ಎಸ್ಸೆಸ್ಸೆಲ್ಸಿ ಕುಸಿತ, ಶಿಕ್ಷಣದಲ್ಲಿ ಸುಧಾರಣೆ ಆಗುತ್ತಾ?

KannadaprabhaNewsNetwork |  
Published : Jun 15, 2024, 01:03 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿರುವ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಬರೊಬ್ಬರಿ 25,248 ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಮೂಲಕ ಶಿಕ್ಷಣ ಇಲಾಖೆ ಕಾರ್ಯವೈಖರಿಯ ಮುಖವಾಡ ಕಳಚಿದೆ. ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷೆ ನಡೆಸಿದ್ದರಿಂದ ಈ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಕುಸಿತವಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

ಜಗದೀಶ ವಿರಕ್ತಮಠ

ಕನ್ನಡಪ್ರಭ ವಾರ್ತೆ ಬೆಳಗಾವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿರುವ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಬರೊಬ್ಬರಿ 25,248 ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಮೂಲಕ ಶಿಕ್ಷಣ ಇಲಾಖೆ ಕಾರ್ಯವೈಖರಿಯ ಮುಖವಾಡ ಕಳಚಿದೆ. ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷೆ ನಡೆಸಿದ್ದರಿಂದ ಈ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಕುಸಿತವಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.ಜತೆಗೆ ಈಗಿನಿಂದ ವಾರ್ಷಿಕ ಪರೀಕ್ಷೆಗಳು ನಡೆಯುವ ರೀತಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಬೇಕು. ಅಲ್ಲದೆ, ಶೈಕ್ಷಣಿಕ ಕಾರ್ಯಾಗಾರ ಸೇರಿದಂತೆ ಇನ್ನಿತರೆ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡರೆ ಮಾತ್ರ ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆಗೆ ವೇದಿಕೆ ಆಗಲಿದೆ.ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಗಮನಿಸಿದರೇ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಎತ್ತಿತೋರಿಸುತ್ತಿದೆ. ಈ ಬಾರಿಯ ಕಳಪೆ ಫಲಿತಾಂಶ ಕಂಡು ಪೋಷಕರಷ್ಟೇ ಅಲ್ಲ, ಶಿಕ್ಷಕರೂ ಶಾಕ್ ಆಗಿದ್ದಾರೆ. ಪರೀಕ್ಷಾ ಅಕ್ರಮ ತಡೆಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವೆಬ್‌ ಕ್ಯಾಮೆರಾಗಳ ಅಳವಡಿಕೆಯಂತಹ ಕಟ್ಟುನಿಟ್ಟಿನ ಕ್ರಮಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇತ್ತು. ಬೆಳಗಾವಿ ಶೈಕ್ಷಣಿಕ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.64.93 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ 29ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಕಳೆದ ವರ್ಷದ 26ನೇ ಸ್ಥಾನದಲ್ಲಿತ್ತು. ಅಲ್ಲದೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ.69.82 ಫಲಿತಾಂಶದೊಂದಿಗೆ 13ನೇ ಸ್ಥಾನದಿಂದ 25ನೇ ಸ್ಥಾನಕ್ಕೆ ಕುಸಿದಿದೆ. ಇದನ್ನು ಗಮನಿಸಿದರೆ, ಬೋಧನೆಯ ಗುಣಮಟ್ಟದಲ್ಲಿ ಕುಸಿತ ಕಂಡಿರಬಹುದು ಎಂಬ ಲೆಕ್ಕಾಚಾರ ಕೂಡ ನಡೆದಿವೆ.ಫೇಲ್‌ ಆದರವರು ಎಷ್ಟು?:

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 11,724 ವಿದ್ಯಾರ್ಥಿಗಳು ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 13,524 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 25,248 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೇ ತಮ್ಮ ಕಾಲೇಜು ಕೋರ್ಸ್‌ಗಳಲ್ಲಿ ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.ಇದು ಕೇವಲ ಬೆಳಗಾವಿಯ ಸಮಸ್ಯೆಯಲ್ಲ. ಆದರೆ, ಇತರೆ ಜಿಲ್ಲೆಗಳ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವೂ ಕುಸಿದಿದೆ. ಇದು ಎಸ್ಸೆಸ್ಸೆಲ್ಸಿ ಫಲಿತಾಂಶದಿಂದಲೇ ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟಾರೆ ಉತ್ತೀರ್ಣ ಶೇ.10.5 ರಷ್ಟು ಫಲಿತಾಂಶ ಕುಸಿದಿದೆ. ಶಿಕ್ಷಣ ಇಲಾಖೆಯ ಆಂತರಿಕ ಮೂಲಗಳ ಪ್ರಕಾರ ಈ ಬಾರಿ ವಿದ್ಯಾರ್ಥಿಗಳಿಗೆ ಸುಮಾರು 20 ಗ್ರೇಸ್ ಮಾರ್ಕ್ಸ್ ಕೂಡ ನೀಡಲಾಗಿದೆ. ಮಂಡಳಿಯು ಗ್ರೇಸ್ ಅಂಕಗಳನ್ನು ನೀಡದಿದ್ದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣವು ಈ ಬಾರಿ ಶೇ.50 ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುವುದನ್ನು ಅಲ್ಲಗಳೆಯುವಂತಿಲ್ಲ.ಶಿಕ್ಷಣ ಇಲಾಖೆಯು ಪ್ರಥಮ ಬಾರಿಗೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಿಸಿಟಿವಿ ಆಧಾರಿತ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಜಿಲ್ಲಾ ಪಂಚಾಯತಿ ಕಚೇರಿಯಿಂದ ಮೇಲ್ವಿಚಾರಣೆ ನಡೆಸಲಾಯಿತು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಈ ಬಾರಿ ಬೇರೆ ಜಿಲ್ಲೆಗಳಿಂದ ಬಂದಿದ್ದು, ಪರೀಕ್ಷಾ ಅಕ್ರಮಕ್ಕೆ ಹೆಚ್ಚಾಗಿದ್ದ ದುರ್ಬಲ ಕೇಂದ್ರವನ್ನು ಈ ಬಾರಿ ಮುಚ್ಚಲಾಗಿದೆ. ಈ ಎಲ್ಲ ಕ್ರಮಗಳು ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಲು ಸಹಾಯ ಮಾಡಿದೆ. ಆದರೆ, ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣದಲ್ಲಿ ಕುಸಿತವಾಗಿದೆ. ಸಮಾಧಾನದ ಸಂಗತಿ ಎಂದರೆ, ಪ್ರಾಮಾಣಿಕವಾಗಿ ಓದಿ ಬರೆದ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳು ಬಂದಿವೆ. ಅವರ ಭವಿಷ್ಯಕ್ಕೆ ಇದು ಉತ್ತಮ ಮಾರ್ಗ ಎಂದು ಶಿಕ್ಷಣ ತಜ್ಞರ ಅಭಿಮತವಾಗಿದೆ.ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು

ಬೆಳಗಾವಿ ಶೈಕ್ಷಣಿಕ ಜಿಲ್ಲೆ 11,724 ವಿದ್ಯಾರ್ಥಿಗಳು

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 13,524 ವಿದ್ಯಾರ್ಥಿಗಳು

ಒಟ್ಟು 25,248 ವಿದ್ಯಾರ್ಥಿಗಳು

ಪರೀಕ್ಷೆ ವೇಳೆ ಅವ್ಯವಹಾರ ತಡೆಯಲು ಅಳವಡಿಸಿದ ಹೊಸ ತಂತ್ರಗಳು ಪರೀಕ್ಷಾ ಅಕ್ರಮ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹಾಗೂ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಶಾಲೆಗಳ ಮೇಲಿದೆ.

- ಮೋಹನ್‌ಕುಮಾರ ಹಂಚಾಟೆ,

ಪ್ರಭಾರಿ ಡಿಡಿಪಿಐ, ಬೆಳಗಾವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ