ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ಜೀವಕಳೆ: ಶಾಸಕ ಎಚ್.ಡಿ. ತಮ್ಮಯ್ಯ

KannadaprabhaNewsNetwork |  
Published : Oct 26, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಬರಗಾಲದ ನಡುವೆಯೂ ಎತ್ತಿನಹೊಳೆ ಯೋಜನೆ ನೀರಿನಿಂದ ಕೆ.ಬಿ. ಹಾಳ್ ಸೇರಿದಂತೆ ಸುತ್ತಮುತ್ತಲಿನ ಹಲವು ಕೆರೆಗಳು ತುಂಬಿ ಈ ಭಾಗದ ರೈತರು ಹಾಗೂ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನ ದಿಂದ ರೈತರ ತೋಟಗಳು, ಜಾನುವಾರುಗಳು ಮತ್ತು ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ವಡ್ಡರಹಳ್ಳಿ ಮತ್ತು ಕೆ.ಬಿ. ಹಾಳ್ (ಕುರುಬರ ಬೂದಿಹಾಳ್) ಕೆರೆಗಳಿಗೆ ಗಂಗೆ ಪೂಜೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬರಗಾಲದ ನಡುವೆಯೂ ಎತ್ತಿನಹೊಳೆ ಯೋಜನೆ ನೀರಿನಿಂದ ಕೆ.ಬಿ. ಹಾಳ್ ಸೇರಿದಂತೆ ಸುತ್ತಮುತ್ತಲಿನ ಹಲವು ಕೆರೆಗಳು ತುಂಬಿ ಈ ಭಾಗದ ರೈತರು ಹಾಗೂ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನ ದಿಂದ ರೈತರ ತೋಟಗಳು, ಜಾನುವಾರುಗಳು ಮತ್ತು ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ತಾಲೂಕಿನ ವಡ್ಡರಹಳ್ಳಿ ಮತ್ತು ಕೆ.ಬಿ. ಹಾಳ್ (ಕುರುಬರ ಬೂದಿಹಾಳ್) ಕೆರೆಗಳಿಗೆ ಭಾನುವಾರ ಗಂಗೆ ಪೂಜೆ ನೆರವೇರಿಸಿ ಮಾತನಾಡಿದರು. ಹಿಂದೆ ನೀರಿಲ್ಲದೆ ಬಿಕೋ ಎನ್ನುತ್ತಿದ್ದ ಕೆ.ಬಿ. ಹಾಳ್ ಕೆರೆಗೆ ಇದೀಗ ನೀರು ಹರಿದು ಬಂದಿರುವುದು ಗ್ರಾಮ ಸ್ಥರಿಗೆ ಸಂತಸ ತಂದಿದೆ. ಕೆರೆಯಲ್ಲಿ ಸಂಗ್ರಹವಾದ ನೀರನ್ನು ಮಿತವಾಗಿ ಬಳಸುವ ಜತೆಗೆ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

2013ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ್ದರು. 2023ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಅನುಷ್ಠಾನಕ್ಕೆ ವೇಗ ದೊರೆತ ಪರಿಣಾಮ ಬರದ ನಡುವೆಯೂ ಹಲವು ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿದೆ ಎಂದರು.

ಹಳೆಬೀಡು, ಕೆ.ಬಿ. ಹಾಳ್, ಬೆಳವಾಡಿ, ಕುರುಬರಹಳ್ಳಿ, ಮಚೇನಹಳ್ಳಿ ಹಾಗೂ ದೇವನೂರು ಕೆರೆಗಳಿಗೆ ನೀರು ತುಂಬಿಸ ಲಾಗಿದೆ. ವಡೇರಹಳ್ಳಿ, ನಾಗರಾಳು, ಎಸ್. ಬಿದರೆ ಮತ್ತು ಗುಣಸಾಗರ ಭಾಗಗಳಲ್ಲೂ ಪಂಪ್‌ಗಳ ಮೂಲಕ ನೀರು ಹರಿಸುವ ಕಾರ್ಯ ಮುಂದುವರಿದಿದೆ. ಕೆರೆಗಳನ್ನು ತುಂಬಿಸುವ ಪ್ರಯತ್ನಕ್ಕೆ ಸ್ಥಳೀಯ ಮುಖಂಡರು, ರೈತರು ಮತ್ತು ಯುವಕರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.ಭದ್ರಾ ಉಪ ಕಣಿವೆ ಯೋಜನೆ 3ನೇ ಹಂತದ ಕಾಮಗಾರಿಗೆ ₹312 ಕೋಟಿ ವೆಚ್ಚದಲ್ಲಿ ಸರ್ಕಾರ ಮಂಜೂರಾತಿ ನೀಡಿದೆ. ನಾಗರಾಳು, ದೇವನೂರು ಮತ್ತು ಗುಣಸಾಗರ ಸುತ್ತಮುತ್ತ ಕಾಮಗಾರಿ ನಡೆಯುತ್ತಿದ್ದು, ಮುಂದಿನ 2 ವರ್ಷಗಳಲ್ಲಿ ಉಳಿದ ಕೆರೆಗಳಿಗೂ ನೀರು ಹರಿಸುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೆರವು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 5 ತಿಂಗಳೊಳಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಬದುಕಿಗೆ ನೆರವಾಗಿದೆ. ಗೃಹಲಕ್ಷ್ಮಿ ಯಡಿ ಮಹಿಳೆಯರಿಗೆ ಮಾಸಿಕ ₹2,000, ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ನಿಗದಿತ ಮಿತಿಯೊಳಗೆ ಉಚಿತ ವಿದ್ಯುತ್ ಹಾಗೂ ಯುವನಿಧಿ ಯೋಜನೆಯಡಿ ಅರ್ಹ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪದವೀಧರರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದರು.ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗಳಿಗೆ ಸುಮಾರು ₹430 ಕೋಟಿ ಜಮೆ ಮಾಡಲಾಗಿದೆ. ಜನರ ಜೀವನೋಪಾಯಕ್ಕೆ ನೆರವಾಗುವ ಜತೆಗೆ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಬೋರ್‌ವೆಲ್ ಕೊರೆಸುವುದು, ಪೈಪ್‌ಲೈನ್ ವ್ಯವಸ್ಥೆ ಸೇರಿದಂತೆ ತುರ್ತು ಕ್ರಮ ಕೈಗೊಳ್ಳಲು ಅವಕಾಶವಿದೆ. ಅರ್ಹ ರೈತರಿಗೆ ಬರ ಪರಿಹಾರ ಒದಗಿಸುವ ಪ್ರಕ್ರಿಯೆ ನಡೆಯುತ್ತಿದೆ. ವೃದ್ಧಾಪ್ಯ ಮತ್ತು ವಿಧವಾ ವೇತನ ಸಂಬಂಧ ಆದಾಯ ಮಿತಿ ಹೆಚ್ಚಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ದೇವನೂರು ಸೇರಿ ವಿವಿಧ ಗ್ರಾಮಗಳ ಶಾಲೆಗಳ ಅನುದಾನ ಒದಗಿಸಲಾಗಿದೆ. ಈ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗೂ ₹50 ಲಕ್ಷದಿಂದ ₹1 ಕೋಟಿವರೆಗೆ ಅನುದಾನ ಬಳಸುವ ಉದ್ದೇಶವಿದೆ ಎಂದರು.ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ನ್ಯಾಯಕ್ಕಾಗಿ ಸುದೀರ್ಘ ಕಾಲ ಹೋರಾಟ ನಡೆಸಿದ ಬಳಿಕ ನ್ಯಾಯಾಲಯದಲ್ಲಿ ನ್ಯಾಯ ದೊರೆತಿರುವುದು ಸಂತಸ ತಂದಿದೆ. ಸಾರ್ವಜನಿಕ ಸೇವೆ ಮಾಡಲು ದೊರೆತಿರುವ ಅವಕಾಶವನ್ನು ಜನರ ಹಿತಕ್ಕಾಗಿ ಬಳಸಿಕೊಳ್ಳುತ್ತೇನೆ ಎಂದರು.ಈ ಭಾಗದ ಕೆರೆಗಳಿಗೆ ನೀರು ಹರಿಸಿರುವುದು ರೈತರ ಪಾಲಿಗೆ ಮಹತ್ವದ ಕಾರ್ಯ. ಹಿಂದೆ ಖಾಲಿಯಾಗಿದ್ದ ಕೆರೆಗಳಲ್ಲಿ ನೀರು ತುಂಬಿರುವುದರಿಂದ ತೋಟಗಳು, ಜಾನುವಾರುಗಳು ಮತ್ತು ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಅಭಿವೃದ್ಧಿ ಕಾರ್ಯಗಳು ಯಾವುದೇ ಒಂದು ಗ್ರಾಮ ಅಥವಾ ವರ್ಗಕ್ಕೆ ಸೀಮಿತವಾಗದೆ ಎಲ್ಲ ಸಮುದಾಯಗಳಿಗೂ ಸಮಾನವಾಗಿ ತಲುಪಬೇಕು ಎಂದರು.ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು, ಬಡವರು ಹಾಗೂ ವಿವಿಧ ವರ್ಗಗಳ ಕುಟುಂಬಗಳಿಗೆ ನೆರವಾಗಿದೆ. ಪಕ್ಷದ ಕಾರ್ಯ ಕರ್ತರು ಮನೆಮನೆಗೆ ತೆರಳಿ ಜನರಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಸಮಸ್ಯೆ ಗಳಿದ್ದರೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ ಬರಗಾಲದ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಅತ್ಯಂತ ಮಹತ್ವದ್ದಾಗಿದೆ. ಕಾಫಿ, ಅಡಕೆ ಮತ್ತು ತೆಂಗಿನ ತೋಟಗಳನ್ನು ಉಳಿಸಿ ಕೊಳ್ಳಲು ನೀರಾವರಿ ವ್ಯವಸ್ಥೆ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ರೈತರು, ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಹಲವು ವರ್ಷಗಳಿಂದ ನೀರಿನ ಕೊರತೆ ಎದುರಿಸುತ್ತಿದ್ದ ಕೆರೆಗಳಲ್ಲಿ ನೀರು ತುಂಬಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಎನ್‌ಕೆ ಮಲ್ಟಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ
ಮನ್‌ ಕಿ ಬಾತ್‌ನಲ್ಲಿ ಕಲ್ಬುರ್ಗಿಯ ತೊಗರಿ ಘಮ