ಭ್ರಷ್ಟಾಚಾರದ ಕೂಪವಾಗಿರುವ ಎತ್ತಿನಹೊಳೆ ಯೋಜನೆ: ಅನಂತ ಹೆಗಡೆ ಆಶೀಸರ

KannadaprabhaNewsNetwork |  
Published : Oct 19, 2024, 12:18 AM IST
ಮೂಡುಬಿದಿರೆ 14 ನೇ ಅಂತಾರಾಷ್ಟ್ರೀಯ ಲೇಕ್ ಸಮ್ಮೇಳನ ಉದ್ಘಾಟನೆ ಭ್ರಷ್ಟಾಚಾರದ ಕೂಪವಾಗಿರುವ ಎತ್ತಿನ ಹೊಳೆ: ಅನಂತ ಹೆಗ್ಡೆ ಆಶೀಸರ | Kannada Prabha

ಸಾರಾಂಶ

ಸಮ್ಮೇಳನದಲ್ಲಿ ಕೆನಡಾ, ರಷ್ಯಾ, ಸಿಂಗಾಪುರ ಹಾಗೂ ನೇಪಾಳದವರಿಂದ ಪ್ರಬಂಧ ಮಂಡನೆ ನಡೆಯಲಿದೆ. ಮೂರು ದಿನಗಳ ಅವಧಿಯಲ್ಲಿ 11 ತಾಂತ್ರಿಕ ಅಧಿವೇಶನಗಳ ಜೊತೆಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ 7 ಗೋಷ್ಠಿಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಪಶ್ಚಿಮಘಟ್ಟ ಪ್ರದೇಶ ಸಮಗ್ರ ದಕ್ಷಿಣ ಭಾರತದ ಜೀವನಾಧಾರವಾಗಿದೆ. ಇಂದು ನಮ್ಮಲ್ಲಿ ಅತಿವೃಷ್ಟಿ, ಜಲ ಪ್ರಳಯ, ಕೇರಳದ ಭೂಕುಸಿತ, ಉರಿಬಿಸಿಲಿನ ಸಂಕಷ್ಟ, ಒಣ ಭೂಮಿ ನಿಸರ್ಗ ನಿರ್ಲಕ್ಷ್ಯದ ಪರಿಣಾಮಗಳಾಗಿವೆ. ಆದರೂ ಅಲಲ್ಲಿ ನಿರಂತರ ಪರಿಸರಕ್ಕೆ ಮಾರಕವಾಗುವ ಬೆಳವಣಿಗೆಳಿಗೆ ಸರ್ಕಾರವೂ ಹೊಣೆಯಾಗುತ್ತಿದೆ. ಭ್ರಷ್ಟಾಚಾರದ ಕೂಪವಾಗಿರುವ ಎತ್ತಿನಹೊಳೆ ಯೋಜನೆ ಸಹಿತ ಶರಾವತಿಯ ಹರಿವಿಗೆ ಮಾರಕವಾಗುವ ಯೋಜನೆಗಳಿಗೆ ಹಣ ವ್ಯರ್ಥ ಪೋಲಾಗುತ್ತಿದೆ. ಅನೇಕ ಪರಿಸರ ಅಧ್ಯಯನ ವರದಿಗಳು ಕಣ್ಣ ಮುಂದಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ,ಪರಿಸರವಾದಿ ಅನಂತ ಹೆಗಡೆ ಅಶೀಸರ ಹೇಳಿದರು.

ಅವರು ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಎನರ್ಜಿ ಆ್ಯಂಡ್ ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್‌ ಇವುಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಆರಂಭಗೊಂಡ ನಾಲ್ಕು ದಿನಗಳ ಲೇಕ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಶಿವಮೊಗ್ಗದ ಸೊರಬದಲ್ಲಿ ಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿ ಯಶಸ್ಸು ಕಂಡ ಮಾದರಿ ನೀಡಿದ್ದೇವೆ, ಹೊಸನಗರ ಹೊಂಬುಜದಲ್ಲಿ ಗಣಿಗಾರಿಕೆ, ಸೋಂದಾ ಮುಂಡಿಗೆ ಕರೆ, ಕೋಲಾರದ ಅಂತರಗಂಗೆ, ಯಾದಗಿರಿಯ ಗೋಗಿ, ಶಿವಮೊಗ್ಗದ ಬಿ.ಎಚ್‌. ರಸ್ತೆ, ಕರಾವಳಿಯ ಅಳಿವೆಗಳ ಸಹಿತ ಪರಿಸರಕ್ಕೆ ಆತಂಕ ಮೂಡಿಸುವ ಘಟನೆಗಳು ಅಲಲ್ಲಿ ಕಾಣುತ್ತಿವೆ. ಮಲೆನಾಡಿನ ಕೆರೆಗಳ ಕುರಿತಂತೆ ಶ್ವೇತಪತ್ರ ಹೊರಡಿಸಬೇಕಾದ ಅನಿವಾರ್ಯತೆಯಿದೆ ಎಂದವರು ಹೆಳಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರು ಎಸಿಎಫ್ ಆಂಟನಿ ಎಸ್. ಮರಿಯಪ್ಪ ಮಾತನಾಡಿ ರಾಜ್ಯದ 33 ಇಲಾಖೆಗಳು ಮಾನವನ ಅನುಕೂಲಕ್ಕಿದೆ. ಆದರೆ ಅರಣ್ಯ ಇಲಾಖೆ ಮಾನವ ಸಹಿತ ಎಲ್ಲ ಜೀವ ವೈವಿಧ್ಯಗಳ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ರಾಜ್ಯದ ಶೇ.21 ಪಾಲು ಅರಣ್ಯಗಳ ಪೈಕಿ ಶೇ.5 ಸಂರಕ್ಷಿತ ಅರಣ್ಯವಾಗಿದೆ. ಸುಸ್ಥಿರ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ವಿನಾಶಕ್ಕೆ ಒತ್ತು ನೀಡಿ ಪ್ರಾಕೃತಿಕ ವಿಸ್ಮಯಗಳೇ ಮರೆಯಾಗುತ್ತಿವೆ. ಪಶ್ಚಿಮ ಘಟ್ಟವೂ ಶೇ. 40ರಷ್ಟು ಹಾನಿಗೊಳಗಾಗಿದೆ ಎಂದರು.

ಕೆನಡಾದ ಪರಿಸರ ಚಿಂತಕ ಡಾ.ಸಿ. ರಾಜಶೇಖರ ಮೂರ್ತಿ ಮಾತನಾಡಿ, ಕೈಗಾರಿಕೀಕರಣದ ಬಳಿಕ ಅಭಿವೃದ್ಧಿಯ ಜತೆಗೆ ಪರಿಸರದ ಮೂಲಕ್ಕೆ ಗಂಭೀರ ಆತಂಕವೂ ಎದುರಾಗಿದೆ ಎಂದರು.

ಪರಿಸರವಾದಿ ಡಾ.ಎಂ.ಡಿ. ಸುಭಾಸ್ ಚಂದ್ರನ್ ಮಾತನಾಡಿ ಸಕ್ಕರೆ ಉತ್ಪಾದನೆಯಲ್ಲಿ ನಾವು ಬ್ರೆಜಿಲ್ ಹಿಂದಿಕ್ಕಿ ನಂ.1 ಆಗಿರಬಹುದು. ಆದರೆ 1 ಕೆಜಿ ಸಕ್ಕರೆಯ ಉತ್ಪಾದನೆಗೆ 1 ಸಾವಿರ ಲೀಟರ್ ನೀರನ್ನು ಮೂಲದಲ್ಲಿ ಕಳೆದುಕೊಳ್ಳುತ್ತಿರುವುದು ದುರಂತ ಎಂದರು ಡಾ. ಹರೀಶ ಕೃಷ್ಣಮೂರ್ತಿ, ಬಿ.ಎಂ. ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಡಾ.ಎಸ್. ವಿನಯ್ ಉಪಸ್ಥಿತರಿದ್ದರು. ಘಟನಾ ಕಾರ್ಯದರ್ಶಿ ಡಾ. ದತ್ತಾತ್ರೇಯ ವಂದಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಲೇಕ್ ಸಮ್ಮೇಳನ ಅಧ್ಯಕ್ಷ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ಸಮ್ಮೇಳನದಲ್ಲಿ ಕೆನಡಾ, ರಷ್ಯಾ, ಸಿಂಗಾಪುರ ಹಾಗೂ ನೇಪಾಳದವರಿಂದ ಪ್ರಬಂಧ ಮಂಡನೆ ನಡೆಯಲಿದೆ. ಮೂರು ದಿನಗಳ ಅವಧಿಯಲ್ಲಿ 11 ತಾಂತ್ರಿಕ ಅಧಿವೇಶನಗಳ ಜೊತೆಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ 7 ಗೋಷ್ಠಿಗಳು ನಡೆಯಲಿವೆ.

PREV

Recommended Stories

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ
ಮೋದಿ ರಸ್ತೆ ಮಾರ್ಗದಲ್ಲಿ ಜನರಿಗೆ ದರ್ಶನ, ಮೆಟ್ರೋದಲ್ಲಿ ಸಂಚಾರ