ಕನ್ನಡಪ್ರಭ ವಾರ್ತೆ ಆಲಮಟ್ಟಿ
ಹೊಸದಾಗಿ ರಚನೆಯಾಗಿರುವ 43 ತಾಲೂಕು ಕೇಂದ್ರಗಳಲ್ಲಿ ನ್ಯಾಯಾಲಯ ಸ್ಥಾಪಿಸಲಾಗುವುದು. ಶೀಘ್ರವೇ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪುರೇಷೆ ಆರಂಭಿಸಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.ಪ್ರವಾಸೋದ್ಯಮ ಇಲಾಖೆಯ ವಿಶೇಷ ಬಸ್‌ನಲ್ಲಿ ಮಂಗಳವಾರ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 100 ಕಡೆ ಗ್ರಾಮ ನ್ಯಾಯಾಲಯ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಅದರ ಸ್ವರೂಪದ ಬಗ್ಗೆ ಸಿದ್ಧತೆ ಆರಂಭಗೊಂಡಿದೆ ಎಂದು ತಿಳಿಸಿದರು.
ಕೃಷ್ಣಾ ಜಲ ವಿವಾದ ಕುರಿತು ಸುಪ್ರೀಂಕೋರ್ಟ್‌ನಲ್ಲಿದೆ. ಡಿಸೆಂಬರ್ ತಿಂಗಳಲ್ಲಿ ಕೃಷ್ಣಾ ಜಲ ವಿವಾದದ ವಾದಗಳು ನಡೆಯಲಿದೆ. ವಕೀಲರ ತಂಡದ ಜತೆ ಚರ್ಚೆ ನಡೆಸಲಾಗಿದೆ ಎಂದರು.ಬಿಜೆಪಿ ಮತ ಕೇಳುವ ನೈತಿಕತೆ ಇಲ್ಲ:
ಕೃಷ್ಣಾ ನ್ಯಾಯಾಧಿಕರಣ ತೀರ್ಪು ಬಂದು ದಶಕ ಕಳೆದರೂ ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಇದು ಕೇಂದ್ರ ಸರ್ಕಾರ ರಾಜ್ಯಕ್ಕೆ, ಅದರಲ್ಲೂ ರೈತರಿಗೆ ಮಾಡಿದ ಅನ್ಯಾಯ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಕೇಳುವ ನೈತಿಕತೆ ಇಲ್ಲ ಎಂದರು.ರೋಪ್ ವೇ:
ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿರುವ ಆಲಮಟ್ಟಿಯಲ್ಲಿ ರೋಪ್ ವೇ ಮಾರ್ಗ ನಿರ್ಮಿಸಲಾಗುವುದು. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ, ಇಲ್ಲಿಯ ಕೃಷ್ಣಾ, ರಾಕ್, ಸಂಗೀತ ಕಾರಂಜಿ, ಮೊಘಲ್ ಉದ್ಯಾನ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಈಗ ರೋಪ್ ವೇ ನಿರ್ಮಾಣದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ ಎಂದು ಹೇಳಿದರು.ಸರ್ಕಿಟ್ ರಚಿಸಿ ಯಾತ್ರಿ ನಿವಾಸ:
ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹೊಸಪೇಟೆ, ಕೂಡಲಸಂಗಮ, ಆಲಮಟ್ಟಿ, ವಿಜಯಪುರ ಮಧ್ಯೆ ಪ್ರವಾಸಿ ಸರ್ಕೀಟ್ ರಚಿಸಿ ಯಾತ್ರಿ ನಿವಾಸ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು, ಜತೆಗೆ ಪ್ರಚಾರಕ್ಕೂ ಆದ್ಯತೆ ನೀಡಲಾಗುವುದು. ಆಲಮಟ್ಟಿಯ ಹಿನ್ನೀರಿನಲ್ಲಿ ಹಸಿರು ಟೂರಿಸ್ಂ ಗೂ ಆದ್ಯತೆ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮ ಪ್ರಸಾದ ಮನೋಹರ,ಪುರಾತತ್ವ ಇಲಾಖೆಯ ರಾಜ್ಯ ಆಯುಕ್ತ ದೇವರಾಜು, ಶಶಿಕಾಂತ ಮಾಲಗತ್ತಿ, ಸಂದೀಪ ಬೆಳಗಲಿ ಇದ್ದರು.