ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆಗೆ ಈರಣ್ಣ ಕಡಾಡಿ ಒತ್ತಾಯ

KannadaprabhaNewsNetwork |  
Published : Aug 05, 2024, 12:33 AM IST
ರಾಜ್ಯಸಭಾಸದಸ್ಯ ಈರಣ್ಣ ಕಡಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಭೀಕರ‌ ಮಳೆಗೆ ಜಿಲ್ಲೆಯಲ್ಲಿ ಪ್ರವಾಹದ ಬಂದರೂ ಸಂತ್ರಸ್ತರ ನೆರವಿಗೆ ಸರ್ಕಾರ ಬಂದಿಲ್ಲ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಬೇಕು ಎಂದು ರಾಜಸಭಾ ಸದಸ್ಯ ಈರಣ್ಣಾ ಕಡಾಡಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪಶ್ಚಿಮಘಟದಲ್ಲಿ ಸುರಿಯುತ್ತಿರುವ ಭೀಕರ‌ ಮಳೆಗೆ ಜಿಲ್ಲೆಯಲ್ಲಿ ಪ್ರವಾಹದ ಬಂದರೂ ಸಂತ್ರಸ್ತರ ನೆರವಿಗೆ ಸರ್ಕಾರ ಬಂದಿಲ್ಲ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಬೇಕು ಎಂದು ರಾಜಸಭಾ ಸದಸ್ಯ ಈರಣ್ಣಾ ಕಡಾಡಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ಮತು ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದರು.ಜಿಲ್ಲೆಯಲ್ಲಿ ವಾಡಿಕೆ ಮಳೆಯ ಪ್ರಮಾಣ 354 ಮಿಮೀ ಆಗಬೇಕಿತ್ತು. ಆದರೆ. ಪ್ರಸ್ತುತ 578 ಮಿ.ಮೀ ಮಳೆಯಾಗಿದೆ. ಹೆಚ್ಚುವರಿ 63 ಮಿ.ಮೀ ಆಗಿದೆ. ಮಹಾರಾಷ್ಟ್ರದ ರಾಜಾಪುರ ಮತ್ತು ಕೊಯ್ನಾ ಜಲಾಶಯಗಳು ಭರ್ತಿಯಾಗಿದ್ದು, ಸುಮಾರು 2 ಲಕ್ಷ 87 ಸಾವಿರ ಕ್ಯುಸೆಕ್‍ಗಿಂತ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ. ಘಟಪ್ರಭಾ ನದಿಗೂ ಕೂಡ 50 ಸಾವಿರ ಕ್ಯುಸೆಕ್‍ಗಿಂತ ಹೆಚ್ಚು ನೀರು ಹರಿದು ಬರುತ್ತಿರುವ ಪರಿಣಾಮವಾಗಿ ಈ ಎರಡು ನದಿಗಳ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಘಟಪ್ರಭಾ ನದಿಗೆ ಅತಿ ಹೆಚ್ಚು ಜೂ.28 ರಂದು 84 ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ. ಕೃಷ್ಣಾ ನದಿಗೆ ಅತಿ ಹೆಚ್ಚು 2 ಲಕ್ಷ 97 ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ ಎಂದರು.ಈ ಎರಡು ನದಿಗಳ ಪ್ರವಾಹದಲ್ಲಿ 232 ಗ್ರಾಮಗಳು ಜಲಾವೃತಗೊಂಡಿವೆ, 47 ಸೇತುವೆಗಳು ಮುಳುಗಡೆಯಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 45 ಕಾಳಜಿ ಕೇಂದ್ರಗಳಲ್ಲಿ 4764ಕ್ಕೂ ಅಧಿಕ ಕುಟುಂಬಗಳ 12455ಕ್ಕೂ ಅಧಿಕ ಸಂತ್ರಸ್ತರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. 5934 ಜನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಅವರಿಗೆ ಸರ್ಕಾರ ನೆರವು ನೀಡಬೇಕಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 6 ಜನರ ಜೀವಹಾನಿಯಾಗಿದ್ದು, 10ಕ್ಕೂ ಹೆಚ್ಚು ದನಕರುಗಳು ಮೃತಪಟ್ಟಿವೆ. 41700 ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಹಾಗೂ 80 ಹೆಕ್ಟೇರ್‌ಗಿಂತ ಹೆಚ್ಚು ತೋಟಗಾರಿಕೆ ಬೆಳೆಹಾನಿಯಾಗಿದೆ. ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ 2014 ರಿಂದ ಕೇಂದ್ರಸರ್ಕಾರ ಮುಂಚಿತವಾಗಿ ವಿಪತ್ತು ಎಚ್ಚರಿಕೆ ಮಾಹಿತಿ ನೀಡುವ ವ್ಯವಸ್ಥೆಗೆ ₹2000 ಕೋಟಿ ಖರ್ಚು ಮಾಡಿತ್ತ. ವಿಶ್ವದ ನಾಲ್ಕು ದೇಶಗಳು ಮಾತ್ರ ಏಳು ದಿನಗಳ ಮುಂಚಿತವಾಗಿ ವಿಪತ್ತು ಎಚ್ಚರಿಕೆ ನೀಡುತ್ತವೆ, ಅದರಲ್ಲಿ ಭಾರತವೂ ಒಂದು. ವಿಪತ್ತು ಸಂಭವಿಸುವ ಏಳು ದಿನಗಳ ಮೊದಲು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕಳುಹಿಸಲಾಗಿದೆ ಎಂದರು.

ಬೆಳಗಾವಿ ಜಿಲ್ಲೆ ದೊಡ್ಡ ವ್ಯಾಪ್ತಿಹೊಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ನೂತನವಾಗಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ನಿಗಮದ ಮಾಜಿ ಅಧ್ಯಕ್ಷ ಮುಕ್ತಾರ್ ಪಠಾಣ್, ಭಾ.ಜ.ಪಾ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್ ಎಸ್ ಸಿದ್ದನಗೌಡರ್, ಸಚಿನ್ ಕಡಿ, ಸುಭಾಷ್ ಸಣ್ಣವೀರಪ್ಪನವರ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ