ಕನ್ನಡಪ್ರಭ ವಾರ್ತೆ ಅಥಣಿ
ಎಸ್ಸೆಸ್ಸೆಲ್ಸಿ ಪರೀಕ್ಷೆ 3ನೇ ದಿನವಾದ ಶನಿವಾರ ವಿಜ್ಞಾನ ಪರೀಕ್ಷೆ ತಾಲೂಕಿನ 21 ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಜರುಗಿದ ದೃಶ್ಯಾವಳಿಗಳನ್ನು ತಮ್ಮ ಕಚೇರಿಗೆ ವೆಬ್ ಸಿಸಿ ಕ್ಯಾಮೆರಾಗಳಲ್ಲಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ವಲಯದ 21 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 672 ಕೊಠಡಿಗಳಲ್ಲಿ 6,888 ವಿದ್ಯಾರ್ಥಿಗಳ ಪೈಕಿ 6,843 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 45 ಜನ ವಿದ್ಯಾರ್ಥಿಗಳು ಗೈರಾಗಿದ್ದು, ಎಲ್ಲ ಕೇಂದ್ರಗಳಲ್ಲಿ ನಕಲು ತಡೆಗಟ್ಟುವ ಉದ್ದೇಶದಿಂದ ವೆಬ್ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಹಾವು ಪ್ರತ್ಯಕ್ಷ: ಪಟ್ಟಣದ ಜಾಧವ್ ಜೀ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಪೂರ್ವದಲ್ಲಿಯೇ ಹಾವು ಪ್ರತ್ಯಕ್ಷವಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಆತಂಕವುಂಟು ಮಾಡಿತು. ಶಾಲೆಯ ಸಿಬ್ಬಂದಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ನಂತರ ಪರೀಕ್ಷೆಗಳು ನಿರ್ಭೀತಿಯಿಂದ ಜರುಗಿದವು.ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆಗೆ ಆಗಮಿಸಿದಂತೆ 3ನೇ ದಿನವೂ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದರು. ಶಾಲೆಯ ಶಿಕ್ಷಕರು ಮತ್ತು ಪಾಲಕರು ಮಕ್ಕಳನ್ನ ಕೊಠಡಿಗೆ ಕಳಿಸುವುದರ ಜೊತೆಗೆ ಚೆನ್ನಾಗಿ ಪರೀಕ್ಷೆಯನ್ನು ಬರೆಯುವಂತೆ ಶುಭ ಹಾರೈಸಿದರು. ಪರೀಕ್ಷೆ ಸಮಯದ ಹೊತ್ತಿಗೆ ಪರೀಕ್ಷಾ ಸುತ್ತ-ಮುತ್ತಲಿನ ಜನರನ್ನು ಪೊಲೀಸ್ ಸಿಬ್ಬಂದಿ ಹೊರ ಹಾಕುವ ಮೂಲಕ ಅತ್ಯಂತ ಶಾಂತಿಯುತ ಹಾಗೂ ಕಟ್ಟುನಿಟ್ಟಿನಿಂದ ಪರೀಕ್ಷೆ ಜರುಗಿದವು.