ರಕ್ತದಾನ ಮಾಡುದ ಅಮೃತಕ್ಕೆ ಸಮಾನ

KannadaprabhaNewsNetwork | Published : Jun 15, 2024 1:03 AM

ಸಾರಾಂಶ

ಪ್ರತಿಯೊಬ್ಬ ಮನುಷ್ಯನಿಗೆ ರಕ್ತ ಅಮೃತಕ್ಕಿಂತ ದೊಡ್ಡದು. ಜನರ ಜೀವ ಉಳಿಸುವಲ್ಲಿ ರಕ್ತ ಶ್ರೇಷ್ಠವಾಗುತ್ತದೆ ಎಂದು ಬಾಡಗಂಡಿಯ ಎಸ್‌.ಆರ್.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎನ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಪ್ರತಿಯೊಬ್ಬ ಮನುಷ್ಯನಿಗೆ ರಕ್ತ ಅಮೃತಕ್ಕಿಂತ ದೊಡ್ಡದು. ಜನರ ಜೀವ ಉಳಿಸುವಲ್ಲಿ ರಕ್ತ ಶ್ರೇಷ್ಠವಾಗುತ್ತದೆ ಎಂದು ಬಾಡಗಂಡಿಯ ಎಸ್‌.ಆರ್.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎನ್.ಪಾಟೀಲ ಹೇಳಿದರು.

ಬಾಡಗಂಡಿಯ ಎಸ್‌.ಆರ್‌.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ಇನ್ನಿತರೆ ಮಾರಕ ಕಾಯಿಲೆಗಳ ಸಂದರ್ಭಗಳನ್ನು ಎದುರಿಸುವಾಗ, ರಕ್ತ ವರ್ಗಾವಣೆಯು ಅವರ ಜೀವ ಉಳಿಸುವಲ್ಲಿ ರಕ್ತದಾನ ಸಹಾಯಕ್ಕೆ ಬರುತ್ತದೆ. ಹೀಗಾಗಿ ರಕ್ತ ಅಮೃತಕ್ಕೆ ಸಮಾನದ್ದಾಗಿದ್ದು ರಕ್ತದಾನ ಮಹಾದಾನಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು.ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ, ಆ ರಕ್ತವು ಮೂರು ಜೀವಗಳನ್ನು ಉಳಿಸಬಹುದು. ಒಂದು ಕ್ಷಣ ಅದರ ಬಗ್ಗೆ ಯೋಚಿಸಬೇಕಿದೆ. ನಿಮ್ಮ ರಕ್ತ ದಾನದಿಂದ ಮೂರು ಜನರನ್ನು ಮಾರಣಾಂತಿಕ ಸನ್ನಿವೇಶಗಳ ಹಿಡಿತದಿಂದ ರಕ್ಷಿಸುತ್ತದೆ. ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಅವರಲ್ಲಿ ಮತ್ತೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಜತೆಗೆ ಅವರಲ್ಲಿ ಚೈತನ್ಯ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಲ್ಲಿಯೂ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.ಎಸ್‌.ಆರ್.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಧರ್ಮರಾಯ ಇಂಗಳೆ ಸ್ವಯಂ ರಕ್ತದಾನ ಮಾಡಿ ಮಾತನಾಡಿ, ರಕ್ತವು ಅಪಘಾತ ಹಾಗೂ ಇತರೆ ಕಾಯಿಲೆಗೆ ಒಳ್ಳಪಟ್ಟವರಿಗೆ ದಾನ ಮಾಡಿದರೆ, ಒಂದು ಜೀವಕ್ಕೆ ಸಂಜೀವಿನಿಯಾಗಲಿದೆ ಎಂದರು. ೧೮ ರಿಂದ ೬೫ ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ಕನಿಷ್ಠ ೪೫ ಕೆ.ಜಿ. ದೇಹದ ತೂಕ ಇರುವವರು ೩೫೦ ಎಂಎಲ್ ಹಾಗೂ ೫೫ ಕೆ.ಜಿ.ಗಿಂತ ಅಧಿಕ ತೂಕ ಇರುವವರು ೪೫೦ ಎಂಎಲ್ ರಕ್ತದಾನ ಮಾಡಬಹುದು. ದಾನಿಗಳ ಹಿಮೋಗ್ಲೋಬಿನ್ (ಎಚ್‌ಬಿ) ಪ್ರಮಾಣ ಕನಿಷ್ಠ ೧೨.೫ ಇರಬೇಕು. ಒಂದು ಯೂನಿಟ್ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದು ಎಂದರು.ಅನಾರೋಗ್ಯ ಹೊಂದಿರುವವರು, ನಿಯಮಿತ ಹಾಗೂ ನಿರಂತರ ಔಷಧ ಸೇವಿಸುವವರು, ಎಚ್‌ಐವಿ/ಏಡ್ಸ್, ಕ್ಯಾನ್ಸರ್ ರೋಗಿಗಳು, ಹೃದ್ರೋಗಿಗಳು, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು, ಗರ್ಭಿಣಿಯರು, ಹೆಪಟೈಟಿಸ್ ಬಿ ಸೋಂಕಿತರು, ಸಾಂಕ್ರಾಮಿಕ ರೋಗಿಗಳು, ಮಾದಕ ವ್ಯಸನಿಗಳು, ಕಡಿಮೆ ತೂಕ ಹೊಂದಿರುವವರು ಹಾಗೂ ಹಿಮೋಗ್ಲೋಬಿನ್ ಕೊರತೆ ಇರುವವರು ರಕ್ತದಾನ ಮಾಡುವಂತಿಲ್ಲ ಎಂದು ವಿವರವಾಗಿ ತಿಳಿಸಿಕೊಟ್ಟರು.ಇದೇ ಸಂದರ್ಭದಲ್ಲಿ ೩೦ ಹೆಚ್ವು ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕ ದಯಾನಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ವಿಜಯಾನಂದ ಹಳ್ಳಿ, ವೈದ್ಯಕೀಯ ನಿರ್ದೇಶಕ ಡಾ.ರಾಘವೇಂದ್ರ ಪಾಟೀಲ, ಪ್ರವೀಣ ಕಂಠಿ, ರಕ್ತನಿಧಿ ಕೇಂದ್ರದ ತಜ್ಞರಾದ ಡಾ.ಸಂತೋಷ ಗುಡಘಂಠಿ, ಆರೈಕೆ ಅಧೀಕ್ಷಕಿ ಲೀಲಾ ದನೋಡೆ, ತಾಂತ್ರಿಕ ರಕ್ತನಿಧಿ ಕೇಂದ್ರದ ಮೇಲ್ವಿಚಾರಕ ಪ್ರವೀಣ ಮುಡಾಸದ, ಲ್ಯಾಬ್ ತಾಂತ್ರಿಕ ಮೇಲ್ವಿಚಾರಕ ರವಿಂದ್ರ ಘಂಠಿ ಮತ್ತು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ರಕ್ತದಾನ ಜನರ ಜೀವ ಉಳಿಸುತ್ತದೆ. ಇದರೊಟ್ಟಿಗೆ ರಕ್ತದಾನ ಮಾಡಿದವರಲ್ಲಿಯೂ ಆರೋಗ್ಯ ವೃದ್ಧಿಯನ್ನೂ ಮಾಡುತ್ತದೆ. ರಕ್ತದಾನ ಮಾಡುವುದು ಅಮೃತಕ್ಕೆ ಸಮಾನವಾದ ಕೆಲಸವಾಗಿದೆ.

- ಎಂ.ಎನ್‌.ಪಾಟೀಲ,

ಎಸ್‌.ಆರ್.ಪಾಟೀಲ ವೈದ್ಯಕೀಯ ಕಾಲೇಜು ಕಾರ್ಯದರ್ಶಿ

Share this article