ಚಂದಕವಾಡಿ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದಲ್ಲಿ 100 ಸಾಲುಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಪರಿಸರ ಪ್ರೇಮ ಎಲ್ಲರಲ್ಲೂ ರಕ್ತಗತವಾಗಿ ಬರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಹೇಳಿದರು. ತಾಲೂಕಿನ ಚಂದಕವಾಡಿ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಬೆಂಗಳೂರು ಪುಳಿಯೋಗರೆ ಹೌಸ್, ಈಶ್ವರಿ ಸೋಷಿಯಲ್ ಟ್ರಸ್ಟ್ ಸಹಯೋಗದಲ್ಲಿ 100 ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿ, ಪರಿಸರಪ್ರೇಮಿ ವೆಂಕಟೇಶ್ ಅವರು ಚಾಮರಾಜನಗರದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಮಹತ್ವವನ್ನು ಸಾರಿದ್ದಾರೆ. ಮಹದೇವಸ್ವಾಮಿ ಕೂಡ ೧೦೦ ಗಿಡಗಳನ್ನು ನಡೆಯುವ ಮೂಲಕ ಪರಿಸರ ಸಂಕರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೂ ಕೂಡ ವೆಂಕಟೇಶ್ ಪ್ರೇರಣಿಯಾಗಿದ್ದಾರೆ ಎಂದರು.ಗಿಡಮರಗಳಿಂದ ಮಳೆ ಬರುತ್ತದೆ. ನಮಗೆ ಕುಡಿಯಲು ನೀರು ಸಿಗುತ್ತದೆ. ನೀರಿನಿಂದ ಕರೆಂಟ್ ಉತ್ಪತ್ತಿಯಾಗುತ್ತದೆ. ಪ್ರಕೃತಿ ನಮಗೆ ಉತ್ತಮ ಆಮ್ಲಜನಕ ಕೊಟ್ಟು ನಾವು ಉಸಿರಾಡಲು ಕಾರಣವಾಗಿದೆ. ಉತ್ತಮ ಆರೋಗ್ಯಕ್ಕೆ ಪರಿಸರ ಬಹಳ ಮುಖ್ಯವಾಗಿದೆ ಎಂದರು. ಪ್ರಕೃತಿಯಲ್ಲಿ ಬೆಳೆಯುವ ಮರ, ಗಿಡಗಳು ಪ್ರಾಕೃತಿಗಾಗಿ ತ್ಯಾಗ ಮಾಡುತ್ತದೆ. ಯಾವುದೇ ಸ್ವಾರ್ಥವನ್ನು ನಿರೀಕ್ಷೆ ಮಾಡದೆ ಮನುಷ್ಯರಿಂದ ನಿರೀಕ್ಷೆ ಮಾಡದೆ ಅದು ತನ್ನಷ್ಟಕ್ಕೆ ತಾನೆ ಬೆಳೆದು ಗಿಡವಾಗಿ, ಮರವಾಗಿ, ಹೂ-ಹಣ್ಣುಗಳನ್ನು, ಉತ್ತಮ ಆಮ್ಲಜನಕವನ್ನು ಕೊಟ್ಟು ಪ್ರಯೋಜನ ನೀಡುತ್ತದೆ. ಪ್ರಾಣಿ-ಪಕ್ಷಿಗಳಿಗೆ ಆಶ್ರಯ ಕೊಡುತ್ತದೆ. ನಾವು ಮನುಷ್ಯರಾಗಿ ಮಾಡುತ್ತಿದ್ದೇವೆ, ಬುದ್ದಿವಂತಿಕೆ, ತಿಳುವಳಿಕೆ ಇದ್ದು ವ್ಯವಹಾರ ಮಾಡುತ್ತೇವೆ. ಆಗಾಗಿ ಮರ, ಗಿಡಗಳ ರೀತಿಯಲ್ಲಿ ಬೇರೆಯವರಿಗೆ ಪ್ರಯೋಜನವಾಗುವ ರೀತಿ ಬದುಕಬೇಕು. ಇಲ್ಲದಿದ್ದರೆ ಮನುಷ್ಯನ ಬದುಕಿಗೆ ಅರ್ಥವಿಲ್ಲ. ನಮ್ಮ ಬದುಕು ಬೇರೆಯವರಿಗೆ ಸಹಾಯ, ಪ್ರೇರಣೆ ಮಾಡುವ ರೀತಿಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಶಿಕ್ಷಕರು ಪಾಠ ಮಾಡುವ ಅವಧಿಯಲ್ಲಿ ಶಾಲಾ ಪಠ್ಯಗಳ ಒಟ್ಟಿಗೆ ಪ್ರಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದರು.ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಾಮಾನ್ಯ ಜ್ಞಾನ, ಕಾನೂನು ಜ್ಞಾನ ಅಳವಡಿಸಿಕೊಂಡರೆ ಮುಂದಿನ ಜೀವನದಲ್ಲಿ ಯಾವುದೇ ಆಪತ್ತು ಬರುವುದಿಲ್ಲ. ಬೆಂಕಿ ಬಿದ್ದ ಮೇಲೆ ಹಾರಿಸುವ ಬದಲು ಬೆಂಕಿ ಬೀಳದಂತೆ ನೋಡಿಕೊಳ್ಳಬೇಕು. ಆ ಒಂದು ವ್ಯಕಿತ್ವ, ಜೀವನದಮೌಲ್ಯ ನೈತಿಕತೆ, ಪ್ರಾಮಾಣಿಕತೆ, ಸರಳತೆಯನ್ನು ಶಾಲಾ ಹಂತದಲ್ಲಿ ಅಳವಡಿಸಿಕೊಂಡರೆ ನಿಮ್ಮ ಬದುಕಿನುದ್ದಕ್ಕೂ ಬಹಳ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಕೂಡ ಗಿಡನೆಟ್ಟು ಸಂರಕ್ಷಣೆ ಮಾಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಯುವ ಕೆಲಸ ಮಾಡಬೇಕು ಎಂದರು. ವಿದ್ಯಾರ್ಥಿಗಳು ಬಾಲ್ಯ ವಿವಾಹಕ್ಕೆ ಅವಕಾಶ ಮಾಡಿಕೊಡಬೇಡಿ, ಹಳ್ಳಿಗಳಲ್ಲಿ ಬಹಿಷ್ಕಾರ ತಡೆಯಬೇಕು. ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡಿ ಕಾನೂನು ಜಾಗೃತಿ ಮೂಡಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ, ಚಂದಕವಾಡಿ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಾಲುಗಿಡಗಳ ನೆಡುವ ಕಾರ್ಯಕ್ರಮ ವಿನೂತನವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ಆವರಣದಲ್ಲಿ ಸಸ್ಯ ಶಾಮಲ ಕಾರ್ಯಕ್ರಮದಲ್ಲಿ ೪ ಸಾವಿರ ಗಿಡಗಳ ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದು, ೩ ಸಾವಿರ ಗಿಡಗಳನ್ನು ನೆಟ್ಟು ಶಾಲೆಯ ಹಸಿರೀಕರಣ, ಅಂದ ಹೆಚ್ಚಿಸಿ ಶಾಲೆಯ ಉತ್ತಮ ವಾತಾವರಣ ನಿರ್ಮಿಸಲಾಗುತ್ತಿದೆ. ಮುಂದಿನ ವರ್ಷ ಮತ್ತಷ್ಟು ಗುರಿಯನ್ನು ಹೆಚ್ಚಿಸುವಂತೆ ಡಿಡಿಪಿಐಯವರ ನಿರ್ದೇಶನ ನೀಡಿದ್ದಾರೆ ಎಂದರು. ಶಾಲೆಯ ಹಳೆಯ ವಿದ್ಯಾರ್ಥಿ ಮಹದೇವಸ್ವಾಮಿ ಹಾಗೂ ಪರಿಸರ ಪ್ರೇಮಿ ವೆಂಕಟೇಶ್ ಶಾಲೆಯ ಆವರಣದಲ್ಲಿ ೧೦೦ ಸಾಲುಗಿಡಗಳನ್ನು ನೆಟ್ಟಿರುವುದಕ್ಕೆ ಇಲಾಖೆ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ಸರ್ಕಾರದ ಜತೆಗೆ ಶಾಲೆಯ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳ, ದಾನಿಗಳು, ಸಮುದಾಯ ಸಹಭಾಗಿತ್ಯ ಅವಶ್ಯಕವಾಗಿದೆ ಎಂದರು. ಗ್ರಾ.ಪಂ.ಅಧ್ಯಕ್ಷ ನಟರಾಜು ಅಧ್ಯಕ್ಷತೆ ವಹಿಸಿದ್ದರು. ಈಶ್ವರಿ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯದ ಮುಖ್ಯ ಸಂಚಾಲಕಿ ಬಿ.ಕೆ. ದಾನೇಶ್ವರಿ, ಎಸ್‌ಐ ಆರ್.ಶ್ರೀಕಾಂತ್, ಪ್ರಾಂಶುಪಾಲ ಎಚ್.ಎನ್.ಸ್ವಾಮಿ, ಉಪಪ್ರಾಂಶುಪಾಲ ಚಂದ್ರಶೇಖರ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್. ನಾಗಯ್ಯ, ಜಾನಪದ ಗಾಯಕ ಸಿ. ಎಂ. ನರಸಿಂಹಮೂರ್ತಿ, ಹೆಬ್ಬಸೂರು ಗಡ್ಡ ಮಹೇಶ್ ಸೋಮು, ನವೀನ, ಮೂರ್ತಿ ಹಾಜರಿದ್ದರು.