ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರಕೃತಿ ನಮ್ಮೆಲ್ಲರ ಆರಾಧ್ಯ ದೈವ. ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಶುದ್ಧ ಗಾಳಿ, ಶುದ್ಧ ನೀರು ಮನುಷ್ಯನಿಗೆ ದೊರೆಯುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಮತ್ತು ಕೊಡಗು ಶಾಖಾಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಶ್ರೀ ಆದಿಚುಂಚನಗಿರಿ ಕಾಲೇಜು ಆವರಣದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿ?ತ್ ಭೂಮಿ ಉಳಿಸಿ ಆಂದೋಲನ ಸಮಿತಿ, ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಹಬ್ಬ ಗಿಡ ನೆಡುವ ಮಸಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನಿಗೆ ಆರೋಗ್ಯವಾಗಿ ಬಾಳಲು ಆತನು ವಾಸಿಸುವ ಪರಿಸರವು ನಿರ್ಮಲವಾಗಿರಬೇಕು. ಆದ್ದರಿಂದ ಪ್ರತಿಯೋಬ್ಬರು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಪರಿಸರದಲ್ಲಿ ಉತ್ತಮ ಆರೋಗ್ಯಯುತ ವಾತಾವರಣವನ್ನು ನಿರ್ಮಾಣ ಮಾಡಲು ಪ್ರತಿಯೋಬ್ಬರ ಒಂದೊಂದು ಸಸಿಯನ್ನು ನೆಡಲು ಮುಂದಾಗಬೇಕುಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಿದ್ದು, ಈ ಕುರಿತು ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ. ಗಿಡಮರಗಳನ್ನು ಉಳಿಸಿ ಬೆಳೆಸಿದರೆ ಉತ್ತಮ ವಾತಾವರಣ ಸಾಧ್ಯ. ಇದರಿಂದ ಸಕಾಲಕ್ಕೆ ಮಳೆ ಹಾಗೂ ಬೆಳೆ ಬರಲಿದೆ. ಶುದ್ಧ ವಾತಾವರಣಕ್ಕಾಗಿ ಪರಿಸರ ಸಂರಕ್ಷಣೆ ಅಗತ್ಯವಾಗಿದೆ ಪರಿಸರ ಸಂರಕ್ಷಣೆ ಮಾಡುವ ದಿಸೆಯಲ್ಲಿ ವಿದ್ಯಾರ್ಥಿಗಳು ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎನ್. ಬಾಲಕೃಷ್ಣ, ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಜೀವಿಸಲು ಬೇಕಾದ ಗಾಳಿ, ನೀರು ಮತ್ತು ಆಹಾರ ಪರಿಸರದ ಕೊಡುಗೆ. ಗಿಡ, ಮರಗಳು ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ನಮಗೆ ಆಮ್ಲಜನಕ ನೀಡುತ್ತವೆ. ಮರಗಳಲ್ಲಿ ಪರಿಸರ ಸಮತೋಲನಕ್ಕೆ ಸಹಕಾರಿ ಕಾಲಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಮರಗಳು ಅವಶ್ಯ. ಆದ್ದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.ಉತ್ತಮ ಪರಿಸರ ಮನುಕುಲದ ಸಂಪತ್ತು ಆದ್ದರಿಂದ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಗಿಡ, ಮರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು.ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ನಗರೀಕರಣದ ಪರಿಣಾಮವಾಗಿ ಪರಿಸರ ಹಾಗೂ ಗಿಡ ಮರಗಳು ನಾಶವಾಗುತ್ತಿವೆ. ಇದು ಪರಿಸರ ನಾಶವಲ್ಲ ಮನುಕುಲದ ನಾಶಕ್ಕೆ ದಾರಿಯಾಗುತ್ತದೆ ಎಂಬ ಅರಿವನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ. ಹಾಗಾಗಿ ಪರಿಸರ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು. ಪರಿಸರ ನಾಶದಿಂದ ಮಾನವ ಹಾಗೂ ಪ್ರಾಣಿ ಸಂಕುಲದ ನಾಶವಾಗಲಿದ್ದು, ಅಂತರ್ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಎಚ್.ಪಿ .ಮೋಹನ್ ಮಾತನಾಡಿದರು, ಪರಿಸರ ಪ್ರೇಮಿ ಚ.ನಾ.ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರಯ್ಯ ವಲಯ ಅರಣ್ಯಾಧಿಕಾರಿ ಜೆ.ಎಂ. ಪಲ್ಲವಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ವಿದಲ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಕುಮಾರ್, ಸುಬ್ಬುಸ್ವಾಮಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎ.ಎಲ್.ನಾಗೇಶ್, ಜಗದೀಶ್, ಹೂ.ವೀ. ಸಿದ್ದೇಶ್, ಮಹದೇವ್, ಎ.ಎಂ. ಜಯರಾಂ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.