ಲಕ್ಷ್ಮಣ ದಸ್ತಿ ಆಗ್ರಹ: ಜನಪರ ಹೋರಾಟದ ರೂಪು ರೇಷೆ ನಿರ್ಧಾರಕ್ಕೆ ಪ್ರಬುದ್ಧರ ಸಭೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಬಹುದಿನಗಳ ನಿರಂತರ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದಿರುವ 371(ಜೆ) ಕಲಂ ತಿದ್ದುಪಡಿಯ ಸಮರ್ಪಕ ಜಾರಿಗೆ ರಾಜ್ಯ ಸರಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಲಕ್ಷ್ಮಣ ದಸ್ತಿ ಆಗ್ರಹಿಸಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಜನಪರ ಹೋರಾಟದ ರೂಪು ರೇಷೆ ನಿರ್ಧರಿಸಲು ಆಯೋಜಿಸಿದ್ದ ಜಿಲ್ಲೆಯ ಪ್ರಬುದ್ಧರೊಂದಿಗಿನ ಪೂರ್ವಭಾವಿ ಸಭೆ ಉದ್ಧೇಶಿಸಿ ಅವರು ಮಾತನಾಡಿದರು.
|ಪ್ರತ್ಯೇಕ ಸಚಿವಾಲಯದ ಜೊತೆಗೆ ತಜ್ಞರನ್ನೊಳಗೊಂಡ ನ್ಯಾಯಾಧಿಕರಣ(ಟ್ರಿಬ್ಯುನಲ್)ಸ್ಥಾಪನೆ ಮಾಡಿ ಗೊಂದಲಗಳಿಗೆ ತೆರೆ ಎಳೆಯುವ ಕಾರ್ಯ ಮಾಡಬೇಕು. ರಾಜ್ಯ ಮಟ್ಟದ ಉದ್ಯೋಗ ಹಾಗೂ ಮುಂಬಡ್ತಿಗಳಲ್ಲಿ ನಮ್ಮ ಭಾಗದ ಯುವಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ನಮ್ಮ ಭಾಗದ ಕ್ಯಾಬಿನೆಟ್ ಸಚಿವರ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಬೇಕು. ನೂರಾರು ವರ್ಷಗಳ ಆಳರಸರ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿ ಹಿಂದುಳಿದವರು ಎಂಬ ಹಣೆ ಪಟ್ಟಿಯನ್ನು ಹೊತ್ತು ತಿರುಗುವ ದಾರುಣ ಸ್ಥಿತಿಯಲ್ಲಿರುವ ನಮ್ಮ ಭಾಗಕ್ಕೆ ಹೋರಾಟ ಹಾಗೂ ರಾಜಕೀಯ ಇಚ್ಛಾಶಕ್ತಿಯ ಪ್ರತಿ ಫಲವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷವಾದ ಸವಲತ್ತು ಕಲ್ಪಿಸಿದೆ. ಆದರೆ, ಅದರ ಸಮರ್ಪಕ ಜಾರಿ ಮಾತ್ರ ದಶಕ ಕಳೆದರು ಆಗದೇ ಇರುವುದು ನಮ್ಮ ದೌರ್ಭಾಗ್ಯ ಎಂದು ಅಸಮಧಾನ ವ್ಯಕ್ತಪಡಿಸಿದರು.ಏಕೀಕರಣ ಸಂದರ್ಭದಲ್ಲಿ ಯಾವುದೇ ಷರತ್ತುಗಳಿಲ್ಲದೇ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆಯಾದ ನಮ್ಮ ಭಾಗದ ಜನ ಇಂದಿಗೂ ಎರಡನೆ ದರ್ಜೆ ಪ್ರಜೆಗಳಂತೆ ಸೌಲಭ್ಯವಂಚಿತರಾಗಿ ಬದುಕುತ್ತಿದ್ದಾರೆ. 371(ಜೆ) ಅನ್ವಯ ನಮ್ಮ ಭಾಗಕ್ಕೆ ಸಂವಿಧಾನಾತ್ಮಕವಾಗಿ ಹಲವು ಹಕ್ಕುಗಳು ದೊರೆಯಬೇಕಾಗಿದ್ದು, ಎಲ್ಲವನ್ನು ಹೋರಾಟದ ಮೂಲಕವೇ ಪಡೆಯುವ ದುಸ್ಥಿತಿ ಬಂದಿದೆ. ಈ ಅನ್ಯಾಯ ಸರಿಪಡಿಸಲು ಸರಕಾರ ಕೂಡಲೇ ಮುಂದಾಗಬೇಕೆಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಇನ್ನು ಹೆಚ್ಚಿನ ಅನುದಾನ ಹಂಚಿಕೆ ಮಾಡಿ ಆದ್ಯತೆಯ ಮೇಲೆ ಈ ಭಾಗದ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿ ಜಿಲ್ಲೆಯಲ್ಲಿ ಹೋರಾಟವನ್ನು ಸಂಘಟಿಸಿ ಜನಾಂದೋಲನದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಯಾದಗಿರಿ ಜಿಲ್ಲೆಯಲ್ಲಿ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಲ್ಲಾ ಜನಪರ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡುವತ್ತಾ ಹೆಜ್ಜೆಯಿಡಬೇಕೆಂದು ಮನವಿ ಮಾಡಿದರು.
ಪ್ರಗತಿಪರ ಚಿಂತಕ ಆರ್.ಕೆ. ಹುಡಗಿ ಮಾತನಾಡಿ, 371(ಜೆ) ಕಲಂ ತಿದ್ದುಪಡಿಯಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳು ಹೆಚ್ಚಾಗಿ ದೊರೆಯುತ್ತಿದ್ದು, ಉದ್ಯೋಗಗಳಲ್ಲಿಯೂ ಉತ್ತಮ ಅವಕಾಶ ದೊರೆಯುತ್ತಿವೆ. ಇದರಿಂದ ನಾಡಿನ ಬೇರೆ ಕಡೆಗೆ ಅಸೂಯೆ ದನಿಗಳು ಏಳಲಾರಂಭಿಸಿದ್ದು, ಈ ಬಗ್ಗೆ ನಮ್ಮ ಭಾಗದ ಜನರು ಜಾಗೃತರಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.ಕಲ್ಯಾಣ ಕರ್ನಾಟಕ ಭಾಗ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದ್ದರೂ ಸಹ ಸಧ್ಯ ನಮ್ಮ ಜನ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿದ್ದೇವೆ. ಸರಕಾರಗಳು ನಮ್ಮ ಭಾಗಕ್ಕೆ ಮಾನವೀಯತೆಯ ನೆಲೆಗಟ್ಟಿನಲ್ಲಿ ದೊರೆಯಬೇಕಾದ ಹಕ್ಕುಗಳನ್ನು ನೀಡಲು ಮುಂದಾಗಬೇಕು. ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ವೇತನ ಅನುದಾನಕ್ಕೆ ಒಳಪಡಿಸಬೇಕು ಎಂದರು.|
ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ನಮ್ಮ ಭಾಗದ ಜನರಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂಬ ಮನೋಭಾವ ಬರುವವರೆಗೆ ಈ ಶೋಷಣೆ ತಪ್ಪಿದ್ದಲ್ಲ. ಜನರು ಜಾಗೃತರಾಗಿ ಹೋರಾಟಕ್ಕಿಳಿದಾಗ ಮಾತ್ರ ಆಳುವ ಸರಕಾರ ನಮ್ಮ ನೋವುಗಳಿಗೆ ಸ್ಪಂದಿಸುತ್ತವೆ. ನಮ್ಮ ಶರಣಬಸವೇಶ್ವರ ಸಂಸ್ಥಾನ ಈ ಬಾಗದ ಅಭಿವೃದ್ಧಿಗೆ ತನು, ಮನ, ಧನದ ಸಹಕಾರ ನೀಡಲು ಸದಾ ಸಿದ್ಧ ಎಂದರು.ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲೆಯ ನೇತೃತ್ವ ವಹಿಸಿಕೊಂಡಿರುವ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಸಧ್ಯದಲ್ಲಿಯೇ ನಮ್ಮ ಜಿಲ್ಲೆಯ ಪ್ರಗತಿಪರರು, ಶಿಕ್ಷಣ ಸಂಸ್ಥೆ ಪ್ರಮುಖರು, ಕನ್ನಡಪರ ಹಾಗೂ ರೈತಪರ ಹೋರಾಟಗಾರರ ಸಭೆ ಕರೆದು ಹೋರಾಟದ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ್, ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ, ಹಣಮಂತರೆಡ್ಡಿ ಬಿಳ್ಹಾರ, ಸಾಹಿತಿ ಅಯ್ಯಣ್ಣ ಹುಂಡೇಕಾರ, ಲಯನ್ಸ ಕ್ಲಬ್ ಖಜಾಂಚಿ ಮಲ್ಲಣ್ಣಗೌಡ ಹಳಿಮನಿ ಕೌಳೂರ, ಹೋರಾಟ ಸಮಿತಿಯ ಮುಖಂಡ ವೈಜನಾಥ ಪಾಟೀಲ್, ಪ್ರೊ.ಅಶೋಕ ವಾಟ್ಕರ್, ಸಾಮಾಜಿಕ ಕಾರ್ಯಕರ್ತರಾದ ರಮೇಶ ದೊಡ್ಡಮನಿ, ಗುರು ದಂಡಗುಂಡ, ಉದ್ಯಮಿ ಲಕ್ಷ್ಮಿಪುತ್ರ ಮಾಲಿ ಪಾಟೀಲ್, ಮಲ್ಲೇಶ ಕುರಕುಂದಿ, ಮಹೇಶರೆಡ್ಡಿ, ರಾಜಶೇಖರ ಪಾಟೀಲ್, ಬಸವಂತರಾಯಗೌಡ ಮಾಲಿ ಪಾಟೀಲ್ ಸೇರಿದಂತೆ ಇತರರಿದ್ದರು.