ಹುಬ್ಬಳ್ಳಿ: ಬಸವನಬಾಗೇವಾಡಿಯಲ್ಲಿ ಉದ್ಘಾಟನೆಗೊಂಡ "ಕ್ರಾಂತಿವೀರ ಬ್ರಿಗೇಡ್ " ದಲಿತರು, ಹಿಂದುಳಿದವರ ಏಳ್ಗೆಗಾಗಿ ನಿರ್ಮಾಣವಾದ ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ನೊಂದ ದಲಿತರು, ಹಿಂದುಳಿದವರಿಗೆ ನ್ಯಾಯ ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಬ್ರಿಗೇಡ್ ಸಂಸ್ಥಾಪಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬ್ರಿಗೇಡ್‌ನ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಸಂಘಟನೆಯ ಉದ್ಘಾಟನೆಯ ದಿನದಂದು ಎಲ್ಲ ಸಮಾಜದ 1008 ಸಾಧು- ಸಂತರ ಪಾದಪೂಜೆ ಮಾಡುವ ಸಂಕಲ್ಪ ಹಾಕಿಕೊಳ್ಳಲಾಗಿತ್ತು. ಸರ್ವ ಸಮಾಜದ 1200ಕ್ಕೂ ಅಧಿಕ ಸಾಧು-ಸಂತರು ಪಾಲ್ಗೊಂಡಿದ್ದರು. ಈ ಮೂಲಕ ಸಂಘಟನೆಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಸಾಧು-ಸಂತರ ಸಮಾಗಮವಾಗಿರುವುದು ಇತಿಹಾಸದಲ್ಲೇ ಮೊದಲು ಎಂದರು.
ಈ ವೇಳೆ ಕ್ರಾಂತಿವೀರ ರಾಯಣ್ಣ ಬ್ರಿಗೇಡ್ ವಕ್ತಾರ ವೀರಣ್ಣ ಹಳೇಗೌಡ, ಅಮರೇಶ್ವರ ಶ್ರೀ, ಮಾದುಲಿಂಗ ಮಹಾರಾಜರು, ಕೆಂಚರಾಯ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಬಸವರಾಜ ನಿಡಗುಂದಿ ಸೇರಿದಂತೆ ಹಲವರಿದ್ದರು.
ಹಿಂದುತ್ವದ ವಿಷಯದಲ್ಲಿ ಡಿ.ಕೆ. ಶಿವಕುಮಾರ ಮಾದರಿಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಿಂದುತ್ವದ ಪರ ತಮ್ಮ ನಿಲುವು ಪ್ರಕಟಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಅವರಿಗೆ ಈಗಲಾದರೂ ಬುದ್ಧಿ ಬಂದಿದೆ. ಅದರಂತೆ ಮುಖಮಂತ್ರಿ ಸಿದ್ದರಾಮಯ್ಯನವರಿಗೂ ಬುದ್ದಿ ಬರಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಅವರ ಹಿಂದುತ್ವದ ನಿಲುವು ನಾಟಕವೋ, ನಿಜವೋ ಎಂಬುದನ್ನು ಆ ದೇವರೇ ತೀರ್ಮಾನ ಮಾಡುತ್ತಾನೆ ಎಂದರು.ಸ್ವಾಂತಂತ್ರ್ಯ ಪೂರ್ವದಲ್ಲಿನ ಕಾಂಗ್ರೆಸ್ಸಿಗರು ಸ್ವಾತಂತ್ರ್ಯದ ಹೋರಾಟ ಮಾಡಿದ್ದೇ ಹಿಂದುತ್ವವನ್ನು ಮತ್ತೆ ವೈಭವೀಕರಿಸುವ ಉದ್ದೇಶದಿಂದ. ಹಳೇ ಕಾಂಗ್ರೆಸ್ಸಿಗರ ರಕ್ತದಲ್ಲಿ ಈಗಲೂ ಹಿಂದುತ್ವ ಅಡಗಿದೆ. ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಧರ್ಮದ್ರೋಹಿಗಳಲ್ಲ. ಆದರೆ, ಕೆಲವರು ಮತಬ್ಯಾಂಕ್‌ಗಾಗಿ ಮುಸ್ಲಿಮರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಡಿ.ಕೆ. ಶಿವಕುಮಾರ ಭಾಗಿಯಾಗಿದ್ದರು. ಅವರಿಗೆ ಈಗ ಹಿಂದುತ್ವದ ಬಗ್ಗೆ ಜಾಗೃತಿ ಉಂಟಾಗಿದೆ. ಮಹಾತ್ಮ ಗಾಂಧೀಜಿ ಸಹ ಹಿಂದುತ್ವ ಪ್ರತಿಪಾದಿಸಿದ್ದರು. ಅವರ ಸಮಾಧಿ ಮೇಲೆ ಇಂದಿಗೂ ಹೇ ರಾಮ್ ಎಂದು ಬರೆಯಲಾಗಿದೆಯೇ ಹೊರತು ಹೇ ಅಲ್ಲಾ, ಹೇ ಏಸು ಎಂದು ಬರೆದಿಲ್ಲ. ಎಂದಿಗೂ ಹಿಂದುತ್ವ ಎಂಬುವುದು ಬಿಜೆಪಿ ಸ್ವತ್ತಲ್ಲ. ಸರ್ವ ಜನರ ಸುಖ ಬಯಸುವುದೇ ಹಿಂದುತ್ವ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.ಹಿಂದುತ್ವ ನಾಶಮಾಡಲು ಯತ್ನಿಸಿದ ವ್ಯಕ್ತಿ, ಪಕ್ಷ ದೇಶದಲ್ಲಿ ನಿರ್ನಾಮ ಆಗುತ್ತಿದೆ. ಯಾವುದಾದರೂ ರಾಜಕಾರಣಿಗಳ ಮಗಳನ್ನು ಮುಸ್ಲಿಮರು ಆಸೆ ತೋರಿಸಿ, ಅನ್ಯಾಯ ಮಾಡಿದಾಗ ಲವ್ ಜಿಹಾದ್ ವಿರುದ್ಧದ ಕಾನೂನು ಸರಿ ಎಂಬುದು ಆಗ ಗೊತ್ತಾಗುತ್ತದೆ. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರನ್ನು ಶಿವಮೊಗ್ಗ ಜಿಲ್ಲೆಗೆ ಬರದಂತೆ ಸರ್ಕಾರ ನಿಷೇಧ ಹೊರಡಿಸಿರುವುದು ಸರಿಯಲ್ಲ. ಹೆಣ್ಣುಮಕ್ಕಳ ರಕ್ಷಣೆಗಾಗಿ ಮುತಾಲಿಕ್ ಕೆಲಸ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಯಾರನ್ನೋ ತೃಪ್ತಿಪಡಿಸಲು ಮುತಾಲಿಕ್ ಅವರಂತಹ ರಾಷ್ಟ್ರಭಕ್ತರಿಗೆ ಈ ರೀತಿಯ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದರು.