ಸವಣೂರಿನಲ್ಲಿ ರಕ್ತ ಶೇಖರಣಾ ಘಟಕ ಸ್ಥಾಪನೆ ಶೀಘ್ರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

KannadaprabhaNewsNetwork | Published : Jan 22, 2024 2:19 AM

ಸಾರಾಂಶ

ಶಿಗ್ಗಾಂವಿ-ಸವಣೂರು ಕ್ಷೇತ್ರದ ರೋಗಿಗಳಿಗೆ ರಕ್ತದ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಶೇಖರಣಾ ಘಟಕ ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಶಿಗ್ಗಾಂವಿ-ಸವಣೂರು ಕ್ಷೇತ್ರದ ರೋಗಿಗಳಿಗೆ ರಕ್ತದ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಶೇಖರಣಾ ಘಟಕ ಸ್ಥಾಪಿಸಲಾಗಿದ್ದು, ಸವಣೂರಿನಲ್ಲಿಯೂ ರಕ್ತ ಶೇಖರಣಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು ಪಟ್ಟಣದ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಮ್ಮ ೬೪ನೇ ಜನ್ಮದಿನದ ಅಂಗವಾಗಿ ಗಂಗಮ್ಮ ಎಸ್‌. ಬೊಮ್ಮಾಯಿ ಟ್ರಸ್ಟ್ ಹಾಗೂ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನೇತ್ರದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ಷೇತ್ರದ ಜನರಲ್ಲಿರುವ ಅಂಧತ್ವ ನಿವಾರಣೆ ಮಾಡುವ ಗುರಿ ಹೊಂದಲಾಗಿದ್ದು, ಮುಂದಿನ ೪ ವರ್ಷಗಳಲ್ಲಿ ಎಂ.ಎಂ. ಜೋಶಿ ಆಸ್ಪತ್ರೆ ಸಹಯೋಗದಲ್ಲಿ ಗ್ರಾಪಂಗೆ ಒಂದರಂತೆ ಕೇಂದ್ರವನ್ನು ತೆರೆದು ಅಂಧತ್ವ ನಿರ್ಮೂಲನೆ ಮಾಡಲಾಗುವುದು. ಸವಣೂರು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಯುವಕರು ತಿಂಗಳಿಗೆ ಕನಿಷ್ಠ ೨ ಬಾರಿಯಾದರು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿ ಸರ್ಕಾರಿ ಆಸ್ಪತ್ರೆಗೆ ಪೂರೈಸಬೇಕು ಎಂದು ಮನವಿ ಮಾಡಿಕೊಂಡರು.

ಮುಂಬರುವ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೋಗ್ಯವನ್ನು ಚೇತರಿಸಿ ಸದೃಢ ಸಮಾಜ ನಿರ್ಮಾಣ ಮಾಡಲು ಬೃಹತ್ ಆಂದೋಲನ ಆಯೋಜನೆ ಮಾಡಲು ತಿರ್ಮಾನಿಸಲಾಗಿದ್ದು. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಜನರ ರಾಜಕಾರಣವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಸೇವೆಗೆ ಅಣಿಯಾಗಿದ್ದೇನೆ. ಸವಣೂರಿನಲ್ಲಿ ಆಯುರ್ವೇದಿಕ್‌ ಕಾಲೇಜು ನಿರ್ಮಾಣವಾಗುತ್ತಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರವೇಶಗಳು ಪ್ರಾರಂಭವಾಗಿ ಭಾಗದ ಜನರಿಗೆ ಉತ್ತಮ ಸೇವೆಯನ್ನು ನೀಡಲು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಬಾಣದ ವಹಿಸಿದ್ದರು. ಸಾನಿಧ್ಯವನ್ನು ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.

ಶಿಬಿರದಲ್ಲಿ ೧೭ಜನ ರಕ್ತದಾನಕ್ಕೆ ಮುಂದಾದರೆ, ೨೬೫ ಜನ ನೇತ್ರ ತಪಾಸಣೆಗೆ ಒಳಗಾಗಿದ್ದು, ೪೧ ಜನರನ್ನು ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಯಿತು.

ಈ ಸಂದರ್ಭದಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್‌ ನಿರ್ದೇಶಕ ಸುಭಾಸ ಗಡೆಪ್ಪನವರ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಪಾಟೀಲ, ಮಲ್ಲಾರಪ್ಪ ತಳ್ಳಿಹಳ್ಳಿ, ಹನಮಂತಗೌಡ ಮುದಿಗೌಡ್ರ, ಶಂಕರಗೌಡ ಪಾಟೀಲ, ಬಸನಗೌಡ ಕೊಪ್ಪದ, ಧರಿಯಪ್ಪಗೌಡ ಪಾಟೀಲ, ಪ್ರವೀಣ ಬಾಲೆಹೊಸೂರ, ಜಯಂತ ಕೋಟಕ, ಬಸವರಾಜ ಸವೂರ, ಬಸನಗೌಡ ಪಾಟೀಲ, ಮಂಜುನಾಥ ಗಾಣಿಗೇರ, ಶ್ರೀನಿವಾಸ ಗಿತ್ತೆ, ಮಹಾಂತೇಶ ಹಾವಣಗಿ, ಚಿದಾನಂದ ಬಡಿಗೇರ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ಇದ್ದರು.

Share this article