ಕನ್ನಡಪ್ರಭ ವಾರ್ತೆ ಸಾಗರ
ಹಿಂದುತ್ವದ ಸಿದ್ಧಾಂತದಡಿಯಲ್ಲಿಯೇ ಬೆಳೆದು ಬಂದ ಈಶ್ವರಪ್ಪ ಸ್ಪರ್ಧೆ ಹಿಂದೂಗಳಲ್ಲಿ ಉತ್ಸಾಹ ತಂದಿದೆ. ಲೋಕಸಭಾ ಕ್ಷೇತ್ರದ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ರಾಷ್ಟ್ರಭಕ್ತ ಬಳಗದ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಕುಂಠೆ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಖರ ಹಿಂದುತ್ವವಾದಿಯಾಗಿರುವ ಕೆ.ಎಸ್. ಈಶ್ವರಪ್ಪ ಗೆಲುವು ಖಚಿತ. ನಮ್ಮ ಬಳಗವು ಈಶ್ವರಪ್ಪನವರ ಗೆಲುವಿಗೆ ಪಣತೊಟ್ಟು ಕೆಲಸ ಮಾಡುತ್ತದೆ ಎಂದು ಹೇಳಿದರು.
ಕ್ಷೇತ್ರ ವ್ಯಾಪ್ತಿಯ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ರಾಷ್ಟ್ರಭಕ್ತ ಬಳಗದ ಸದಸ್ಯರು ಈಶ್ವರಪ್ಪ ಪರ ಪ್ರಚಾರ ಪ್ರಾರಂಭ ಮಾಡಿದ್ದಾರೆ. ದೇಶದಲ್ಲಿ ಹಿಂದುತ್ವದ ಪರವಾಗಿ ಇರುವ ಯಾವುದಾದರೂ ಪಕ್ಷ ಇದ್ದರೆ ಅದು ಬಿಜೆಪಿ ಎನ್ನುವುದಾಗಿತ್ತು. ಆದರೆ ಕಾಲ ಬದಲಾದಂತಿದೆ. ಹೀಗಾಗಿ ನಾವೆಲ್ಲ ಒಂದಾಗಬೇಕಿದೆ. ಹಿಂದುತ್ವವಾದಿಗಳನ್ನು ಬದಿಗೆ ಸರಿಸುವ, ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದ್ದು, ಹಿಂದುತ್ವದ ಮೂಲ ಉಳಿಸಿಕೊಳ್ಳಲು ಈಶ್ವರಪ್ಪರ ಗೆಲುವು ಅಗತ್ಯವಾಗಿದೆ ಎಂದು ಹೇಳಿದರು.ಇಷ್ಟು ದಿನ ಮೋದಿಗಾಗಿ ಕೆಲಸ ಮಾಡುತ್ತಿದ್ದ ನಮ್ಮ ತಂಡವು ರಾಷ್ಟಭಕ್ತ ಬಳಗದಲ್ಲಿ ವಿಲೀನಗೊಳಿಸಲಾಗಿದೆ. ಈಶ್ವರಪ್ಪ ಗೆದ್ದ ನಂತರ ಅವರು ಪುನಃ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದು, ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವ ಸಂಕಲ್ಪ ಕೈಗೊಂಡಿದ್ದಾರೆ ಎಂದರು.
ಏ. ೬ ರಂದು ಬೃಹತ್ ಸಮಾವೇಶ:ಬಳಗದ ವಜ್ರಮುನಿ ಎಚ್. ಜಿ. ಮಾತನಾಡಿ, ಏ. 6 ರಂದು ಬೆಳಗ್ಗೆ 10-30 ಕ್ಕೆ ಭದ್ರಕಾಳಿ ಸಭಾಭವನದಲ್ಲಿ ರಾಷ್ಟ್ರಭಕ್ತ ಬಳಗದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಲ್ಲೂಕಿನ ಬೇರೆಬೇರೆ ಭಾಗದಿಂದ ಆರರಿಂದ ಎಂಟು ಸಾವಿರ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಲಕ್ಷಾಂತರ ಮತದಾರರು ಈಶ್ವರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಅದರಂತೆ ಸತೀಶ್ ಗೌಡ, ಕಸ್ತೂರಿ ಸಾಗರ್, ರಜನೀಶ್ ಹಕ್ರೆ, ನಾಗರಾಜ್ ಮೊಗವೀರ, ಉಮೇಶ್ ಚೌಟಗಿ, ಅಣ್ಣಪ್ಪ, ಸವಿತಾ ಗೋಪಾಲ್, ರವಿ ಬಿಳಿಸಿರಿ, ಗೋಪಾಲ, ಪ್ರಶಾಂತ ಹೆಗಡೆ, ಗೌರಿಶಂಕರ್, ಅರುಣಾ ವಿನಾಯಕ್ ಇನ್ನಿತರರು ಹಾಜರಿದ್ದರು.