ಆಧುನಿಕ ತಂತ್ರಜ್ಞಾನ ಬಳಸಿ ಭಯೋತ್ಪಾದನೆ, ಭ್ರಷ್ಟಾಚಾರ ನಿರ್ಮೂಲನೆ

KannadaprabhaNewsNetwork | Updated : Jun 21 2024, 11:17 AM IST

ಸಾರಾಂಶ

ಡಿಜಿಟಲ್‌ ಪರಿಹಾರಗಳಿಗೆ ಹೊಂದಿಕೊಳ್ಳುವಂತೆ ಕಾನೂನನ್ನು ರೂಪಿಸಿಕೊಳ್ಳಬೇಕು. ಇವುಗಳ ಬಗ್ಗೆ ಮುಂದಡಿ ಇರಿಸಲು ಬ್ರಿಕ್ಸ್‌ ರಾಜತಾಂತ್ರಿಕ ಶೃಂಗ ಸಭೆ ಉತ್ತಮ ವೇದಿಕೆಯಾಗಿದೆ ಎಂದು ನಟರಾಜ್‌ ಅಭಿಪ್ರಾಯಪಟ್ಟರು.

 ಮಂಗಳೂರು :  (ರಷ್ಯಾ ವರದಿ) ಆಧುನಿಕ ಡಿಜಿಟಲ್‌ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ. ಈ ಬಗ್ಗೆ ತನ್ನ ಸಹೋದರ(ಬ್ರಿಕ್ಸ್‌) ರಾಷ್ಟ್ರಗಳ ಸಹಕಾರದಲ್ಲಿ ಮುನ್ನಡೆಯುವುದಾಗಿ ಭಾರತದ ರಾಜತಾಂತ್ರಿಕ ನಿಯೋಗ ಬ್ರಿಕ್ಸ್‌ ಶೃಂಗದಲ್ಲಿ ಒತ್ತಿ ಹೇಳಿದೆ. ಇದೇ ವೇಳೆ ಭಾರತ ಶಾಂತಿಪ್ರಿಯ ರಾಷ್ಟ್ರ. ಯಾವುದೇ ರೀತಿಯ ಅಪರಾಧವನ್ನು ಸಹಿಸುವುದಿಲ್ಲ, ವಸುಧೈವ ಕುಟುಂಬ ಎಂಬ ಪರಿಕಲ್ಪನೆಯಲ್ಲಿ ಜೀವನ ಪದ್ಧತಿ ನಡೆಯುತ್ತಿದೆ ಎಂಬುದನ್ನು ಬ್ರಿಕ್ಸ್‌ ಸಮುದಾಯಕ್ಕೆ ಸ್ಪಷ್ಟಪಡಿಸಿದೆ.ರಿಪಬ್ಲಿಕ್‌ ಆಫ್ ರಷ್ಯಾದ ಸೈಂಟ್‌ ಪೀಟರ್ಸ್‌ ಬರ್ಗ್‌ನಲ್ಲಿ ಬುಧವಾರ ಮುಕ್ತಾಯಗೊಂಡ ಎರಡು ದಿನಗಳ ಬ್ರಿಕ್ಸ್‌ ಪ್ರಾಸಿಕ್ಯೂಷನ್‌ ಸರ್ವಿಸಸ್‌ ಮುಖ್ಯಸ್ಥರ ಶೃಂಗ ಸಭೆಯಲ್ಲಿ ಭಾರತ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬ್ರಿಕ್ಸ್‌ ರಾಷ್ಟ್ರಗಳ ರಾಜತಾಂತ್ರಿಕರ ಜೊತೆಗಿನ ದ್ವಿಪಕ್ಷೀಯ ಒಡಂಬಡಿಕೆ ವೇಳೆ ಭಾರತದ ರಾಜತಾಂತ್ರಿಕ ನಿಯೋಗದ ನೇತೃತ್ವ ವಹಿಸಿದ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಈ ವಿಷಯ ಮಂಡಿಸಿದ್ದಾರೆ. ಭಾರತದ ಈ ಪ್ರಸ್ತಾಪಕ್ಕೆ ಬ್ರಿಕ್ಸ್‌ ರಾಷ್ಟ್ರಗಳು ಸಹಮತ ಸೂಚಿಸಿವೆ.

ಕ್ರಿಮಿನಲ್ಸ್‌ ಪತ್ತೆಗೆ ಡಿಜಿಟಲ್‌ ನೆರವು: ಅಪರಾಧಿಗಳನ್ನು ಪತ್ತೆಮಾಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ನೆರವಿಗೆ ಡಿಜಿಟಲ್‌ ವ್ಯವಸ್ಥೆ ಪೂರಕವಾಗಿದೆ. ಡಿಜಿಟಲ್‌ ಪರಿಹಾರಗಳಿಗೆ ಹೊಂದಿಕೊಳ್ಳುವಂತೆ ಕಾನೂನನ್ನು ರೂಪಿಸಿಕೊಳ್ಳಬೇಕು. ಇವುಗಳ ಬಗ್ಗೆ ಮುಂದಡಿ ಇರಿಸಲು ಬ್ರಿಕ್ಸ್‌ ರಾಜತಾಂತ್ರಿಕ ಶೃಂಗ ಸಭೆ ಉತ್ತಮ ವೇದಿಕೆಯಾಗಿದೆ ಎಂದು ನಟರಾಜ್‌ ಅಭಿಪ್ರಾಯಪಟ್ಟರು.

ಕೋರ್ಟ್‌ಗಳಲ್ಲಿ ಪರಿಣಾಮಕಾರಿ ತಂತ್ರಜ್ಞಾನ: ಭಾರತದ ಕಾನೂನು ಜಾರಿಯಲ್ಲಿ ಆಧುನಿಕ ಡಿಜಿಟಲ್‌ ವ್ಯವಸ್ಥೆ ಕುರಿತು ವಿಚಾರ ಮಂಡಿಸಿದ ಕೆ.ಎಂ.ನಟರಾಜ್‌, ಹಲವು ದಶಕಗಳಿಂದ ಭಾರತದಲ್ಲಿ ಕಾನೂನು ವ್ಯವಸ್ಥೆ ಗಮನಾರ್ಹ ತಾಂತ್ರಿಕ ಪ್ರಗತಿ ಕಂಡಿದೆ. ಡಿಜಿಟಲ್‌ ಡೇಟಾಬೇಸ್‌ಗಳ ಪರಿಚಯದಿಂದ ವಿಡಿಯೋ ಕಾನ್ಫರೆನ್ಸ್‌ನ ಪರಿಣಾಮಕಾರಿ ಅನುಷ್ಠಾನವರೆಗೆ ಪ್ರಗತಿಯಾಗಿದೆ. ಅಲ್ಲದೆ ನ್ಯಾಯಾಂಗದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಸುಧಾರಣೆಗೆ ಕಾರಣವಾಗಿದೆ ಎಂದಿದ್ದಾರೆ.

ಮೊಕದ್ದಮೆಗಳ ತೀರ್ಪಿಗೆ ದಾವೆದಾರರು ಮತ್ತು ವಕೀಲರು ಕೋರ್ಟ್‌ಗೆ ಭೌತಿಕವಾಗಿ ಹಾಜರಾಗಬೇಕಿತ್ತು. ಕೋವಿಡ್‌ ನಂತರ ದೇಶದ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ನ್ನು ಅನುಷ್ಠಾನಗೊಳಿಸಲಾಗಿದೆ. ಇ ಫೈಲಿಂಗ್‌ ವ್ಯವಸ್ಥೆ ಪ್ರಕರಣದ ದಾಖಲೆಗಳನ್ನು ಡಿಜಿಟಲ್‌ ಮಾಧ್ಯಮದಲ್ಲಿ ಸಲ್ಲಿಸಬಹುದು. ಇದು ಕಾಗದವನ್ನು ಉಳಿಸುತ್ತದೆ ಅಲ್ಲದೆ, ಇಂಗಾಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಪ್ರತಿಪಾದಿಸಿದರು.

Share this article