ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪಕ್ಷ ನಿಷ್ಠ ರಘುಪತಿ ಭಟ್‌ಗೆ ಮೋಸ:
ಬಿಜೆಪಿ ಅಂದರೆ ಈಶ್ವರಪ್ಪ, ಈಶ್ವರಪ್ಪ ಅಂದರೆ ಪಕ್ಷ ಎನ್ನುತ್ತಿದ್ದ ಸಂದರ್ಭದಲ್ಲೇ ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಅದೇ ರೀತಿ ನಾನು ಸತ್ತರೆ ನನ್ನ ಎದೆ ಮೇಲೆ ಬಿಜೆಪಿ ಬಾವುಟ ಇರಬೇಕು ಎಂದು ಹೇಳುವ ರಘುಪತಿ ಭಟ್ ಅವರಿಗೂ ಪಕ್ಷದಲ್ಲಿ ಮೋಸವಾಯಿತು ಎಂದು ಈಶ್ವರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಿದಾಗ ರಾಷ್ಟ್ರೀಯ ನಾಯಕರ ಕರೆ ಬಂದಿತ್ತು. ಆದರೆ ಉಡುಪಿಯಲ್ಲಿ ರಘುಪತಿ ಭಟ್ಟರಿಗೆ ಕರೆ ಕೂಡ ಬರಲಿಲ್ಲ. ಟಿಕೆಟ್ ಘೋಷಣೆಗೆ ಎರಡು ದಿನ ಇರುವಾಗ ನಿನಗೇ ಟಿಕೆಟ್ ಎಂದು ಭಟ್‌ರಿಗೆ ಹೇಳಿದವರು ಕೊನೇ ಗಳಿಗೆಯಲ್ಲಿ ಮೋಸ ಮಾಡಿದರು. ಪಕ್ಷ ಎಂದರೆ ತಾವು ಮಾತ್ರ, ತಮ್ಮ ಕುಟುಂಬ ಮಾತ್ರ. ತಮ್ಮ ನಿರ್ಧಾರವೇ ಪಕ್ಷದ ನಿರ್ಧಾರ. ಹಿಂಬಾಲಕರಿಗೆ ಮಾತ್ರ ಎಲ್ಲ ಅವಕಾಶ ಎಂದು ಅಂದುಕೊಂಡವರಿಗೆ ಈ ಮೂಲಕ ಪಾಠ ಕಲಿಸಬೇಕೆಂದರು.
ನಮ್ಮ ಸ್ಪರ್ಧೆಯಿಂದ ಎಷ್ಟರಮಟ್ಟಿಗೆ ಪಕ್ಷ ಶುದ್ಧೀಕರಣ ಆಗುತ್ತದೆ ಎಂಬುದು ಲೋಕಸಭೆ, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗುತ್ತದೆ. ಚುನಾವಣೆ ಮುಗಿಯುತ್ತಿದ್ದಂತೆ ರಘುಪತಿಗೆ ನೋಟಿಸ್ ಬರಬಹುದು. ನನಗೆ ಆಗ ಖುಷಿ. ನಾನೊಬ್ಬನೇ ಆಗಿದ್ದೆನಲ್ಲ, ಸದ್ಯ ಈಗ ಭಟ್ರು ಜೊತೆಗೆ ಬರ್ತಾರಲ್ಲ ಸಮಾಧಾನ ಎಂದು ಈಶ್ವರಪ್ಪ ತಮಾಷೆಯಾಗಿ ಹೇಳಿದರು.