ಜಿ. ಸೋಮಶೇಖರ
ಕೊಟ್ಟೂರು: ಕೊಟ್ಟೂರು ತಾಲೂಕು ರಚನೆಗೊಂಡು 5 ವರ್ಷ ಕಳೆದಿದೆ. ಇದೀಗ ತಾಲೂಕಿನ ಜನತೆಯ ಬೇಡಿಕೆಯಾದ ವಿದ್ಯುತ್ ಉಪವಿಭಾಗ ಕಚೇರಿ ಮಂಜೂರು ಆಗಬೇಕೆಂಬ ಆಶಯ ಈಡೇರಿಸುವತ್ತ ಜೆಸ್ಕಾಂ ಮುಂದಾಗಿದೆ.ಈ ಸಂಬಂಧ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಗರಿಬೊಮ್ಮನಹಳ್ಳಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ರವಾನಿಸಿ ಹೊಸದಾಗಿ ಕೊಟ್ಟೂರು ವಿದ್ಯುತ್ ಉಪ ವಿಭಾಗ ಪ್ರಾರಂಭಿಸಲು ಬೇಕಾಗಿರುವ ಮಾಹಿತಿಯನ್ನು ಸಂಗ್ರಹಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಕೊಟ್ಟೂರು ವಿದ್ಯುತ್ ಉಪವಿಭಾಗಕ್ಕೆ ಈಗಾಗಲೇ ಕೊಟ್ಟೂರಿನ ಎರಡು ಹಾಗೂ ಉಜ್ಜಯಿನಿ ಶಾಖಾ ಕಚೇರಿಗಳಿವೆ. ಇನ್ನು ಅಲಬೂರು ಗ್ರಾಮಕ್ಕೆ ಶಾಖಾ ಕಚೇರಿಯನ್ನು ಪ್ರಾರಂಭಿಸುವ ಪ್ರಸ್ತಾವನೆಯನ್ನು ಮಾಡಿ ಇದನ್ನು ಕೊಟ್ಟೂರು ಉಪವಿಭಾಗಕ್ಕೆ ಸೇರ್ಪಡಿಸಿಕೊಳ್ಳುವಂತೆಯೂ ಅದರಲ್ಲಿ ವಿವರಿಸಲಾಗಿದೆ. ಇದುವರೆಗೂ ಕೂಡ್ಲಿಗಿ ತಾಲೂಕಿನಲ್ಲಿ ನಿರ್ವಹಿಸುತ್ತಿದ್ದ ಕೊಟ್ಟೂರಿಗೆ ಪ್ರತ್ಯೇಕ ಉಪವಿಭಾಗ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದ ಆರ್ಥಿಕ ವರಮಾನ ಮತ್ತು ಅತಿ ಹೆಚ್ಚಿನ ವಿದ್ಯುತ್ ಬಳಕೆದಾರರನ್ನು ಹೊಂದಿದೆ. ಕೊಟ್ಟೂರಿನಲ್ಲಿ ಹೊಸ ವಿಭಾಗ ಆರಂಭಿಸುವ ಮೂಲಕ ಈ ಭಾಗದ ವಿದ್ಯುತ್ ತೊಂದರೆಯನ್ನು ತಕ್ಷಣವೇ ನಿವಾರಿಸಿ ಸೂಕ್ತ ಬಗೆಯ ಸೇವೆಯನ್ನು ಗ್ರಾಹಕರಿಗೆ ಸಲ್ಲಿಸುವುದಕ್ಕೆ ನೆರವಾಗಲಿದೆ.ತಾಲೂಕಿನ ರೈತರ ವಿದ್ಯುತ್ ಪಂಪ್‌ಸೆಟ್ ಟ್ರಾನ್ಸ್‌ಫಾರ್ಮರ್‌ಗಳ ತೊಂದರೆ ನಿವಾರಣೆ ಅಗಲಿದೆ. ಅಲ್ಲದೆ ಅಗತ್ಯ ಪ್ರಮಾಣದಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಇಲ್ಲಿನ ಜನತೆಯ ತೊಂದರೆ ನಿವಾರಣೆಗೆ ಸಹಕಾರಿಯಾಗುತ್ತದೆ. ಇದಲ್ಲದೆ ವಿದ್ಯುತ್ತಿನ ಯಾವುದೇ ಸಮಸ್ಯೆ ಅಥವಾ ಬೇಡಿಕೆಗಳು ಇದ್ದರೆ ಕೂಡ್ಲಿಗಿಗೆ ಪದೇ ಪದೇ ಅಲೆದಾಡುವ ಸಮಸ್ಯೆಯೂ ನೀಗುತ್ತದೆ.
ಈ ಹಿಂದೆ ಕೊಟ್ಟೂರು ವಿದ್ಯುತ್ ಉಪವಿಭಾಗ ಪ್ರಾರಂಭ ಮಾಡಬೇಕೆಂಬ ಪ್ರಸ್ತಾಪವಿದ್ದಾಗ ಜೆಸ್ಕಾಂನವರು ತೀವ್ರ ಬಗೆಯ ಆರ್ಥಿಕ ಸಮಸ್ಯೆ ಬಾಧಿಸುತ್ತಿದ್ದು, ಹೀಗಾಗಿ ಕೊಟ್ಟೂರಿನಲ್ಲಿ ಉಪಕೇಂದ್ರ ಸ್ಥಾಪಿಸಲು ಆಗುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದರು. ಜತೆಗೆ ವಿದ್ಯುತ್ ಉಪವಿಭಾಗ ಕಚೇರಿ ಆರಂಭಕ್ಕೆ ಸೂಕ್ತ ಕಟ್ಟಡ ಮತ್ತು ಸ್ಥಳಾವಕಾಶ ಬೇಕು ಎಂದು ಹೇಳುತ್ತಿದ್ದರು.ಈಗಾಗಲೇ ಕೊಟ್ಟೂರು ಪಟ್ಟಣದ ವಿದ್ಯುತ್ ಶಾಖಾಧಿಕಾರಿಗಳ ಕಾರ್ಯಾಲಯದ ಮಗ್ಗುಲಲ್ಲಿ ಸಹಾಯಕ ಕಾರ್ಯನಿರ್ವಾಹಕರ ಕಚೇರಿ ನಿರ್ವಹಣೆಗೆ ಸೂಕ್ತ ಕಟ್ಟಡ ಇದೆ, ಈ ಕಟ್ಟಡ ಖಾಲಿಯಾಗಿದೆ. ಇದನ್ನು ಬಳಸಿಕೊಳ್ಳಬಹುದು ಎಂದು ವಿದ್ಯುತ್ ಗುತ್ತಿಗೆದಾರರು, ಜೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿ ಮನವಿ ಪತ್ರ ರವಾನಿಸಿದ್ದಾರೆ.
ಇನ್ನಾದರೂ ಈ ಕಟ್ಟಡವನ್ನು ಬಳಸಿಕೊಂಡು ಭವಿಷ್ಯದಲ್ಲಿ ತಾಲೂಕಿನ ಜನತೆಗೆ ಉತ್ತಮ ವಿದ್ಯುತ್ ಸೇವೆ ಸಲ್ಲಿಸಲು ನೆರವಾಗಲೂ ಹೊಸ ವಿಭಾಗವನ್ನು ಶೀಘ್ರವೇ ಪ್ರಾರಂಭಿಸಲು ಮುಂದಾಗಬೇಕು ಎಂದು ಗುತ್ತಿಗೆದಾರರ ಸಂಘ ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಅಂಕಿಮ ತೀರ್ಮಾನ:
ಕೊಟ್ಟೂರಿನಲ್ಲಿ ಹೊಸದಾಗಿ ವಿದ್ಯುತ್ ಉಪವಿಭಾಗ ರಚನೆ ಮಾಡುವ ಸಂಬಂಧ ಇದೀಗ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಸ್ತಾವನೆ ಮೂಲಕ ಸೂಕ್ತ ಕ್ರಮಕ್ಕೆ ಸೂಚಿಸಿ ಹಗರಿಬೊಮ್ಮನಹಳ್ಳಿ ವಿಭಾಗಕ್ಕೆ ಪತ್ರ ಬರೆದಿದ್ದಾರೆ. ಕೊಟ್ಟೂರಿನಲ್ಲಿ ಕಟ್ಟಡ ಇರುವುದರಿಂದ ಹೊಸ ಉಪ ವಿಭಾಗ ಕಚೇರಿಯನ್ನು ತೆರೆಯ ಲು ಅನುಕೂಲವಾಗಿದೆ. ಈ ಸಂಬಂದ ಜೆಸ್ಕಾಂ ಮಂಡಳಿಯ ಸಭೆ ತೀರ್ಮಾನ ಕೈಗೊಂಡು ಅಂತಿಮ ಆದೇಶ ಹೊರಡಿಸಬೇಕಿದೆ ಎಂದರು ಕೂಡ್ಲಿಗಿ ಜೆಸ್ಕಾಂ ಎಇಇ ಪ್ರಕಾಶ್ ಪತ್ತೆನೂರು.ಮೂಲ ಸೌಕರ್ಯಕ್ಕೆ ಸಿದ್ಧ: ಉಪವಿಭಾಗ ಕೊಟ್ಟೂರಿನಲ್ಲಿ ತೆರೆಯಲು ಕಟ್ಟಡ ಸೇರಿ ಮತ್ತಿತರರ ಮೂಲ ಸೌಕರ್ಯಗಳು ಸಿದ್ಧವಿದೆ. ಈ ಸಂಬಂದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದೇವೆ. ಉಪವಿಭಾಗ ತೆರೆಯುವುದರಿಂದ ತಾಲೂಕಿನ ಸಾರ್ವಜನಿಕರ ವಿದ್ಯುತ್ ತೊಂದರೆ ನಿವಾರಣೆಯಾಗುವ ಆಶಾಭಾವ ಹೊಂದಿದ್ದೇವೆ ಎಂದರು ವಿದ್ಯುತ್ ಗುತ್ತಿಗೆದಾರರ ಸಂಘದ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಬಸವರಾಜ.