಾರ್ಡ್‌ಗಳಿಗೆ ನಗರಸಭೆ ವ್ಯಾಪ್ತಿಯ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ ನೀರಿನ ಮಿತ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಗರಸಭೆಯ ಕಸ ಸಂಗ್ರಹಣೆ ವಾಹನಗಳಲ್ಲಿ ಶುಚಿತ್ವದ ಜೊತೆಗೆ ನೀರಿನ ಮಿತ ಬಳಕೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಮಾಲೂರಿನ ೨೭ ವಾರ್ಡ್‌ಗಳಲ್ಲಿ ೫ ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ೧೫ ವಾರ್ಡ್‌ಗಳಲ್ಲಿ ಟ್ಯಾಂಕರ್ ಹಾಗೂ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳು ಐದು ದಿನಗಳ ಬದಲಿಗೆ ಪ್ರತಿ ೩ ಅಥವಾ ೨ ದಿನಗಳಿಗೊಮ್ಮೆ ನೀರು ಒದಗಿಸುವ ಯೋಜನೆ ರೂಪಿಸಬೇಕೆಂದು ತಿಳಿಸಿದರು.

ಕೆ.ಸಿ.ವ್ಯಾಲಿ ಯೋಜನೆಯ ನೀರು ೪ ಎಸ್.ಟಿ.ಪಿಗಳಲ್ಲಿ ೪೦೦ ಎಂ.ಎಲ್.ಡಿ ನೀರು ಸಂಗ್ರಹಣ ಸಾಮರ್ಥ್ಯವಿದ್ದು, ಪ್ರಸಕ್ತ ಸಾಲಿನಲ್ಲಿ ೨೭೬ ಕೆರೆಗಳನ್ನು ತುಂಬಲು ಯೋಜಿಸಲಾಗುತ್ತಿದೆ. ಒಟ್ಟಾರೆ ೫೦೦ ಕೆರೆಗಳಲ್ಲಿ ೪೧೫ ಕೆರೆಗಳನ್ನು ೯ ಪಂಪಿಂಗ್ ಸ್ಟೇಷನ್ಸ್ ಮೂಲಕ ಹಾಗೂ ಪ್ರಾಕೃತಿಕ ರಿಡ್ಜ್‌ಗಳನ್ನು ಬಳಸಿ ತುಂಬಲಾಗುತ್ತಿದೆ ಎಂದರು.

ಸಭೆಯಲ್ಲಿ ಯೋಜನಾ ನಿರ್ದೇಶಕಿ ಅಂಬಿಕಾ, ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು ಶೋಭ, ಕೋಲಾರ ನಗರಸಭೆ ಆಯುಕ್ತ ಪ್ರಸಾದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ