ಗದಗ: ಸರ್ಕಾರದಿಂದ ಅನುಷ್ಠಾನಿತ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಒದಗಬೇಕು. ಒಂದು ವೇಳೆ ಯೋಜನೆಗಳ ಸೌಲಭ್ಯದ ದುರುಪಯೋಗವಾಗದಂತೆ ನಿಗಾವಹಿಸಿ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ನಗರದ ಜಿಪಂ ವಿಡಿಯೋ ಸಭಾಂಗಣದಲ್ಲಿ ಸೋಮವಾರ ಜರುಗಿದ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜತೆಗೆ ಸಭೆ ನಡೆಸಬೇಕು. ಅನ್ನಭಾಗ್ಯ ಅಕ್ಕಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ನಗರದಲ್ಲಿನ ಬೀದಿದೀಪಗಳ ಕಂಬದ ದುರಸ್ತಿಗೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಜನನಿಬಿಡ ಪ್ರದೇಶಗಳಲ್ಲಿ ವಿದ್ಯುತ್ ಅವಘಡಗಳಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಹೇಳಿದರು.ಗೃಹಲಕ್ಷ್ಮಿ ಹಾಗೂ ಯುವ ನಿಧಿ ಯೋಜನೆಯ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು. ನಗರದ ಹಳೇ ಬಸ್ ಸ್ಟ್ಯಾಂಡ್ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ನಗರದ ವಿವಿಧ ಪ್ರದೇಶಗಳಿಂದ ಜಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದು, ಹೆಚ್ಚಿನ ಬಸ್‌ಗಳನ್ನು ಕಲ್ಪಿಸಲು ಕೆಎಸ್‌ಆರ್‌ಟಿಸಿಯವರು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿದರು. ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ್, ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡ, ಮಲ್ಲಪ್ಪ ಬಾರಕೇರ, ಬಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ಶರೀಫ್, ತಾಪಂ ಮ್ಯಾನೇಜರ್ ರುದ್ರಪ್ಪ ಬಾವಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಿತ ಅಧಿಕಾರಿಗಳು ಹಾಜರಿದ್ದರು.