ಫ್ಲೋರೈಡ್ ಅಂಶ ಹೆಚ್ಚಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ

KannadaprabhaNewsNetwork |  
Published : May 23, 2025, 12:18 AM IST
22ಕೆಎಂಎನ್ ಡಿ14 | Kannada Prabha

ಸಾರಾಂಶ

ಜಿಲ್ಲಾ ತಂಬಾಕು ಕೋಶದ ಸಲಹೆಗಾರ ತಿಮ್ಮರಾಜು ಮಾತನಾಡಿ, ತಂಬಾಕು ಮುಕ್ತ ಮನೆಗಳನ್ನು ಮಾಡಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಮತ್ತು ಸ್ತ್ರೀ ಶಕ್ತಿ ಸಂಘಗಳ ಮೂಲಕ ಅರಿವು ಮೂಡಿಸಬೇಕು. ಕ್ಷಯ ರೋಗಿಗಳಿಗೆ ಉಚಿತವಾಗಿ ಆಹಾರ ಕಿಟ್‌ ತಲುಪಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ ಆರ್‌ಬಿಎಸ್‌ಕೆ ಅಡಿ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎಂದು ತಹಸೀಲ್ದಾರ್ ಜಿ.ಆದರ್ಶ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಯೋಜನೆ ಕುರಿತು ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನ ಹುರಳಿಗಂಗನಹಳ್ಳಿ, ಬಚ್ಚಿಕೊಪ್ಪಲು, ಸೋಮನಹಳ್ಳಿ, ದೊಡ್ಡೇಗೌಡನಕೊಪ್ಪಲು, ಹೊನ್ನೇನಹಳ್ಳಿ, ಚಾಗಟಹಳ್ಳಿ, ಜೋಡಿನೇರಲಕೆರೆ, ಎಂ.ಹೊಸೂರು, ಬಾವಿಕೊಪ್ಪಲು, ಸೀಗೇಹಳ್ಳಿ, ತೊರೆಮಾವಿನಕೆರೆ ಸೇರಿದಂತೆ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ ಎಂದರು.

ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕ್ರಮವಹಿಸಬೇಕು. ಹಲವು ಗ್ರಾಮಗಳಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಿಸಬೇಕು ಎಂದರು.

ಜಿಲ್ಲಾ ತಂಬಾಕು ಕೋಶದ ಸಲಹೆಗಾರ ತಿಮ್ಮರಾಜು ಮಾತನಾಡಿ, ತಂಬಾಕು ಮುಕ್ತ ಮನೆಗಳನ್ನು ಮಾಡಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಮತ್ತು ಸ್ತ್ರೀ ಶಕ್ತಿ ಸಂಘಗಳ ಮೂಲಕ ಅರಿವು ಮೂಡಿಸಬೇಕು. ಕ್ಷಯ ರೋಗಿಗಳಿಗೆ ಉಚಿತವಾಗಿ ಆಹಾರ ಕಿಟ್‌ ತಲುಪಿಸಬೇಕು ಎಂದರು.

ತಾಲೂಕಿನ ಬೆಳ್ಳೂರು, ದೇವಲಾಪುರ ಹ್ಯಾಂಡ್‌ ಪೋಸ್ಟ್ ಸೇರಿದಂತೆ ಹಲವು ಶಾಲಾ ಕಾಲೇಜುಗಳ 100 ಮೀ ವ್ಯಾಪ್ತಿ ನಿಯಮ ಮೀರಿ ಬೀಡಿ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ತಂಬಾಕು ಸೇವನೆ ದುಷ್ಪರಿಣಾಮ ಬಗ್ಗೆ ಶಾಲಾ ಮಕ್ಕಳ ಮೂಲಕ ಪೋಷಕರು ಮತ್ತು ಸ್ಥಳೀಯ ಜನರಿಗೆ ಪತ್ರ ಚಳವಳಿ ಮೂಡಿಸಬೇಕಾಗಿದೆ ಎಂದರು.

ಪ್ರತಿ ಶಾಲೆಯಲ್ಲೂ ಸಹ ಮುಖ್ಯ ಶಿಕ್ಷಕರ ಅಧ್ಯಕ್ಷತೆಯಲ್ಲಿ ತಂಬಾಕು ಮುಕ್ತ ಸಮಿತಿ ರಚನೆಯಾಗಬೇಕು. ಎಲ್ಲಾ ಸರ್ಕಾರಿ ಕಚೇರಿಗಳು ತಂಬಾಕು ಮುಕ್ತ ಕಚೇರಿ ಎಂದು ಘೋಷಣೆಯಾಗಬೇಕು ಎಂದರು.

ಗ್ರಾಮಗಳಲ್ಲಿ ತಂಬಾಕು ಸೇವನೆ ನಿಯಂತ್ರಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಸ ವಿಲೇವಾರಿ ವಾಹನಗಳ ಮೂಲಕ ತಮ್ಮ ವ್ಯಾಪ್ತಿ ಜನ ಜಾಗೃತಿ ಮೂಡಿಸುವ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರತಿ ತಿಂಗಳು ಕನಿಷ್ಠ 20 ಪ್ರಕರಣ ದಾಖಲಿಸಬೇಕು ಎಂದರು.

ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯ್ತಿ ಸೇರಿದಂತೆ ಎಲ್ಲಾ ಗ್ರಾಪಂ ವ್ಯಾಪ್ತಿಯ ಅಂಗಡಿಗಳ ಮುಂದೆ ಧೂಮಪಾನ ನಿಷೇಧ ಮತ್ತು 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದಿಲ್ಲ ಎಂದು ಕಡ್ಡಾಯವಾಗಿ ನಾಮಫಲಕ ಹಾಕಿಸಬೇಕು ಎಂದರು.

ಜಿಲ್ಲಾ ಫ್ಲೋರೈಡ್ ಸಲಹೆಗಾರ ಡಾ.ದಿವಾಕರ್ ಮಾತನಾಡಿ, ಫ್ಲೋರೈಡ್ ಯುಕ್ತ ನೀರು ಕುಡಿದರೆ ಅನಿಮಿಯಾ ಸೇರಿದಂತೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಮೂರು ತಿಂಗಳಾದರೂ ದುರಸ್ಥಿ ಮಾಡಿಸಿಲ್ಲ ಎಂದರು.

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಉತ್ತಮ ರೀತಿ ಅನುಷ್ಠಾನಗೊಳಿಸಿರುವ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ ಮಾಹಿತಿ ನೀಡಿದರು. ಬಿಇಒ ಕೆ.ಯೋಗೇಶ್, ತಾಪಂ ಅಧಿಕಾರಿ ಗಿರೀಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಜ್ಯೋತಿಲಕ್ಷ್ಮಿ, ಸಿಡಿಪಿಓ ಕೃಷ್ಣಮೂರ್ತಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಸಿದ್ದಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ