ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಶಿವಾಜಿ ಸರ್ಕಲ್‌ನಲ್ಲಿ ಈ ಬಾರಿ ಅದ್ಧೂರಿಯಾಗಿ ಗಣೇಶನನ್ನು ಪ್ರತಿಷ್ಠಾಪಿಸಲಾಗುವುದು ಎಂದು ಗಜಾನನ ಉತ್ಸವ ಮಹಾಮಂಡಳ ಅಧ್ಯಕ್ಷ ಆನಂದ ಮುಚ್ಚಂಡಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ನಿರ್ಬಂಧ ಹಿನ್ನೆಲೆಯಲ್ಲಿ ನಾವು ಫೈಬರ್ ಗಣಪತಿ ಮೂರ್ತಿ ಮಾಡಿದ್ದೇವೆ. ಸುಮಾರು ವರ್ಷಗಳಿಂದ ಅದೇ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಪರಿಸರ ಸ್ನೇಹಿಯಾಗಿದ್ದು, ಬೇರೆಯವರಿಗೂ ಜಾಗೃತಿ ಮೂಡಿಸಿ ನಗರದ ವಿವಿಧೆಡೆ 15ಕ್ಕೂ ಹೆಚ್ಚು ಗಜಾನನ ಮಂಡಳಿಗಳು ಫೈಬರ್ ಗಣಪತಿ ಪ್ರತಿಷ್ಠಾಪಿಸುವಂತೆ ಮಾಡಿದ್ದೇವೆ. ಹಿಂದೆ ಮಣ್ಣಿನ ಗಣಪತಿಗಳನ್ನು ಉಚಿತವಾಗಿ ಕೊಡುತ್ತಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಂಡ ಈ ಬಾರಿ ಫೈಬರ್ ಗಣೇಶ ಕೂಡಿಸುವವರಿಗೆ ಧನಸಹಾಯ ಮಾಡಲಿದ್ದಾರೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಪ್ರಭಾಕರ ಭೋಸ್ಲೆ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿಗಾಗಿ ಸಾಕಷ್ಟು ಕಡೆಗಳಲ್ಲಿ ಅಲೆದಾಡಲಾಯಿತು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ಮಹಾಮಂಡಳದಿಂದ ಎಲ್ಲ ಪರವಾನಗಿಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಈ ಬಾರಿ ಶಿವಾಜಿ ಸರ್ಕಲ್ ನಲ್ಲಿ ವಿಶೇಷವಾಗಿ ಲೈಟಿಂಗ್ ವ್ಯವಸ್ಥೆ ಮಾಡಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳ ಚರಿತ್ರೆ ಸಾರುವ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ. 9 ದಿನಗಳ ಕಾಲ ನಿರಂತರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.ಜಗದೀಶ ಮುಚ್ಚಂಡಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಗಜಾನನ ಮಹಾಮಂಡಳದಿಂದ 100 ಮಂಡಳಿಗಳಿಗೆ ಹಾಗೂ 5 ಸಾವಿರ ಮನೆಗಳಿಗೆ ಮಣ್ಣಿನ ಗಣಪತಿಗಳನ್ನು ಕೊಡಲಾಗಿದೆ. ಈ ಬಾರಿ ಗಣೇಶ ವಿಗ್ರಹ ಮಾರಾಟಗಾರರು ತಮಗೆ ಸಮಸ್ಯೆ ಆಗುತ್ತಿದೆ ಎಂದು ಕೇಳಿದ್ದರಿಂದ ಉಚಿತ ಮಣ್ಣಿನ ಗಣಪತಿಗಳನ್ನು ಕೊಟ್ಟಿಲ್ಲ. ನಗರದಲ್ಲಿ 283 ಗಜಾನನ ಮಂಡಳಿಗಳಿಗೆ ಸಂಪರ್ಕ ಮಾಡಿ ಪರಿಸರ ಸ್ನೇಹಿ ಗಣಪತಿಗಳನ್ನೇ ಕೂಡಿಸುವಂತೆ ಜಾಗೃತಿ ಮೂಡಿಸಲಾಗಿದೆ.
ಮಹಾಮಂಡಳದ ಕಾರ್ಯಕ್ರಮ:ಸೆ.7ರಂದು ಫೈಬರ್ ಗಣೇಶ ಪ್ರತಿಷ್ಠಾಪನೆ, ಸಂಜೆ 6ಗಂಟೆಗೆ ಪೂಜೆ. 8ರ ರಾತ್ರಿ 8ಕ್ಕೆ ಭವಾನಿ ಕುಲಕರ್ಣಿ ಅವರಿಂದ ಭರತನಾಟ್ಯ ಪ್ರದರ್ಶನ. 9ರ ಸಂಜೆ 7ಕ್ಕೆ ಅನ್ನದಾಸೋಹ. 10ರ ಸಂಜೆ 7ಕ್ಕೆ ಗಂಗಾರತಿ, 11ರ ಬೆಳಗ್ಗೆ 10ರಿಂದ 2ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ. 12ರ ಬೆಳಗ್ಗೆ 6ರಿಂದ 9ರವರೆಗೆ ಲೋಕ ಕಲ್ಯಾಣಾರ್ಥ ಗಣಹೋಮ(ಮಹಾಯಜ್ಞ), 13ರ ಬೆಳಗ್ಗೆ 9ಕ್ಕೆ ಹಾಗೂ ರಾತ್ರಿ 8ಕ್ಕೆ ಪೂಜಾ ಹಾಗೂ ಆರತಿ, 14ರ ಸಂಜೆ 5ಕ್ಕೆ ಸತ್ಯನಾರಾಯಣ ಪೂಜೆ ಹಾಗೂ ನಿಲಾವು ಕಾರ್ಯಕ್ರಮ, 15ರ ಬೆಳಗ್ಗೆ 10ಗಂಟೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಿಜಯಪುರ ರತ್ನ ಪ್ರಶಸ್ತಿ ಪ್ರದಾನ ಬಳಿಕ ಗಣಪತಿ ವಿಸರ್ಜನೆ ಜರುಗಲಿವೆ.
ಸುದ್ದಿಗೋಷ್ಠಿಯಲ್ಲಿ ಗಜಾನನ ಉತ್ಸವ ಮಹಾಮಂಡಳ ಸದಸ್ಯರಾದ ಸತೀಶ ಗಾಯಕವಾಡ, ವಿನಾಯಕ ಬಬಲೇಶ್ವರ, ಪ್ರೇಮ ಬಿರಾದಾರ, ವಿವೇಕ ತಾವರಖೇಡ ಉಪಸ್ಥಿತರಿದ್ದರು.------------