ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ 123ನೇ ಜನ್ಮ ದಿನಾಚರಣೆ ಮೇಲೆ ಎಸ್.ಎಂ.ಕೃಷ್ಣರ ಅಗಲಿಕೆಯ ನೋವು ಆವರಿಸಿತ್ತು. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅರ್ಧಗಂಟೆಯೊಳಗೆ ಕಾರ್ಯಕ್ರಮ ಮುಗಿಸಲಾಯಿತು.ಸೀಬಾರದಲ್ಲಿರುವ ಎಸ್ಎನ್ ಸ್ಮಾರಕದ ಸಮೀಪ ಮಂಗಳವಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಎಸ್‌ಜೆಎಂ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಮಹನೀಯರ ವಿಚಾರಗಳನ್ನು ಸಮಾಜಕ್ಕೆ ತಿಳಿಸದಿದ್ದರೆ ಸಾಂಸ್ಕೃತಿಕ ದಾರಿದ್ರ್ಯ ನಮ್ಮನ್ನು ಆವರಿಸುತ್ತದೆ ಎಂದರು.
ಕರ್ನಾಟಕ ಏಕೀಕರಣದ ರುವಾರಿಯಾಗಿದ್ದ ಎಸ್.ನಿಜಲಿಂಗಪ್ಪನವರು ಮುರುಘಾಮಠದ ಪಾರಂಪರಿಕ ಭಕ್ತರಾಗಿದ್ದರು. ಜಯದೇವ ಜಗದ್ಗುರುಗಳ ಜೊತೆ ಅವಿನಾಭಾವ ಸಂಬಂಧವಿತ್ತು. ಅಪರೂಪದ ರಾಜಕಾರಣಿ. ಕನ್ನಡ ನಾಡು, ನುಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ನೇರ, ನಿಷ್ಟುರವಾದಿ, ನಿಷ್ಕಳಂಕ ರಾಜಕಾರಣಿಯಾಗಿದ್ದ ಎಸ್.ನಿಜಲಿಂಗಪ್ಪನವರ ಆಚಾರ-ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿ ಇಂದಿನ ಪೀಳಿಗೆಗೆ ಪರಿಚಯಿಸಬೇಕು. ಈಗಿನ ರಾಜಕಾರಣಿಗಳಿಗೆ ಎಸ್ಎನ್ ಅವರು ಮಾದರಿಯಾಗಿದ್ದಾರೆ ಎಂದರು.ಎಸ್.ಎನ್.ಮೆಮೋರಿಯಲ್ ಟ್ರಸ್ಟ್‌ನ ಕಾರ್ಯದರ್ಶಿ, ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ಎಸ್ಎನ್‌ರವರ ವ್ಯಕ್ತಿತ್ವ ದೊಡ್ಡದು. ಪಾರದರ್ಶಕ ರಾಜಕಾರಣಿ. ಭ್ರಷ್ಟಾಚಾರದಿಂದ ದೂರವಿದ್ದರು. ವಕೀಲ ವೃತ್ತಿಯಿಂದ ಗಳಿಸಿದ ಸಂಪಾದನೆಯಲ್ಲಿ ಕಟ್ಟಿಸಿಕೊಂಡ ನಿವಾಸದಲ್ಲಿಯೇ ಕೊನೆಯವರೆಗೂ ಜೀವಿಸಿದರು ಎಂದು ಹೇಳಿದರು.ಈ ವೇಳೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿ ದೇವಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಎಸ್.ಎನ್.ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಎಸ್.ಷಣ್ಮುಖಪ್ಪ, ಶಾರದ ಬ್ರಾಸ್‍ಬ್ಯಾಂಡ್‍ನ ಗುರುಮೂರ್ತಿ, ಎಸ್.ವೀರೇಶ್, ಬಸವೇಶ್ವರ ವಿದ್ಯಾಸಂಸ್ಥೆಯ ಕೆ.ವಿ.ಶಂಕರಪ್ಪ, ಎಂ.ವಿ.ಎಂ.ಸ್ವಾಮಿ, ರುದ್ರೇಶ್, ಲೋಕನಾಥ್, ರುದ್ರಮೂರ್ತಿ, ಮಂಜುನಾಥ್, ವೀರಭದ್ರಸ್ವಾಮಿ, ಇಟಗಿ ಜಯದೇವಮೂರ್ತಿ, ಮುರುಗೇಶ್ ಡಿ.ವಿ. ಅನಿತ ಮುರುಗೇಶ್ ಇದ್ದರು.