ದ.ಕ.ಜಿಲ್ಲೆಯಲ್ಲಿ ಇನ್ನೂ ಮೂಡದ ಪರಿಸರ ಪ್ರಜ್ಞೆ: ಕೈಜೋಡಿಸುವಂತೆ ಕೋರ್ಟ್‌ಗೆ ಎನ್‌ಜಿಒ ಮೊರೆ!

KannadaprabhaNewsNetwork | Published : May 13, 2024 12:01 AM
Follow Us

ಸಾರಾಂಶ

ಜನ ಶಿಕ್ಷಣ ಟ್ರಸ್ಟ್‌ ನಿರ್ದೇಶಕ, ನರೇಗದ ಮಾಜಿ ಒಂಬುಡ್ಸ್‌ಮೆನ್‌ ಎನ್‌.ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರು ದ.ಕ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಿಗೆ ಸ್ವಚ್ಛತೆ ಅರಿವು ಕುರಿತು ನೆರವಾಗಲು ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಮನವಿಯಲ್ಲಿ ಜನತೆಗೆ ಅಗತ್ಯ ಕಾನೂನು ಪಾಠ, ಕಾನೂನು ಅರಿವು, ಮಾರ್ಗದರ್ಶನ ನೀಡಿ ತ್ಯಾಜ್ಯಮುಕ್ತ ಸುಸ್ಥಿರ ಸ್ವಚ್ಛ ಜಿಲ್ಲೆಗೆ ಸಹಕಾರ ನೀಡುವಂತೆ ಕೋರಿದ್ದಾರೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

‘ನಾವೆಲ್ಲ ಹೇಳಿಯಾಯ್ತು, ಇನ್ನು ನೀವಾದರೂ ಹೇಳಿ...’

ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನ ಆರಂಭವಾಗಿ 19 ವರ್ಷ ಕಳೆದರೂ ಇನ್ನೂ ಜನತೆಯಲ್ಲಿ ಬಯಲು ಸ್ವಚ್ಛತೆ ಬಗ್ಗೆ ಅರಿವು ಮೂಡದೇ ಇರುವ ಬಗ್ಗೆ ರೋಸಿ ಹೋದ ಸರ್ಕಾರೇತರ ಸಂಘಟನೆ ಜನ ಶಿಕ್ಷಣ ಟ್ರಸ್ಟ್‌ ಮಂಗಳೂರಿನ ನ್ಯಾಯಾಲಯಕ್ಕೆ ಮಾಡಿದ ಮನವಿ ಇದು.

ಪ್ಲಾಸ್ಟಿಕ್‌ ನಿಷೇಧ ಕಾಯ್ದೆ, ಸ್ವಚ್ಛತಾ ನೀತಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಜಿಲ್ಲೆ ಬಯಲು ಕಸದ ಕೊಂಪೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಶಾಸಕಾಂಗ, ಕಾರ್ಯಾರಂಗ, ಪತ್ರಿಕಾ ರಂಗ ಜತೆ ಕೈಜೋಡಿಸುವಂತೆ ನ್ಯಾಯಾಂಗಕ್ಕೂ ಮನವಿ ಸಲ್ಲಿಸಿದೆ.

ಜನ ಶಿಕ್ಷಣ ಟ್ರಸ್ಟ್‌ ನಿರ್ದೇಶಕ, ನರೇಗದ ಮಾಜಿ ಒಂಬುಡ್ಸ್‌ಮೆನ್‌ ಎನ್‌.ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರು ದ.ಕ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಮನವಿಯಲ್ಲಿ ಜನತೆಗೆ ಅಗತ್ಯ ಕಾನೂನು ಪಾಠ, ಕಾನೂನು ಅರಿವು, ಮಾರ್ಗದರ್ಶನ ನೀಡಿ ತ್ಯಾಜ್ಯಮುಕ್ತ ಸುಸ್ಥಿರ ಸ್ವಚ್ಛ ಜಿಲ್ಲೆಗೆ ಸಹಕಾರ ನೀಡುವಂತೆ ಕೋರಿದ್ದಾರೆ.

ಬಯಲು ಶೌಚಾಲಯ ಬದಲು ಕಸಾಲಯ!:

ದ.ಕ.ಜಿಲ್ಲೆಯ 223 ಗ್ರಾಮ ಪಂಚಾಯ್ತಿಗಳ ಪೈಕಿ ಬೆರಳೆಣಿಕೆ ಪಂಚಾಯ್ತಿಗಳನ್ನು ಹೊರತುಪಡಿಸಿದರೆ, ಬೇರೆ ಪಂಚಾಯ್ತಿಗಳು ಸ್ವಚ್ಛತೆಯ ಜವಾಬ್ದಾರಿಯನ್ನು ಮರೆತುಬಿಟ್ಟಿವೆ. ಪ್ರತಿ ಪಂಚಾಯ್ತಿಯಲ್ಲಿ ಸ್ವಚ್ಛತಾ ನಿರ್ವಹಣೆಯ ವ್ಯವಸ್ಥೆ ಇದ್ದರೂ ಕಸದ ರಾಶಿಗಳಿಗೆ ಮುಕ್ತಿ ಸಿಗುತ್ತಿಲ್ಲ. ಸ್ವಚ್ಛ ಸಂಕೀರ್ಣ, ಘನತ್ಯಾಜ್ಯ ಘಟಕ, ಸ್ವಚ್ಛತಾ ವಾಹನ, ಪ್ರತ್ಯೇಕ ಕಾರ್ಯಪಡೆ, ಸಲಹಾ ಸಮಿತಿ, ಜಿಲ್ಲಾ ಮಟ್ಟದಲ್ಲಿ ನೀರು ನೈರ್ಮಲ್ಯ ಘಟಕ ಹೀಗೆ ಎಲ್ಲವೂ ಇದೆ, ಆದರೆ ಸ್ವಚ್ಛತೆಯೇ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಸ್ವಚ್ಛತೆಗೆ ಭಾಷ್ಯ ಬರೆಯುವ ನಿಟ್ಟಿನಲ್ಲಿ ಜನ ಶಿಕ್ಷಣ ಟ್ರಸ್ಟ್‌ ಈಗ ನ್ಯಾಯಾಂಗದ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಿದೆ. ...........

ಕಸ ನಿರ್ವಹಣೆ ವ್ಯವಸ್ಥೆ ಇದ್ದರೂ ಸ್ವಚ್ಛತೆ ಅರಿವು ಇಲ್ಲ

ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಜಿಲ್ಲಾ ಪಂಚಾಯ್ತಿ ತೆಂಕನಿಡಪದವಿನಲ್ಲಿ ಎಂಆರ್‌ಎಫ್‌ ಘಟಕ ರಚಿಸಿದೆ. ಈ ಘಟಕದಲ್ಲಿ ಮಂಗಳೂರು ತಾಲೂಕಿನ ಕಸ ಸಂಗ್ರಹಿಸಿ ಪ್ರತ್ಯೇಕಿಸಲಾಗುತ್ತಿದೆ. ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಕಸ ನಿರ್ವಹಣೆ ವ್ಯವಸ್ಥೆ ಇದೆ. ಗುತ್ತಿಗಾರು ಸೇರಿದಂತೆ ಕೆಲವೇ ಗ್ರಾಮ ಪಂಚಾಯ್ತಿಗಳು ಸಮರ್ಪಕ ಕಸ ವಿಲೇವಾರಿ ನಡೆಸುತ್ತಿವೆ. ಇಷ್ಟಾದರೂ ರಸ್ತೆ ಬದಿ, ಹಾದಿ ಬೀದಿ, ತೋಡು, ಕಾಡುಗಳಲ್ಲಿ ಎಗ್ಗಿಲ್ಲದೆ ಕಸ ಬಿಸಾಡುವುದು ನಡೆಯುತ್ತಲೇ ಇದೆ. ಸ್ವಚ್ಛತೆ ಅರಿವು ಇನ್ನೂ ಉಂಟಾಗುತ್ತಿಲ್ಲ ಎಂಬುದೇ ವಿಪರ್ಯಾಸ ಎನ್ನುತ್ತಿದೆ ಜನ ಶಿಕ್ಷಣ ಟ್ರಸ್ಟ್‌............

ಶಾಲಾ ಕಾಲೇಜುಗಳಲ್ಲಿ ಕಸ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಇನ್ನು ಧಾರ್ಮಿಕ ಕೇಂದ್ರಗಳಲ್ಲೂ ಇದೇ ರೀತಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗುವುದು. ಅಲ್ಲದೆ ಸಾರ್ವಜನಿಕ ಸ್ಥಳ, ಬಸ್‌ಗಳಲ್ಲೂ ಕಸ ಬಿಸಾಡದಂತೆ ತಿಳಿವಳಿಗೆ ನೀಡಲು ಸಂಬಂಧಿತರಿಗೆ ಪತ್ರ ಬರೆಯಲಾಗುವುದು.

-ಶೀನ ಶೆಟ್ಟಿ, ನಿರ್ದೇಶಕರು, ಜನ ಶಿಕ್ಷಣ ಟ್ರಸ್ಟ್‌ ದ.ಕ.