ಮನುಷ್ಯನ ದುರಾಸೆಗೆ ಪರಿಸರ ನಾಶ: ಡಾ.ಸಮದ್ ಕೊಟ್ಟೂರು

KannadaprabhaNewsNetwork | Published : Jul 8, 2024 12:31 AM

ಸಾರಾಂಶ

ಮನುಷ್ಯ ತನ್ನ ದುರಾಸೆಯಿಂದ ಮತ್ತು ಧಾರ್ಮಿಕ ಆಚರಣೆಗಳ ನೆಪದಲ್ಲಿ ಪರಿಸರ ಹಾಳು ಮಾಡಲಾಗುತ್ತಿದೆ.

ಮರಿಯಮ್ಮನಹಳ್ಳಿ: ಪ್ರತಿ ಜೀವ ಸಂಕುಲಕ್ಕೆ ಪರಿಸರ ಅಗತ್ಯ. ಪರಿಸರ ಮನುಷ್ಯನಿಗೆ ಸಾಕಷ್ಟು ಕೊಡುಗೆಗಳನ್ನು ನೀಡುವ ಮೂಲಕ ಭೂಮಿ ಮತ್ತು ಪರಿಸರಕ್ಕೆ ವಿಶೇಷ ಸ್ಥಾನಮಾನ ಇದೆ. ಪರಿಸರನ್ನು ಪ್ರತಿಯೊಬ್ಬರು ಉಳಿಸಿಕೊಂಡು ಗಿಡಮರಗಳನ್ನು ಹೆಚ್ಚಾಗಿ ಬೆಳಸಬೇಕಾಗಿದೆ ಎಂದು ಪರಿಸರ ಮತ್ತು ವನ್ಯಜೀವಿ ತಜ್ಞ ಡಾ. ಸಮದ್ ಕೊಟ್ಟೂರು ಹೇಳಿದರು.

ಇಲ್ಲಿನ ಜಿಟಿಟಿಸಿ ಕಾಲೇಜಿನಲ್ಲಿ ನಾರಾಯಣದೇವರ ಕೆರೆಯ ಎಸ್.ಎಲ್.ಆರ್.ಮೆಟಾಲಿಕ್ಸ್ ಕಂಪನಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಜಯನಗರ ಪ್ರದೇಶಿಕ ಕಚೇರಿ, ಶಾಲಾಶಿಕ್ಷಣ ಇಲಾಖೆಯೊಂದಿಗೆ ಹಮ್ಮಿಕೊಂಡ ವನ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿದರು.

ಆದರೆ ಮನುಷ್ಯ ತನ್ನ ದುರಾಸೆಯಿಂದ ಮತ್ತು ಧಾರ್ಮಿಕ ಆಚರಣೆಗಳ ನೆಪದಲ್ಲಿ ಪರಿಸರ ಹಾಳು ಮಾಡಲಾಗುತ್ತಿದೆ. ಪರಿಸರಕ್ಕೆ ಧಾರ್ಮಿಕ ಭೇದಗಳಿಲ್ಲ. ಆದರೆ ನಾವು ಇಂದು ಧಾರ್ಮಿಕ ಆಚರಣೆಗಳ ನೆಪದಲ್ಲಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ದೈವಿಸ್ವರೂಪದ ಗಂಗೆಯನ್ನು ಪೂಜಿಸುತ್ತೇವೆ, ಮತ್ತೆ ನಾವೇ ಮಲಿನಗೊಳಿಸುತ್ತೇವೆ. ಕೆಲವು ಆಚರಣೆಗಳಿಗಾಗಿ ರಾಶಿಗಟ್ಟಲೇ ಮರಗಳನ್ನು ಹನನ ಮಾಡಲಾಗುತ್ತದೆ. ಮನುಷ್ಯನ ವಿಕಾಸವಾದಂತೆ ಪರಿಸರದ ವಿನಾಶ ಆರಂಭವಾಗುತ್ತಿರುವುದಕ್ಕೆ ಆತಂಕ ಉಂಟಾಗುತ್ತದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಪರಿಸರ ಅಧಿಕಾರಿ ದೊಡ್ಡಶಾಣಯ್ಯ, ಎಸ್.ಎಲ್.ಆರ್. ಕಂಪನಿಯ ಉಪಾಧ್ಯಕ್ಷ ನವೀನ್ ಕುಮಾರ್, ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರುಳಿಧರ, ರಾಜ್ಯಮಟ್ಟದ ಪರಿಸರ ತಜ್ಞರ ಸಮಿತಿ ಸದಸ್ಯ ರವಿಕುಮಾರ ಯಾದವ್, ಪ.ಪಂ. ಮುಖ್ಯಾಧಿಕಾರಿ ಎಂ. ಖಾಜಾ, ಸ.ಪ್ರ.ದ.ಕಾಲೇಜ್ ಪ್ರಾಚಾರ್ಯ ಮಲ್ಲಿಕಾರ್ಜುನ, ಎಸ್‌ಎಸ್‌ಆರ್‌ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕೆ. ಎಸ್‌. ರಾಘವಾಂಕ ಸಭೆಯಲ್ಲಿ ಮಾತನಾಡಿದರು.

ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲ ಅಂಜನಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪರಿಸರ ದಿನಾಚರಣೆ ಅಂಗವಾಗಿ ಎಸ್‌ಎಲ್‌ಆರ್‌ ಕಂಪನಿಯವರು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್‌ಎಲ್‌ಆರ್‌ ಕಂಪನಿಯಿಂದ ಶಾಲಾ ಕಾಲೇಜು ಆವರಣದಲ್ಲಿ ಸುಮಾರು 600 ಸಸಿಗಳನ್ನು ನೆಡಲಾಯಿತು.

Share this article