ಬೇಸಿಗೆಯಲ್ಲೇ ನಾಡಿಗೆ ಕಾಡುಪ್ರಾಣಿಗಳ ದಾಂಗುಡಿ.!

KannadaprabhaNewsNetwork |  
Published : Apr 02, 2024, 01:06 AM IST
1ಡಿಡಬ್ಲೂಡಿ1ಧಾರವಾಡ ಸಮೀಪದ ಮನಸೂರು ಬಳಿ ಚಿರತೆ ಓಡಾಡಿದ್ದು, ಅದರ ಹೆಜ್ಜೆ ಗುರುತ | Kannada Prabha

ಸಾರಾಂಶ

ಮನಸೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ದನಕರುಗಳು ಮೇಲಿನ ಚಿರತೆ ದಾಳಿ ಧಾರವಾಡ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಮನಸೂರು, ಮನಗುಂಡಿ, ನಿಗದಿ, ಅಂಬ್ಲಿಕೊಪ್ಪ, ಹಳ್ಳಿಗೇರಿ ಹಾಗೂ ಸುತ್ತಲಿನ ಊರುಗಳಲ್ಲಿ ಜನರು ತೀವ್ರ ಭಯಭೀತರಾಗಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಮನಸೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ದನಕರುಗಳು ಮೇಲಿನ ಚಿರತೆ ದಾಳಿ ಧಾರವಾಡ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಮನಸೂರು, ಮನಗುಂಡಿ, ನಿಗದಿ, ಅಂಬ್ಲಿಕೊಪ್ಪ, ಹಳ್ಳಿಗೇರಿ ಹಾಗೂ ಸುತ್ತಲಿನ ಊರುಗಳಲ್ಲಿ ಜನರು ತೀವ್ರ ಭಯಭೀತರಾಗಿದ್ದಾರೆ. ಆದರೆ, ಕಾಡಿನಿಂದ ನಾಡಿನೆಡೆಗೆ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಆಗಮನ ಮತ್ತು ದಾಳಿಗಳು ಹೊಸೇನಲ್ಲ. ಧಾರವಾಡ ಸುತ್ತಲಿನ ಪ್ರದೇಶಕ್ಕೆ ಕಾಡು ಪ್ರಾಣಿಗಳ ಆಗಮನ ಆಗಾಗ ನಡೆಯುತ್ತಲೇ ಇದೆ.

ಕಳೆದ ವರ್ಷವಷ್ಟೇ ಹುಬ್ಬಳ್ಳಿಯ ನೃಪತುಂಗ ಬೆಟ್ಟ ಹಾಗೂ ಸುತ್ತಲೂ ಚಿರತೆಯೊಂದು ನಾಯಿಗಳನ್ನು ಬೇಟೆಯಾಡಿ ತದನಂತರ ಧಾರವಾಡ ಕವಲಗೇರಿ ಭಾಗಕ್ಕೂ ಬಂದಿತ್ತು. ನಂತರ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಸಂಗತಿ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದಕ್ಕೂ ಮುಂಚೆ ಧಾರವಾಡ ಸಮೀಪದ ಬೇಲೂರು ಪ್ರದೇಶದಲ್ಲಿ ಆನೆಗಳು ಬಂದು ಕಬ್ಬು ಹಾಳು ಮಾಡಿದ್ದವು. ಹಲವು ವರ್ಷಗಳ ಹಿಂದೆ ನುಗ್ಗಿಕೇರಿಗೆ ಕಾಡುಕೋಣ ಬಂದಿತ್ತು. ಇನ್ನು, ಕಲಘಟಗಿ ಭಾಗದಲ್ಲಿ ಆನೆ, ಚಿರತೆ ಸೇರಿದಂತೆ ಹತ್ತು ಹಲವು ಕಾಡು ಪ್ರಾಣಿಗಳ ಸಂಚಾರ ಇದ್ದೇ ಇದೆ. ಕಾಡಿನಿಂದ ನಾಡಿಗೆ ಅವೇಕೆ ಬರುತ್ತಿವೆ? ಅದರಲ್ಲೂ ಬೇಸಿಗೆಯಲ್ಲಿಯೇ ಬರುತ್ತಿರುವುದು ಗಮನಿಸಬೇಕಾದ ಸಂಗತಿ.

ಆಹಾರ, ನೀರಿಗಾಗಿ:

ಆಹಾರ ಮತ್ತು ನೀರು ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ ಎಂಬುದು ಗೊತ್ತಿರುವ ಮಾತು. ಅದನ್ನು ಸರಿಪಡಿಸುವ ಕಾರ್ಯ ಅರಣ್ಯ ಇಲಾಖೆ ಮಾಡಬೇಕು. ಯಾವ್ಯಾವ ಪ್ರಾಣಿಗಳು ಎಲ್ಲೆಲ್ಲಿವೆ ಎಂಬ ಮಾಹಿತಿ ಇಲಾಖೆಗೆ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳು ಓಡಾಡುವ ಪ್ರದೇಶದಲ್ಲಿ ಕೆಲ ಕ್ರಮಗಳನ್ನು ಇಲಾಖೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವುದು ಪ್ರಾಣಿಪ್ರಿಯರ ಆಗ್ರಹ. ಈ ಮೊದಲು ಕಾಡು, ಕಾಡಂಚಿನಲ್ಲಿ ಹುಲ್ಲುಗಾವಲು ಪ್ರೇದಶಗಳಿದ್ದವು. ಅರಣ್ಯ ಇಲಾಖೆ ಇದ್ದ ಇಂತಹ ಹುಲ್ಲುಗಾವಲುಗಳಲ್ಲೂ ಗಿಡಗಳನ್ನು ನೆಟ್ಟಿದ್ದು ಸಸ್ಯಹಾರಿಗಳು ಬೇಸಿಗೆ ಕಾಲದಲ್ಲಿ ನಾಡಿನತ್ತ ಹೊರಳುತ್ತವೆ. ಅವುಗಳನ್ನು ಬೆನ್ನು ಹತ್ತಿ ಆಹಾರಕ್ಕಾಗಿ ಮಾಂಸಹಾರಿಗಳು ಬರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅರಣ್ಯ ಇಲಾಖೆಯು ನೀರು ಗುಂಡಿ ಮಾತ್ರವಲ್ಲದೇ ಹುಲ್ಲುಗಾವಲು ಬೆಳೆಸಿದರೆ, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳು ತಮ್ಮಷ್ಟಕ್ಕೆ ತಾವು ತಮ್ಮ ಪ್ರದೇಶದಲ್ಲಿಯೇ ವಾಸಿಸುತ್ತವೆ. ಹೀಗಾಗಿ ನೀರು ಗುಂಡಿ ನಿರ್ಮಿಸುವ ಕೆಲಸವಾಗಬೇಕು ಎನ್ನುವುದು ನೇಚರ್‌ ರೀಸರ್ಚ್‌ ಸೆಂಟರ್‌ನ ಡಾ. ಹರ್ಷವರ್ಧನ ಶೀಲವಂತ ಅವರ ಆಗ್ರಹ.

ಚಿರತೆಯಿಂದ ದೂರ ಇರಿ:

ಇದರೊಂದಿಗೆ ಕಾಡು ಪ್ರಾಣಿಗಳು ಬಂದ ವೇಳೆ ಸಾರ್ವಜನಿಕರ ಪಾತ್ರ ಸಾಕಷ್ಟಿದೆ. ಪ್ರಾಣಿ ಇರುವಿಕೆ ಬಗ್ಗೆ ಮಾಹಿತಿ ಇದ್ದರೆ ಅರಣ್ಯ ಇಲಾಖೆಗೆ ನೀಡಬೇಕೆ ಹೊರತು ತಾವೇ ಅದನ್ನು ಹಿಡಿಯಲು ಹೊರಟವರಂತೆ ನೂರಾರು ಜನರು ಅದರ ಬೆನ್ನು ಬೀಳುವುದು ತಪ್ಪು. ಮನುಷ್ಯರ ವಾಸನೆ ಬಡಿದು ಚಿರತೆ ಅಥವಾ ಇನ್ನಾವುದೇ ಪ್ರಾಣಿಯಾಗಲಿ ಬೋನಿನ ಬಳಿ ಸುಳಿಯುವುದಿಲ್ಲ. ಹೀಗಾಗಿ ಅರಣ್ಯ ಇಲಾಖೆ ಪ್ರಯತ್ನವೂ ವಿಫಲವಾಗುವ ಸಾಧ್ಯತೆ ಇದೆ. ಸುಮಾರು ಎರಡು ವಾರವಾದರೂ ಚಿರತೆ ಪತ್ತೆಯಾಗದೇ ಇರುವುದು ಜನರ ಗುಂಪು ಕೂಡುವಿಕೆಯೂ ಕಾರಣವಿರಬಹದು ಎನ್ನುತ್ತಾರೆ ಡಾ. ಹರ್ಷವರ್ಧನ.

ಮನಸೂರು ಹಾಗೂ ಸುತ್ತಲು ಬಂದಿದೆ ಎನ್ನಲಾದ ಚಿರತೆ ಈಗಾಗಲೇ ನಾಲ್ಕು ದನಕರು ತಿಂದು ಹಾಕಿದ್ದು, ಇನ್ನು ಏನೇನು ಅನಾಹುತ ಕಾದಿದೆ ಎಂಬುದು ಸ್ಥಳೀಯರ ಆತಂಕ. ಇಲ್ಲಿ ಬಂದಿರುವುದು ಒಂದೇ ಚಿರತೆ ಅಲ್ಲ, ಅವು ಎರಡು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇಲ್ಲಿಯ ವರೆಗೆ ಚಿರತೆಯದ್ದು ಎನ್ನಲಾದ ಹೆಜ್ಜೆ ಗುರುತು ಹೊರತು ಪಡಿಸಿ ಯಾರ ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಗಿಲ್ಲ. ಬೈಪಾಸ್‌ ರಸ್ತೆಯ ಬಳಿ ಇರುವ ಉನ್ನತ ಶಿಕ್ಷಣ ಇಲಾಖೆ ಸಿಸಿ ಕ್ಯಾಮೆರಾದಲ್ಲಿ ಭಾನುವಾರ ರಾತ್ರಿ ಪ್ರಾಣಿಯೊಂದು ಹೋಗಿದ್ದು ಅದು ಚಿರತೆ ಎಂದೇ ಹೇಳಲಾಗುತ್ತಿದೆ. ಆದರೆ, ಅದು ಸ್ಪಷ್ಟವಾಗಿಲ್ಲ. ಅರಣ್ಯ ಇಲಾಖೆ ಹಾಕಿರುವ ಸಿಸಿ ಕ್ಯಾಮೆರ ಕಣ್ಣಿಗೂ ಬಿದ್ದಿಲ್ಲ. ಬರೀ ದನಕರುಗಳ ಮೇಲೆ ರಾತ್ರಿ ಹೊತ್ತು ದಾಳಿಯಾಗಿದ್ದು ಚಿರತೆಯನ್ನು ಇನ್ನೂ ಹೇಗೆ ಬಲೆಗೆ ಬೀಳಿಸಬೇಕೆಂದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.ಚಿರತೆಯೋ, ಕತ್ತೆ ಕಿರುಬನೋ?

ಮನಸೂರು ಸುತ್ತಲಿನ ದನಕರುಗಳ ಮೇಲೆ ದಾಳಿ ನಡೆಸಿದ ಪ್ರಾಣಿಯು ಚಿರತೆ ಅಥವಾ ಕತ್ತೆ ಕಿರುಬ ಎನ್ನುವ ಸಂಶಯ ಶುರುವಾಗಿದೆ. ದನಕರು ತಿನ್ನದೇ ಬರೀ ದಾಳಿ ಮಾಡಿ ಹೋಗಿದೆ. ಜತೆಗೆ ಸಿಸಿ ಕ್ಯಾಮೆರಾದಲ್ಲೂ ದಾಖಲಾಗಿಲ್ಲ, ಯಾರೂ ಸಹ ನೋಡಿಲ್ಲ. ಇಷ್ಟಾಗಿಯೂ ಆ ಪ್ರಾಣಿ ಹಿಡಿಯಲು ನಾವೀಗ 50 ಸಿಬ್ಬಂದಿಯೊಂದಿಗೆ ಕೂಂಬಿಂಗ್‌ ಆಪರೇಶನ್‌ ಶುರು ಮಾಡಿದ್ದೇವೆ. ಅದು ಸಂಚಾರ ಮಾಡಬಹುದಾದ ಹತ್ತು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಮೂರು ಕಡೆಗಳಲ್ಲಿ ಅದರ ಆಹಾರದೊಂದಿಗೆ ಬೋನ್‌ ಸಹ ಇಡಲಾಗಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಶೀಘ್ರ ಆ ಪ್ರಾಣಿ ಸೆರೆಯಾಗಲಿದೆ ಎಂಬ ನಂಬಿಕೆ ಇದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕೌರಿ ಹೇಳಿದ್ದಾರೆ.

PREV