ಕನ್ನಡಪ್ರಭ ವಾರ್ತೆ, ತುಮಕೂರುನಗರದಲ್ಲಿರುವ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುಂದುಕೊರತೆಗಳನ್ನು ನಿವಾರಿಸುವ ಜತೆಗೆ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸುವುದು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಕೋರಿ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿದ ಟಿಡಿಸಿಸಿಐ ಅಧ್ಯಕ್ಷ ಪಿ.ಆರ್. ಕುರಂದವಾಡ ನೇತೃತ್ವದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಿ.ಎಸ್. ಸಂಜಯ್, ಖಜಾಂಚಿ ಜಿ.ಆರ್. ರವಿಶಂಕರ್, ನಿರ್ದೇಶಕರಾದ ಟಿ.ಆರ್. ಆನಂದ್, ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಟಿ.ಜೆ. ಗಿರೀಶ್ ರವರು ಮನವಿ ಪತ್ರ ಸಲ್ಲಿಸಿ ತುಮಕೂರು ಕೈಗಾರಿಕಾ ನಗರವಾಗಿ ಬೆಳೆಯುತ್ತಿದ್ದು, ವಸಂತನರಸಾಪುರದಲ್ಲಿ 14 ಸಾವಿರ ಎಕರೆ ಬೃಹತ್ ಕೈಗಾರಿಕಾ ಪ್ರದೇಶವನ್ನು ಹೊಂದಿದ್ದು, ಕೈಗಾರಿಕಾ ಕಾರಿಡಾರ್ ಕೂಡ ಆಗಮಿಸುತ್ತಿದೆ. ಜತೆಗೆ ಹಲವಾರು ಐಟಿ-ಬಿಟಿ ಕಂಪನಿಗಳು ತುಮಕೂರಿನಲ್ಲಿ ಶಾಖೆ ಸ್ಥಾಪಿಸಲು ಹೆಚ್ಚು ಉತ್ಸುಕವಾಗಿವೆ. ಆದ್ದರಿಂದ ತುಮಕೂರಿಗೆ ಮಂಜೂರಾಗಿರುವ ಇಎಸ್‌ಐ ಆಸ್ಪತ್ರೆಗೆ ಅತಿ ಶೀಘ್ರದಲ್ಲಿ ನಗರದಲ್ಲೇ ಜಾಗ ನಿಗದಿ ಮಾಡಿ ಪ್ರಾರಂಭಿಸಬೇಕು ಎಂದು ಕೋರಿದರು.ಇಎಸ್‌ಐ ಆಸ್ಪತ್ರೆ ಪ್ರಾರಂಭಿಸುವುದರಿಂದ ಕೈಗಾರಿಕೆಗಳಲ್ಲಿ ಹಾಗೂ ಇನ್ನಿತರಗಳ ಕಡೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಅನಾರೋಗ್ಯದ ನಿಮಿತ್ತ ತುಮಕೂರಿನಿಂದ ಬೆಂಗಳೂರು ಹಾಗೂ ಇನ್ನಿತರ ಕಡೆ ಇರುವ ಇಎಸ್‌ಐ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ. ಹಾಗಾಗಿ ಶೀಘ್ರ ಇಎಸ್‌ಐ ಆಸ್ಪತ್ರೆಯನ್ನು ಪ್ರಾರಂಭಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉಚಿತ ಬಸ್‌ಪಾಸ್, ಉಚಿತ ಆರೋಗ್ಯ ವಿಮೆ ಹಾಗೂ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಬೇಕು. ನೀಟ್, ಸಿಇಟಿ ಪರೀಕ್ಷೆಗಳಲ್ಲಿ ಮೀಸಲಾತಿಯನ್ನು ಕಲ್ಲಿಸಬೇಕು ಎಂದು ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.ಕೈಗಾರಿಕೆಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ಕಾರ್ಮಿಕರು ಅಪಘಾತಕ್ಕೆ ತುತ್ತಾದರೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ 60 ವರ್ಷದ ನಂತರ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಎಂಎಸ್‌ಎಂಇ ಕೈಗಾರಿಕೆಗಳಿಗೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಕನಿಷ್ಠ ವೇತನ ಪದ್ದತಿ ಇದ್ದು, ಇದನ್ನು ಕಡಿಮೆ ಮಾಡಬೇಕು ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಮಾಡುವ ತಪಾಸಣೆಗಳಿಂದ ವಿಮುಕ್ತಿಗೊಳಿಸಬೇಕು ಎಂದು ಟಿಡಿಸಿಸಿಐ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.