ಹಾನಗಲ್ಲ: ಬದುಕಿನ ವಿಕಾಸಕ್ಕಾಗಿ ಕಲಿಕೆ ಕಾಲ ಕಾಲದ ಅಗತ್ಯ ಅನುಸರಿಸಿ ಅರಿಯುವ ಅಗತ್ಯವಿದ್ದು, ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಹಂತದಲ್ಲಿ ಅತ್ಯಂತ ಪ್ರಮುಖ ಘಟ್ಟ ಎಂದು ಸಾಹಿತಿ ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.
ಶುಕ್ರವಾರ ಹಾನಗಲ್ಲ ತಾಲೂಕಿನ ಅರಳೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಧಾರವಾಡದ ಹ್ಯಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರ, ಬೆಂಗಳೂರಿನ ಡ್ರೀಮ್ ಸ್ಕೂಲ ಫೌಂಡೇಶನ್ ಸಂಯುಕ್ತವಾಗಿ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವೃತ್ತಿ ಮಾರ್ಗದರ್ಶನ ಹಾಗೂ ಪರೀಕ್ಷಾ ಸಿದ್ಧತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಚನಾತ್ಮಕ ಜೀವನ ವಿಧಾನದಿಂದ ನಮ್ಮ ನಿರೀಕ್ಷೆಗಳನ್ನು ಸಫಲ ಮಾಡಿಕೊಳ್ಳಲು ಸಾಧ್ಯ. ಸಮಯ ಯಾರಿಗೂ ಕಾಯುವುದಿಲ್ಲ. ಸಮಯ ಹರಣ ವಿದ್ಯಾರ್ಥಿ ದೆಸೆಯಲ್ಲಿ ದೊಡ್ಡ ನಷ್ಟ. ನಮ್ಮ ಹವ್ಯಾಸಗಳು ಬದುಕು ರೂಪಿಸುವಂತಿರಬೇಕೆ ಹೊರತು ಬದುಕು ಕಸಿದುಕೊಳ್ಳುವುದಲ್ಲ. ಯುವ ಜನತೆ ಈಗ ಎಚ್ಚರಿಕೆಯ ಹೆಜ್ಜೆಯಿಟ್ಟು ನಡೆಯಬೇಕಾಗಿದೆ. ನಮ್ಮ ಗುರಿ ಹಾಗೂ ಒಳ್ಳೆಯ ಗುರುವಿನ ಮಾರ್ಗದರ್ಶನದಲ್ಲಿ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಯ ಆನಂದ ಹೆಗಡೆ, ಗ್ರಾಮೀಣ ಮಕ್ಕಳಿಗಾಗಿ ಹೈಟೆಕ್ ಶಿಕ್ಷಣ ನೀಡುವ ಉದ್ದೇಶ ಸಫಲವಾಗಬೇಕು. ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರು ಶಾಲಾ ಕಾಲೇಜುಗಳ ಮಕ್ಕಳಿಗಾಗಿ ಒಳ್ಳೆಯ ಮಾರ್ಗದರ್ಶನ ಶಿಬಿರ ನಡೆಸುತ್ತಿರುವುದು ಸುದೈವವೇ ಆಗಿದೆ. ಸಕಾಲಿಕ ಶೈಕ್ಷಣಿಕ ಮಾರ್ಗದರ್ಶನ ಮಕ್ಕಳ ಪ್ರತಿಭೆ ಬೆಳಗಿಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಎಸ್.ಸಿ. ಚಿಕ್ಕಮಠ, ವಿದ್ಯಾರ್ಥಿಗಳಲ್ಲಿ ಓದಿನ ಸಮಚಿತ್ತ ಬೇಕು. ಶಾಂತ ಮನಸ್ಸು, ಕ್ರಿಯಾಶೀಲ ಓದು ನಮ್ಮ ಅರಿವಿನ ಮನೆ ವಿಸ್ತಾರಗೊಳಿಸುತ್ತದೆ. ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಯಾದವನಿಗೆ ಪ್ರಶ್ನಿಸುವ, ಪ್ರಶ್ನೆಗಳಿಗೆ ಉತ್ತರಿಸುವ ನಿಷ್ಠೆ ಮೊದಲು ಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಮಂಜುಳಾ ಮಠದ, ಅರುಣಕುಮಾರ ಬಾರ್ಕಿ, ಸಿ.ಆರ್.ಪಿ ಸಿದ್ದು ಗೌರಣ್ಣನವರ, ಶಿಕ್ಷಕರಾದ ಅಶೋಕ ಕೋಣಿಸಾಗರ, ಮಾಬುಶ್ ಲಮಾಣಿ, ಅನಿತಾ ಗೊಲ್ಲರ, ಕೇಶವ ಗಾವಡಿ, ರಾಜಶೇಖರ ಕೆ.ಎನ್. ಕಿರಣಕುಮಾರ, ಸುಧಾ ಮುಕ್ತಿಗೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.