ಕನ್ನಡಪ್ರಭ ವಾರ್ತೆ ಮಂಡ್ಯ
ಹಳ್ಳಿಗಾಡಿನಲ್ಲಿ ಹುಟ್ಟಿದ ಸಾಮಾನ್ಯ ಯುವಕನೊಬ್ಬ ಬೆಂಗಳೂರಿನಂತಹ ಮಹಾನಗರದಲ್ಲಿ ಕಂಪನಿ ಕಟ್ಟಿ 13 ಸಾವಿರ ಜನರಿಗೆ ಉದ್ಯೋಗ ನೀಡಿರುವುದು ಪುಣ್ಯದ ಕೆಲಸ ಎಂದು ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಬಸರಾಳು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಮಾಜಮುಖಿ ಕಾರ್‍ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ರಾಘವೇಂದ್ರ ಮತ್ತು ಮಹಾಲಿಂಗೇಗೌಡ ಅವರು ಉದ್ಯಮಿಗಳಾಗಿ ಬೆಳವಣಿಗೆ ಸಾಧಿಸಿರುವುದು ಮಹತ್ವದ ವಿಚಾರ. ಅಲ್ಲದೆ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ಜೀವನಾಧಾರ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ತಾವು ದುಡಿದಿದ್ದನ್ನೆಲ್ಲಾ ಕುಟುಂಬಕ್ಕೇ ಸೀಮಿತವಾಗಿರಿಸದೆ ಸಮಾಜಮುಖಿ ಚಟುವಟಿಕೆಗಳಿಗೆ ಲಾಭಾಂಶದ ಒಂದಷ್ಟು ಭಾಗವನ್ನು ತೆಗೆದಿರಿಸುವುದು ಮಾದರಿ ಕಾರ್‍ಯವಾಗಿದೆ. ತಂದೆ- ತಾಯಿ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ತೆಂಗಿನ ಸಸಿ ವಿತರಣೆ, ಆರೋಗ್ಯ ಶಿಬಿರ, ಉದ್ಯೋಗ ಮೇಳ, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಹಲವರಿಗೆ ನೆರವಾಗಿರುವುದು ಶ್ಲಾಘನೀಯ ಎಂದು ಹೇಳಿದರು.ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ವಿ. ಗೋಪಾಲಗೌಡ ಮಾತನಾಡಿ, ಹಣ ಸಂಪಾದಿಸುವುದಷ್ಟೇ ಮುಖ್ಯವಲ್ಲ. ಅದನ್ನು ಸಮಾಜ ಸೇವೆಗೆ ಬಳಸುವ ಮೂಲಕ ಅಶಕ್ತರಿಗೆ ನೆರವಾಗಬೇಕು. ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಸಮಾಜ ಅವರನ್ನು ಗೌರವಿಸುತ್ತದೆ. ಜೊತೆಗೆ ಉನ್ನತ ಸ್ಥಾನಮಾನಗಳನ್ನು ದೊರಕಿಸಿಕೊಡುತ್ತದೆ ಎಂದು ಹೇಳಿದರು.
ಮಹಾಲಿಂಗೇಗೌಡ ಅವರು ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದಿದ್ದಾರೆ. ಅವರು ಅನುಭವಿಸಿದ ಕಷ್ಟಗಳಿಗೆ ಒಳ್ಳೆಯ ಪ್ರತಿಫಲ ದೊರಕಿದೆ. ೧೩ ಸಾವಿರ ಮಂದಿಗೆ ಉದ್ಯೋಗ ದೊರಕಿಸುವುದು ಸುಲಭದ ಕೆಲಸವಲ್ಲ. ನಿರುದ್ಯೋಗ ಸಮಸ್ಯೆಗೆ ತಮ್ಮ ಕೈಲಾದಷ್ಟು ಪರಿಹಾರವನ್ನು ದೊರಕಿಸುವ ಕೆಲಸ ಮಾಡುತ್ತಾ, ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಮುದ್ದನಘಟ್ಟ ಮಹಾಲಿಂಗೇಗೌಡ ಮಾತನಾಡಿ, ನನ್ನ ಜೀವನದಲ್ಲಿ ಸಮಾಜ ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡಿದ್ದೇನೆ. ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಅದಕ್ಕೆ ಸಮಾಜದ ಎಲ್ಲ ವರ್ಗದ ಜನರಿಂದ ನನಗೆ ಉತ್ತಮ ಸಹಕಾರ ದೊರೆಯುತ್ತಿದೆ. ಉದ್ಯಮದಲ್ಲಿ ಬೆಳವಣಿಗೆ ಕಾಣುವ ಜೊತೆಯಲ್ಲೇ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಹಂಬಲದೊಂದಿಗೆ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳೂ ಸೇರಿದಂತೆ ಸಮಾಜದ ಹಲವರಿಗೆ ನನ್ನಿಂದಾದ ಸಹಾಯ ಮಾಡುತ್ತಿದ್ದೇನೆ. ಈ ಸೇವೆಯ ಹಿಂದೆ ಯಾವುದೇ ಸ್ವಾರ್ಥ ಇಲ್ಲ ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ರೈತರಿಗೆ ತೆಂಗಿನ ಸಸಿ ವಿತರಣೆ, ಒಂದು ಸಾವಿರ ಹೆಲ್ಮೆಟ್ ವಿತರಣೆ, ೫೦ಕ್ಕೂ ಹೆಚ್ಚು ಸಂಸ್ಥೆಗಳಿಂದ ಉದ್ಯೋಗ ಮೇಳ, ನಗರ ಪಶ್ಚಿಮ ಠಾಣೆ ಪೊಲೀಸರಿಗೆ ಜರ್ಕೀನ್ ವಿತರಣೆ, ಪ್ರಗತಿಪರ ಏಳು ಮಂದಿ ರೈತರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಕಾರ್‍ಯಕ್ರಮಕ್ಕೂ ಮುನ್ನ ತೆರೆದ ವಾಹನದಲ್ಲಿ ಮುದ್ದನಘಟ್ಟ ಮಹಾಲಿಂಗೇಗೌಡ ಅವರನ್ನು ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಕರೆತರಲಾಯಿತು. ಸಮಾರಂಭದಲ್ಲಿ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.