ಜೀವ ಸಂಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅತ್ಯವಶ್ಯಕ-ಚನ್ನಬಸಪ್ಪ ಕೊಂಬಳಿ

KannadaprabhaNewsNetwork | Updated : Jun 15 2024, 01:05 AM IST

ಸಾರಾಂಶ

ಜೀವ ಸಂಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಳಿ ಹೇಳಿದರು.

ರಾಣಿಬೆನ್ನೂರು: ಜೀವ ಸಂಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಳಿ ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಾಗರೀಕತೆ ಬೆಳೆದಂತೆ ಪರಿಸರದ ಮಾಲಿನ್ಯವು ಹೆಚ್ಚಾಗುತ್ತದೆ. ಆದ್ದರಿಂದ ಅತೀ ಹೆಚ್ಚು ಗಿಡಗಳನ್ನು ಬೆಳೆಸುವುದರ ಮೂಲಕ, ನೀರಿನ ಮೂಲವನ್ನು ಕಾಪಾಡುವುದರ ಮೂಲಕ ಪರಿಸರವನ್ನು ರಕ್ಷಣೆ ಮಾಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಬೇಕು ಎಂದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಮಾತನಾಡಿ, ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು ಇವೆಲ್ಲವೂ ಪರಿಸರದ ಕೊಡುಗೆ. ಇದನ್ನು ಜನರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಪರಿಸರದ ಸಂರಕ್ಷಣೆ ನಿರ್ಧಾರವಾಗುತ್ತದೆ. ನಮಗೆ ಇರುವುದೊಂದೆ ಭೂಮಿ ಅದರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು. ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಜೆ. ಎಸ್. ಹಿಳ್ಳಿ ಮಾತನಾಡಿ, ಉತ್ತಮ ಭವಿಷ್ಯಕ್ಕಾಗಿ ಪರಿಸರ ವ್ಯವಸ್ಥೆಗಳ ಬಗ್ಗೆ ಕಾಳಜಿ ವಹಿಸಿ ವಿಶ್ವದ ಜನರನ್ನು ಪ್ರೇರೇಪಿಸುವ ಸಲುವಾಗಿ ಪ್ರತಿವರ್ಷ ಜೂ.5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದರು. ವನಸಿರಿ ಸಂಸ್ಥೆಯ ಮುಖ್ಯಸ್ಥ ಎಸ್.ಡಿ.ಬಳಿಗಾರ ಮಾತನಾಡಿದರು. ಬುಡಪನಹಳ್ಳಿ ಗ್ರಾಮದ ಪ್ರಗತಿಪರ ರೈತ ಬಸವರಾಜ ಕೊಗಲೇರ ಸಮಗ್ರ ಕೃಷಿ ಪದ್ಧತಿಯಲ್ಲಿ ತಮ್ಮ ಅನುಭವನ್ನು ಹಂಚಿಕೊAಡರು. ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಿವಮೂರ್ತಿ ಡಿ, ಮುಂಗಾರು ಪೂರ್ವದಲ್ಲಿ ಕೃಷಿ ಬೆಳೆಗಳ ನಿರ್ವಹಣೆ, ಬೆಳೆ ಪರಿವರ್ತನೆ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕೆ ಬೆಳೆಗಳ ಆಯ್ಕೆ, ಸಾವಯವ ಪದ್ಧತಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್. ಎಮ್ ತಿಳಿಸಿದರು. ರೈತರಿಗೆ ಮೇವಿನ ಬೆಳೆಗಳ ಆಯ್ಕೆ ಮತ್ತು ಮುಂಗಾರಿನಲ್ಲಿ ಜಾನುವಾರುಗಳ ಆರೋಗ್ಯ ನಿರ್ವಹಣೆ ಕುರಿತು ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾಹಿತಿ ನೀಡಿದರು. ವಿದ್ಯುನ್ಮಾನ ಉಪಕರಣಗಳಿಂದ ವಿಷಾನಿಲ ಹಾಗೂ ಕೃಷಿ ಸಂಬAಧಿತ ಅಂತರಜಾಲ ಕುರಿತು ಹಿರಿಯ ತಾಂತ್ರಿಕ ಅಧಿಕಾರಿ ಚಂದ್ರಕಾಂತ ಕೊಟಬಾಗಿ ಮಾಹಿತಿ ನೀಡಿದರು. ತರಬೇತಿ ನಂತರ ಕೆವಿಕೆ, ಆವರಣದಲ್ಲಿ ವಿವಿಧ ಹಣ್ಣಿನ ಬೆಳೆಗಳ ಸುಮಾರು 100 ಗಿಡಗಳನ್ನು ರೈತರೊಂದಿಗೆ ನಾಟಿ ಮಾಡಲಾಯಿತು. ಕೃಷಿ ವಿಜ್ಞಾನ ಕೇಂದ್ರ, ವನಸಿರಿ ಸಂಸ್ಥೆಯ ಸಿಬ್ಬಂದಿ ಹಾಗೂ ಸುಮಾರು 50 ಕ್ಕೂ ಹೆಚ್ಚು ರೈತ / ರೈತ ಮಹಿಳೆಯರು ಪಾಲ್ಗೊಂಡಿದ್ದರು.

Share this article