ವಸಂತಕುಮಾರ್ ಕತಗಾಲ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಕಾರ್ಗಲ್ ನ ಭಟ್ಕಳ ವೃತ್ತದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ರಿಕ್ರಿಯೇಶನ್ ಕ್ಲಬ್‌ನ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
ಸಾರ್ವಜನಿಕರ ಅಹವಾಲು ಸಭೆಯಲ್ಲಿ ಸುಮಾರು 500 ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದರು. ಇವರಲ್ಲಿ ಅನೇಕರು, ಪ್ರಸ್ತಾವಿತ ಯೋಜನೆಯ ವಿವರ ಇಂಗ್ಲೀಷಿನಲ್ಲಿದ್ದು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ವಿತರಿಸಬೇಕಾಗಿತ್ತು. ಆದರೆ ಆ ಕೆಲಸವನ್ನು ಸಂಬಂಧಿಸಿದವರು ಮಾಡಲಿಲ್ಲ. ಇನ್ನಾದರೂ ಕನ್ನಡದಲ್ಲಿ ಅನುವಾದಿಸಿ ಸಾರ್ವಜನಿಕರಿಗೆ ತಲುಪಿಸಿ 45 ದಿನ ಸಭೆಯನ್ನು ಮುಂದೂಡಿ ಎಂಬ ಆಗ್ರಹ ಆರಂಭದಲ್ಲೇ ಕೇಳಿಬಂತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪ್ರಸ್ತಾವಿತ ಯೋಜನೆ ಕುರಿತು ವಿವರವಾದ ಪವರ್ ಪಾಯಿಂಟ್ ಪ್ರದರ್ಶಿಸಿ (ಪಿಪಿಟಿ) ಯೋಜನೆಯ ವಿವಿಧ ಆಯಾಮಗಳ ವಿವರ ನೀಡಿದರು. ಆದರೆ ಅದರಲ್ಲಿ ಅನೇಕ ಇಂಗ್ಲಿಷ್ ಭಾಷೆಯಲ್ಲಿರುವುದರಿಂದ ಸಾರ್ವಜನಿಕರಿಗೆ ಏನೂ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆಯಲ್ಲಿ ಹೇಳಿದ ವಿಷಯಗಳೆಲ್ಲ ಸುಳ್ಳಿನ ಕಂತೆಯಿಂದ ಕೂಡಿದೆ. ಸಾರ್ವಜನಿಕರಿಗೆ ಮೋಸ ಮಾಡುವ ಹಿಡನ್ ಅಜೆಂಡಾ ಇದರಲ್ಲಿ ಅಡಗಿದೆ. ಈ ಸಾರ್ವಜನಿಕ ಅಹವಾಲು ಸಭೆ ಎನ್ನುವುದು ಕೇವಲ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ. ದಟ್ಟಾರಣ್ಯ ಕತ್ತಲೆ ಕಾನು, ಐತಿಹಾಸಿಕ ಮಹತ್ವದ ಗೇರುಸೊಪ್ಪ, ನಗರಬಸ್ತಿಕೇರಿ ಮೊದಲಾದೆಡೆ ಇರುವ ಐತಿಹಾಸಿಕ ಸ್ಥಳಗಳು ಸಂಪೂರ್ಣ ನಾಶವಾಗುತ್ತದೆ ಎಂದು ಮಾತನಾಡಿದವರು ಯೋಜನೆ ವಿರುದ್ಧ ಹರಿಹಾಯ್ದರು.
ಮಾಜಿ ಶಾಸಕ ಹರತಾಳು ಹಾಲಪ್ಪ, ಪರಿಸರವಾದಿಗಳಾದ ಪ್ರೊ.ಕುಮಾರಸ್ವಾಮಿ, ಅಖಿಲೇಶ್ ಚಿಪ್ಪಳಿ, ಅನಂತ ಹೆಗಡೆ ಅಶೀಸರ, ಡಾ.ಎಲ್.ಕೆ. ಶ್ರೀಪತಿ, ಇತಿಹಾಸತಜ್ಞ ಡಾ.ಬಾಲಕೃಷ್ಣ ಹೆಗಡೆ, ಶಿವಾನಂದ ಕಳವೆ, ತಳಕಳಲೆ, ಹೆನ್ನಿ ಮೊದಲಾದ ಮುಳುಗಡೆ ಸಂತ್ರಸ್ತರು ಮಾತನಾಡಿ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಿದರು.
ಪರಿಸರವಾದಿ ಅನಂತ ಹೆಗಡೆ ಅಶೀಸರ, ಅಮೂಲ್ಯ ಜೀವ ವೈವಿಧ್ಯತೆಯ ನಾಶಕ್ಕೆ ಕಾರಣವಾಗುವ ಈ ಯೋಜನೆ ಜಾರಿಗೊಳಿಸಬಾರದು. ಶರಾವತಿ ಕಣಿವೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಯೋಜನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.