ಸಂವಿಧಾನದಡಿ ಸರ್ವ ಜನಾಂಗಕ್ಕೂ ಸಮಾನತೆ

KannadaprabhaNewsNetwork | Published : Jan 27, 2025 12:47 AM

ಸಾರಾಂಶ

ಕನಕಪುರ: ದೇಶದ ಸಂಪತ್ತು, ಸವಲತ್ತು ಎಲ್ಲಾ ಪ್ರಜೆಗಳಿಗೂ ಸಮಾನವಾಗಿ ಸಿಗಬೇಕೆಂಬ ಆಶಯದಿಂದ ಡಾ. ಬಿ.ಆರ್.ಅಂಬೇಡ್ಕರ್ ವಿಶ್ವದ ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಅತ್ಯುತ್ತಮ ಸಂವಿಧಾನ ರಚಿಸಿದರು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.

ಕನಕಪುರ: ದೇಶದ ಸಂಪತ್ತು, ಸವಲತ್ತು ಎಲ್ಲಾ ಪ್ರಜೆಗಳಿಗೂ ಸಮಾನವಾಗಿ ಸಿಗಬೇಕೆಂಬ ಆಶಯದಿಂದ ಡಾ. ಬಿ.ಆರ್.ಅಂಬೇಡ್ಕರ್ ವಿಶ್ವದ ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಅತ್ಯುತ್ತಮ ಸಂವಿಧಾನ ರಚಿಸಿದರು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ತಾಲೂಕಿನ ಜನತೆಗೆ ಶುಭಾಶಯ ಕೋರಿ ಮಾತನಾಡಿದ ಅವರು, ಸಂವಿಧಾನದಲ್ಲಿರುವ ನಿಯಮದಂತೆ ಸಮಾಜದಲ್ಲಿ ಎಲ್ಲರೂ ಸಮಾನರು. ದೇಶದ ಸಮಸ್ತ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ ಸಮಾನತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸವಲತ್ತು, ಸಮಾನತೆ ಸಿಗಬೇಕೆಂದು ಕನಸು ಕಂಡು ಸಂವಿಧಾನ ಜಾರಿಗೆ ತಂದ 1950 ಜ.26ರ ಸುದಿನವನ್ನು ದೇಶದಲ್ಲಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಶಾಲಾ ಮಕ್ಕಳು ಹಾಗೂ ಆರಕ್ಷಕ ಸಿಬ್ಬಂದಿಯ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ, ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲ ಮಹನೀಯರ ತ್ಯಾಗ, ಬಲಿದಾನದ ಪರಿಣಾಮ ದೇಶಕ್ಕೆ ಬ್ರಿಟಿಷ್ ರಿಂದ ಸ್ವಾತಂತ್ರ್ಯ ಲಭಿಸಿದೆ. ಹಲವು ಜಾತಿ, ಧರ್ಮ, ಆಚಾರ, ವಿಚಾರ, ಸಂಸ್ಕೃತಿಗಳನ್ನು ಒಳಗೊಂಡ 1600 ಭಾಷಾವಾರು ಪ್ರಾಂತ್ಯವನ್ನು ಒಗ್ಗೂಡಿಸುವ ಜವಾಬ್ದಾರಿ ಅಂದಿನ ನಾಯಕರ ಮೇಲಿದ್ದ ಪರಿಣಾಮ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಶ್ರೇಷ್ಠ ಹಾಗೂ ಬಲಿಷ್ಠ ಸಂವಿಧಾನ ದೇಶದ ಅಭಿವೃದ್ಧಿಗೆ

ನಾಂದಿ ಹಾಡಿದರು ಎಂದು ತಿಳಿಸಿದರು.

ರಾಜ್ಯದ ಉಪಮುಖ್ಯಮಂತ್ರಿ ಹಾಗೂ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಮಾರ್ಗದರ್ಶನ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ನೇತೃತ್ವ ದಲ್ಲಿ ತಾಲೂಕು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಬಡವರಿಗೆ ನಿವೇಶನ, ರಸ್ತೆ ಅಗಲೀಕರಣ, ಕೆರೆಗಳು ತುಂಬಿಸುವ, ಅಂತರ್ಜಲ ವೃದ್ಧಿ ಕಡೆಗೆ ಗಮನ ಹರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮಾದರಿ ತಾಲೂಕಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.

ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು, ತಾಪಂ ಇಒ ಭೈರಪ್ಪ, ನಗರಸಭಾ ಪೌರಾಯುಕ್ತ ಮಹದೇವ್, ನಗರಸಭಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮಾಜಿ ಅಧ್ಯಕ್ಷ ಕೆ.ಟಿ.ಕಿರಣ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಂದೀಶ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಬಿಇಒ ಮತ್ತೀಗೌಡ, ತಾಲೂಕು ದೈಹಿಕ ಪರಿವೀಕ್ಷಕ ಸತೀಶ್, ಸೇವಾ ದಳದ ಸದಸ್ಯ ಆನಂದ್ ಪೈ, ಮುಖಂಡರಾದ ಕೆ.ಎನ್.ದಿಲೀಪ್ ಇತರರು ಪಾಲ್ಗೊಂಡಿದ್ದರು.

(ಫೋಟೊ ಕ್ಯಾಪ್ಷನ್‌)

ಕನಕಪುರ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ ಮಕ್ಕಳನ್ನು ಗೌರವಿಸಲಾಯಿತು.

Share this article