8 ರಂದು ಜಿಲ್ಲೆಯಾದ್ಯಂತ ಏಕ ಕಾಲಕ್ಕೆ ಪ್ರಬಂಧ ಸ್ಪರ್ಧೆ

KannadaprabhaNewsNetwork |  
Published : Sep 04, 2025, 02:00 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಗಾಂಧೀಜಿಯವರ 156 ಜಯಂತಿ । ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಜಿಪಂ ಸಿಇಒ ಡಾ.ಆಕಾಶ್ ಸೂಚನೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಹಾತ್ಮಾ ಗಾಂಧೀಜಿಯವರ 156 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ ಇತ್ಯಾದಿ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಸೆಪ್ಟಂಬರ್ 8 ರಂದು ಏಕಕಾಲಕ್ಕೆ ಜಿಲ್ಲೆಯಾದ್ಯಂತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರತ್ಯೇಕವಾಗಿ 03 ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್. ಆಕಾಶ್ ತಿಳಿಸಿದ್ದಾರೆ.

ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಆಯಾ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಪ್ರತಿ ವಿಭಾಗಕ್ಕೂ ಪ್ರತ್ಯೇಕವಾಗಿ ಪ್ರಥಮ- ರು.3000, ದ್ವಿತೀಯ-ರು.2000 ಹಾಗೂ ತೃತೀಯ-ರು. 1000 ನಗದು ಬಹುಮಾನ ಇರುತ್ತದೆ. ಪ್ರಥಮ ಬಹುಮಾನ ಪಡೆದ ಪ್ರಬಂಧಗಳನ್ನು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಬೆಂಗಳೂರಿಗೆ ಕಳುಹಿಸಿಕೊಡಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ- ರು.31,000, ದ್ವಿತೀಯ- ರು 21,000 ಹಾಗು ತೃತೀಯ- 11,000 ರು. ಬಹುಮಾನವಿರುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಸ್ಪರ್ಧೆಯ ಕುರಿತು ಸಾಕಷು ಮುಂಚಿತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿ, ಅವರು ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಕ್ರಮ ವಹಿಸಬೇಕು ಎಂದಿದ್ದಾರೆ.

ಪ್ರೌಢಶಾಲಾ ವಿಭಾಗದ ಸ್ಪರ್ಧೆಗೆ ಸ್ವಚ್ಛತೆಯ ಪಾಠ- ಗಾಂಧೀಜಿಯವರ ಸಂದೇಶ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ, ಗಾಂಧೀಜಿಯವರ ಸ್ವಾತಂತ್ರ್ಯದ ಕನಸು- ನನ್ನ ಕಲ್ಪನೆ. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 700 ರಿಂದ 800 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.

ಪದವಿ ಪೂರ್ವ ಶಿಕ್ಷಣ ವಿಭಾಗಕ್ಕೆ ಅಸ್ಪøಶ್ಯತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೊರಾಟ, ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ, ಬದಲಾವಣೆ ನನ್ನಿಂದಲೇ ಆರಂಭ- ಗಾಂಧೀಜಿಯವರ ಪಾಠ, ಈ ವಿಷಯಗಳ ಪೈಕಿ ಯಾವುದಾದರೂ ಒಂದು ವಿಷಯ ಕುರಿತು 900 ರಿಂದ 1000 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.

ಪದವಿ-ಸ್ನಾತಕೋತ್ತರ ಪದವಿ ವಿಭಾಗಕ್ಕೆ ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ, ಗಾಂಧೀಜಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್- ತತ್ವಗಳ ಹೋಲಿಕೆ, ಮೌಲ್ಯಾಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ-ಯುವಕರಿಗೆ ಗಾಂಧೀಜಿಯವರ ಪಾಠ. ಈ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 1400 ರಿಂದ 1500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.

ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈ ಬರಹದಲ್ಲಿ ಪ್ರಬಂಧ ಬರೆಯಬೇಕು. ಮೊಬೈಲ್ ಗಳ ಬಳಕೆಗೆ ಅವಕಾಶ ಇರುವುದಿಲ್ಲ. ಪ್ರಬಂಧಕಾರರ ಹೆಸರು, ತರಗತಿ, ಕಾಲೇಜು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ವಿವರಗಳನ್ನು ಪ್ರಬಂಧದಲ್ಲಿ ನಮೂದಿಸಿರಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.

ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ಅತ್ಯುತ್ತಮ 3 ಪ್ರಬಂಧದ ಫಲಿತಾಂಶವನ್ನು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಚಿತ್ರದುರ್ಗ, ಪದವಿಪೂರ್ವ ವಿಭಾಗದ ಫಲಿತಾಂಶವನ್ನು ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ವಿಭಾಗ, ಚಿತ್ರದುರ್ಗ ಹಾಗೂ ಪದವಿ-ಸ್ನಾತಕೋತ್ತರ ಪದವಿ ವಿಭಾಗದ ಫಲಿತಾಂಶವನ್ನು ಪ್ರಾಂಶುಪಾಲರು, ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ ಇವರು ಉತ್ತಮ ರೀತಿಯಲ್ಲಿ ಮೌಲ್ಯಮಾಪನ ಮಾಡಿಸುವರು.

ಜಿಲ್ಲಾ ಮಟ್ಟದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಮುತುವರ್ಜಿಯಿಂದ ವ್ಯವಸ್ಥಿತ ರೀತಿಯಲ್ಲಿ ಜಿಲ್ಲೆಯಲ್ಲಿ ಆಯೋಜಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತ ಉದ್ದಿಮೆದಾರರ ಬೇಡಿಕೆಗೆ ಸಂಘಟಿತ ಹೋರಾಟ
ಬೆಂಗ್ಳೂರಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೇ ಕಚೇರಿ!