ಡಿ.31ರಂದು ಹೊಸ ವರ್ಷ ಸ್ವಾಗತಕ್ಕಾಗಿ ಮನರಂಜನೆ ಕಾರ್ಯಕ್ರಮ

KannadaprabhaNewsNetwork | Updated : Dec 28 2023, 01:46 AM IST

ಸಾರಾಂಶ

2024ರ ಹೊಸ ವರ್ಷದ ಅಂಗವಾಗಿ ಶಿಕಾರಿಪುರದ ಕದಂಬ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಡಿ.31ರಂದು ರಾತ್ರಿ ಪಟ್ಟಣದ ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದರು, ನೃತ್ಯಪಟು, ಸಂಗೀತ ಸಾಧಕರಿಂದ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಮಯೂರ್ ದರ್ಶನ್ ಉಳ್ಳಿ ತಿಳಿಸಿದ್ದಾರೆ.

ಶಿಕಾರಿಪುರ: 2024ರ ಹೊಸ ವರ್ಷದ ಅಂಗವಾಗಿ ಕದಂಬ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಡಿ.31ರಂದು ರಾತ್ರಿ ಪಟ್ಟಣದ ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದರು, ನೃತ್ಯಪಟು, ಸಂಗೀತ ಸಾಧಕರಿಂದ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಮಯೂರ್ ದರ್ಶನ್ ಉಳ್ಳಿ ಹೇಳಿದರು.

ಬುಧವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯರಿಗೆ ಯುಗಾದಿ ಹೊಸ ವರ್ಷವಾಗಿದೆ. ಆದರೆ, ಇತ್ತೀಚಿನ ದಿನದಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯಿಂದ ಜ.1 ಹೊಸ ವರ್ಷ ಎಂಬಂತಾಗಿದೆ. ಹೊಸ ವರ್ಷ ನೆಪದಲ್ಲಿ ಯುವಜನತೆಯಲ್ಲಿ ಮೋಜು- ಮಸ್ತಿಯ ಕೆಟ್ಟ ಪರಂಪರೆ ಹೋಗಲಾಡಿಸಬೇಕಿದೆ. ಅಲ್ಲದೇ, ಭಾರತೀಯ ಶ್ರೇಷ್ಠ ನೃತ್ಯ, ಸಂಗೀತ, ರಸಮಂಜರಿ, ಹಾಸ್ಯ ಕಾರ್ಯಕ್ರಮಗಳ ಮೂಲಕ ಹೊಸ ವರ್ಷವನ್ನು ಭಾರತೀಯ ಸಂಪ್ರದಾಯ ರೀತಿಯಲ್ಲಿ ಬರಮಾಡಿಕೊಳ್ಳುವ ಸದುದ್ದೇಶ ಹೊಂದಲಾಗಿದೆ ಎಂದರು.

ಡಿ.31ರಂದು ರಾತ್ರಿ 8ರಿಂದ ಪಟ್ಟಣದ ಮಧ್ಯ ಭಾಗದಲ್ಲಿರುವ ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಣೆನೂರು ಮನು ಈವೆಂಟ್ಸ್ ಅವರಿಂದ ಅದ್ಧೂರಿ ರಸಮಂಜರಿ ಕಾರ್ಯಕ್ರಮದಲ್ಲಿ ಖ್ಯಾತ ಕಿರುತೆರೆ ನಟಿ ಸುಷ್ಮಾ ಕೆ. ರಾವ್, ಸರಿಗಮಪ ಖ್ಯಾತಿಯ ಆಶಾ ಭಟ್, ಕಾಮಿಡಿ ಕಿಲಾಡಿಯ ದೀಕ್ಷಿತ್ ಗೌಡ, ಮಿಂಚು, ಚಲನಚಿತ್ರ ನಟ ಏಕಲವ್ಯ ಮತ್ತಿತರ ಹಲವು ಶ್ರೇಷ್ಠ ಕಲಾವಿದರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಲಾಗಿದೆ ಎಂದರು.

ಹೊಸ ವರ್ಷದ ಅಂಗವಾಗಿ ಆಯ್ದ 10 ಡಯಾಲಿಸಿಸ್ ರೋಗಿಗಳಿಗೆ ಕ್ಲಬ್ ಹಾಗೂ ಉಳ್ಳಿ ಫೌಂಡೇಶನ್ ಸಹಯೋಗದಲ್ಲಿ ಸಹಾಯಧನ, ಹಣ್ಣು ವಿತರಿಸಲಾಗುವುದು ಎಂದ ಅವರು, ಕನ್ನಡದ ಪುರಾತನ ಶಾಸನ ಎಂದು ಹಾಸನದ ಹಲ್ಮಿಡಿ ಶಾಸನ ಮಾನ್ಯತೆ ಪಡೆದಿದ್ದು, ತಾಲೂಕಿನ ತಾಳಗುಂದದಲ್ಲಿ ದೊರೆತ ಸಿಂಹ ಕಟಾಂಜನ ಶಾಸನ ಇದೀಗ ಹಲ್ಮಿಡಿ ಶಾಸನಕ್ಕಿಂತ ಪುರಾತನ ಎಂಬುದು ಸಾಬೀತಾಗಿದೆ. ಈ ದಿಸೆಯಲ್ಲಿ ಸಿಂಹ ಕಟಾಂಜನ ಶಾಸನವನ್ನು ಅತ್ಯಂತ ಪುರಾತನ ಕನ್ನಡ ಶಾಸನ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸುವಂತೆ ನೂತನ ಸರ್ಕಾರದ ಕನ್ನಡ ಸಂಸ್ಕೃತಿ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್ ಪದಾಧಿಕಾರಿ ಸಂತೋಷ ಗುಡ್ಡಳ್ಳಿ, ದಯಾನಂದ ಗಾಮ, ನಗರದ ಮಾಲತೇಶ, ರಾಜು ಉಡುಗಣಿ, ಗಿರೀಶ್ ಬುಲ್ಡಿ, ಸಂತೋಷ, ಸುಹಾಸ್ ಮತ್ತಿತರರು ಉಪಸ್ಥಿತರಿದ್ದರು.

- - -

-27ಕೆಎಸ್.ಕೆಪಿ1:

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಮಯೂರ್ ದರ್ಶನ್ ಉಳ್ಳಿ ಮಾತನಾಡಿದರು.

Share this article