2025ರ ವೇಳೆಗೆ ಎತ್ತಿನಹೊಳೆ ಪೂರ್ಣಗೊಳ್ಳುವ ನೀರಿಕ್ಷೆ

KannadaprabhaNewsNetwork |  
Published : Sep 05, 2024, 12:36 AM IST
ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌  ಮಾತನಾಡಿದರು. | Kannada Prabha

ಸಾರಾಂಶ

ಜನತೆಗೆ ನೀರುಣಿಸಲು ಜಿಲ್ಲೆಯ ಭಾಗದಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ 2025ರ ಜುಲೈಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ತುಮಕೂರು: ಜನತೆಗೆ ನೀರುಣಿಸಲು ಜಿಲ್ಲೆಯ ಭಾಗದಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ 2025ರ ಜುಲೈಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೊದಲ ಹಂತದ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡುತ್ತಿರುವ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸೆ.6 ರಂದು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರ ಕಾಮಗಾರಿ ಉದ್ಘಾಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4ರಲ್ಲಿ ಸೆ. 6 ರಂದು ಮಧ್ಯಾಹ್ನ 12 ಗಂಟೆಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ1ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದಾರೆ. ಕಾಮಗಾರಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಅಣೆಕಟ್ಟಿಗೆ 1500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಮುಂದಿನ ವರ್ಷ ಅರಸಿಕೆರೆ, ತಿಪಟೂರು ಭಾಗದಲ್ಲಿನ ಕಾಮಗಾರಿ ಪೂರ್ಣಗೊಂಡು ತುಮಕೂರಿಗೆ ನೀರು ಹರಿಯಲಿದ್ದು, ಇದರಲ್ಲಿ 0.20 ಟಿಎಂಸಿ ನೀರನ್ನು ವಸಂತನರಸಾಪುರಕ್ಕೆ ಕುಡಿಯುವ ಉದ್ದೇಶಕ್ಕಾಗಿ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು. ಎತ್ತಿನಹೊಳೆ ಯೋಜನೆಗೊಳಪಡುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಹಂಚಿಕೆಯಾದ 24.01 ಟಿಎಂಸಿ ನೀರಿನಲ್ಲಿ ಜಿಲ್ಲೆಗೆ ೫.೪೭೦ ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕುಡಿಯುವ ನೀರಿಗಾಗಿ 2.294 ಟಿಎಂಸಿ, ಸಣ್ಣ ನೀರಾವರಿಯ 113 ಕೆರೆಗಳ ಭರ್ತಿ ಮಾಡಲು 3.446 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ಎತ್ತಿನಹೊಳೆ ಯೋಜನೆಯ ಮುಖ್ಯ ಕಾಲುವೆ 150 ಕಿ.ಮೀ ಉದ್ದವಿದ್ದು, ಇದರಲ್ಲಿ 102 ಕಿ.ಮೀ ಕಾಲುವೆ ಹಾಗೂ 121 ಕಿ.ಮೀ. ಉದ್ದವಿರುವ ಫೀಡರ್ ಕಾಲುವೆಯ ಕಾಮಗಾರಿಯಲ್ಲಿ 106 ಕಿ.ಮೀ. ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಯ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದ ಅವರು, ತುಮಕೂರು, ಹಾಸನ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಬೇಕೆಂದು ನೀರಾವರಿ ತಜ್ಞ ಪರಮಶಿವಯ್ಯ ಅವರು ಸರ್ಕಾರದ ಮುಂದೆ ಪ್ರಸ್ತಾಪಿಸಿ ಇದಕ್ಕೆ ನೇತ್ರಾವತಿ ತಿರುವು ಎಂದು ಹೆಸರಿಟ್ಟಿದ್ದರು ಎಂದು ತಿಳಿಸಿದರು. ನೇತ್ರಾವತಿ ತಿರುವು ಯೋಜನೆಗೆ ಮಂಗಳೂರಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಯೋಜನೆ ಕೈ ಬಿಡುವ ಸ್ಥಿತಿ ಬಂದಿತ್ತು. ಇದಾದ ಬಳಿಕ ನೀರಾವರಿ ತಜ್ಞರು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುವ ಪ್ರದೇಶವನ್ನು ಗುರುತಿಸಿ ಎತ್ತಿನಹೊಳೆ, ಕಾಡುಮನೆ ಹೊಳೆ, ಹೊಂಗದ ಹಳ್ಳ, ಕೇದಿಹೊಳೆಗಳೆಲ್ಲವೂ ಸೇರಿ ಒಂದು ಕಡೆ ಬಂದರೆ ೨೪ ಟಿಎಂಸಿ ನೀರನ್ನು ಒದಗಿಸಬಹುದೆಂದು ಅಂದಾಜಿಸಲಾಗಿತ್ತು ಎಂದು ತಿಳಿಸಿದರು. ಈ ಯೋಜನೆಯ ಸಾಧಕ-ಬಾಧಕಗಳನ್ನು, ನೀರು ತೆಗೆದುಕೊಳ್ಳುವ ಸಾಧ್ಯ-ಅಸಾಧ್ಯತೆಯನ್ನು ಸರ್ಕಾರದ ಮುಂದಿಟ್ಟಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಅಗತ್ಯವಿರುವ ಹಣಕಾಸು, ತಾಂತ್ರಿಕತೆಯನ್ನು ಅಧ್ಯಯನ ನಡೆಸಿ, 12,912.36 ಕೋಟಿ ರು. ಆಯವ್ಯಯದಲ್ಲಿ ಒದಗಿಸಿ, ಕಳೆದ ಫೆಬ್ರವರಿ 17ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದರು ಎಂದು ತಿಳಿಸಿದರು.

ಅಲ್ಲಿಂದ ಪ್ರಾರಂಭವಾದ ಎತ್ತಿನಹೊಳೆ ಯೋಜನೆಗೆ ಮೊದಲು ಚಿಕ್ಕಬಳ್ಳಾಪುರ, ಕೋಲಾರ ತದನಂತರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಹಾಸನ ಜಿಲ್ಲೆಗಳನ್ನು ಒಳಪಡಿಸಿ ಕಾಮಗಾರಿಯನ್ನು ಅನುಷ್ಟಾನಕ್ಕೆ ತರಲಾಗಿದೆ. ಯೋಜನೆಯ ಮೊತ್ತ 23,251 ಕೋಟಿ ರೂ. ತಲುಪಿದೆ. 2027ರ ಮಾರ್ಚ್‌ಗೆ ಇಡೀ ಯೋಜನೆ ಪೂರ್ಣಗೊಳ್ಳಬೇಕು ಎಂಬುದು ಇಲಾಖೆಯ ಗುರಿಯಾಗಿದೆ ಎಂದು ತಿಳಿಸಿದರು. ಹೇಮಾವತಿ ಕಾಲುವೆಯಿಂದ ಜಿಲ್ಲೆಗೆ ಕಳೆಸ ಜುಲೈ 22 ರಿಂದ ಆಗಸ್ಟ್ 25ರವರೆಗೆ 3915 ಎಂಸಿಎಫ್‌ಟಿ ನೀರು ಹರಿದಿದೆ. ಪ್ರತಿ ದಿನ 15000 ಕ್ಯೂಸೆಕ್ ನೀರು ಹರಿಯುತ್ತಿದ್ದು, ಕುಣಿಗಲ್ ತಾಲೂಕಿಗೂ ಪೂರೈಕೆಯಾಗುತ್ತಿದೆ. ಬುಗುಡನಹಳ್ಳಿ ಕೆರೆಯಲ್ಲಿ ಪ್ರಸ್ತುತ 290 ಎಂಸಿಎಫ್‌ಟಿ ನೀರು ಸಂಗ್ರಹವಿದೆ. ಸಣ್ಣ ನೀರಾವರಿಯ 27 ಕೆರೆಗಳು ಪೂರ್ಣ ಭರ್ತಿಯಾಗಿವೆ. ಆ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಇನ್ನೂ ನೀರು ಹರಿಯಲಿದೆ.

-ಡಾ. ಜಿ. ಪರಮೇಶ್ವರ್ ಗೃಹ ಸಚಿವ2022 ಎಕರೆ ಭೂಮಿಗೆ ಹಣ ಮಂಜೂರುಎತ್ತಿನಹೊಳೆ ಯೋಜನೆಗಾಗಿ ಅಗತ್ಯವಿರುವ 3117.26 ಎಕರೆ ಪ್ರದೇಶದ ಪೈಕಿ ಸ್ವಾಧೀನಪಡಿಸಿಕೊಂಡ 2022 ಎಕರೆ ವಿಸ್ತೀರ್ಣದ ಭೂಮಿಗೆ ಸರ್ಕಾರದಿಂದ ಹಣ ಮಂಜೂರಾಗಿದೆ. ಈವರೆಗೂ ಶೇ.80 ರಷ್ಟು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂ ಮಾಲೀಕರಿಗೆ ಅವಾರ್ಡ್ ಹಣ ವಿತರಿಸಲು ಸರ್ಕಾರದಿಂದ 1200 ಕೋಟಿ ರು.ಬಿಡುಗಡೆಯಾಗಿದ್ದು, ಈಗಾಗಲೇ ಭೂ ಮಾಲೀಕರಿಗೆ 448 ಕೋಟಿ ರು. ವಿತರಿಸಲಾಗಿದೆ. ಉಳಿದ 434 ಕೋಟಿ ರು. ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿಗಳ ಖಾತೆಯಲ್ಲಿದೆ. ಭೂ ಮಾಲೀಕರಿಂದ ಅಗತ್ಯ ದಾಖಲೆಗಳು ಸಲ್ಲಿಕೆಯಾಗಿ ಅನುಮೋದನೆಗೊಂಡ ನಂತರ ಅವಾರ್ಡ್ ಹಣವನ್ನು ನೀಡಲಾಗುವುದು. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡತೆ ಹಂತ-ಹಂತವಾಗಿ ಭೂ ಮಾಲೀಕರಿಗೆ ಹಣವನ್ನು ಮಂಜೂರು ಮಾಡಲಾಗುವುದು. ಯೋಜನೆಗೆ ಅಗತ್ಯವಿರುವ 397 ಕೋಟಿ ರು. ಅನುದಾನವನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪರಮೇಶ್ವರ್‌ ತಿಳಿಸಿದರು.ರೈತರ ವಿರೋಧದಿಂದ ಭದ್ರಾ ಮೇಲ್ದಂಡೆ ಕೈಬಿಟ್ಟಿದೆಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೊರಟಗೆರೆ ತಾಲೂಕಿನ ಬೈರಗೊಂಡನಹಳ್ಳಿ ಗ್ರಾಮದಲ್ಲಿ 2500 ಎಕರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 2500 ಎಕರೆ ಸೇರಿ ಒಟ್ಟು 5000 ಎಕರೆ ಭೂಮಿಯಲ್ಲಿ ಕೈಗೊಳ್ಳಲು ಭದ್ರಾ ಮೇಲ್ದಂಡೆ ಯೋಜನೆಯನ್ನು ರೂಪಿಸಲಾಗಿತ್ತು. ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಭೂಸ್ವಾಧೀನ ದರವನ್ನು ಪ್ರತಿ ಎಕರೆಗೆ ದೊಡ್ಡಬಳ್ಳಾಪುರ ತಾಲೂಕಿಗೆ 32 ಲಕ್ಷ ರು. ಕೊರಟಗೆರೆ ತಾಲೂಕಿಗೆ 12 ಲಕ್ಷ ರು. ನಿಗಧಿಪಡಿಸಿದ್ದರಿಂದ ಕೊರಟಗೆರೆ ತಾಲೂಕಿನ ರೈತರು ಈ ಯೋಜನೆ ನಮಗೆ ಬೇಡವೆಂದು ನಿರಾಕರಿಸಿದಾಗ ಸರ್ಕಾರವು ಯೋಜನೆ ಕೈಬಿಟ್ಟಿತು. ಪೂರ್ಣಗೊಂಡ ಕಾಲುವೆ ವಿವರಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ ತಿಪಟೂರಿನಲ್ಲಿ 42.45 ಕಿ.ಮೀ, ಚಿಕ್ಕನಾಯಕನಹಳ್ಳಿ 12.75 ಕಿ.ಮೀ, ತುರುವೆಕೆರೆ 2.15 ಕಿ.ಮೀ, ಗುಬ್ಬಿ 41.48 ಕಿ.ಮೀ, ತುಮಕೂರು ಗ್ರಾಮಾಂತರ 31.8, ಕೊರಟಗೆರೆ 19.091, ಮಧುಗಿರಿ (ಫೀಡರ್ ಕಾಲುವೆ) 40.90 ಕಿ.ಮೀ, ಪಾವಗಡ 42.10 ಕಿ.ಮೀ. ಕಾಲುವೆ ಹಾದು ಹೋಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ