ನಾಗಮಂಗಲ ಪುರಸಭೆ ಜಾಗದಲ್ಲಿದ್ದ ಅನಧಿಕೃತ 29 ಅಂಗಡಿಗಳ ತೆರವು ಯಶಸ್ವಿ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಕಳೆದ 15 ವರ್ಷಗಳಿಂದ ನಾಗಮಂಗಲ ಪುರಸಭೆ ಜಾಗಕ್ಕೆ ಯಾವುದೇ ನೆಲ ಬಾಡಿಗೆ ನೀಡದೇ ಅಕ್ರಮವಾಗಿ ವಾಸಿಸುವುದರ ಜೊತೆಗೆ ಪುರಸಭೆಗೆ ನಷ್ಟವುಂಟು ಮಾಡುತ್ತಿದ್ದರು. ಸುಮಾರು 29 ಮಂದಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣ ಪೊಲೀಸ್ ಠಾಣೆ ಮುಂಭಾಗದ ಪುರಸಭೆಗೆ ಸೇರಿದ ಜಾಗದಲ್ಲಿ ಕಳೆದ 15 ವರ್ಷಗಳಿಂದಲೂ ನೆಲಬಾಡಿಗೆ ಪಾವತಿಸದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅನಧಿಕೃತ 29 ಅಂಗಡಿಗಳನ್ನು ಪುರಸಭೆ ಹಾಗೂ ಪೊಲೀಸ್‌ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಪಟ್ಟಣ ಪಂಚಾಯ್ತಿ ಕಚೇರಿಯನ್ನು ತೆರವುಗೊಳಿಸಿದ ವೇಳೆ ಆ ಸ್ಥಳದಲ್ಲಿದ್ದ ವ್ಯಾಪಾರಸ್ಥರು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ಇದುವರೆವಿಗೂ ವ್ಯಾಪಾರ ನಡೆಸಿಕೊಂಡು ಬಂದಿದ್ದರು.

ಕಳೆದ 15 ವರ್ಷಗಳಿಂದ ಪುರಸಭೆ ಜಾಗಕ್ಕೆ ಯಾವುದೇ ನೆಲ ಬಾಡಿಗೆಯನ್ನು ಸಹ ನೀಡದೇ ಅಕ್ರಮವಾಗಿ ವಾಸಿಸುವ ಜೊತೆಗೆ ಪುರಸಭೆಗೆ ನಷ್ಟವುಂಟು ಮಾಡುತ್ತಿದ್ದರು. ಸುಮಾರು 29 ಮಂದಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.

ಈ ಜಾಗವನ್ನು ತೆರವುಗೊಳಿಸಿ ಪುರಸಭೆ ಕಚೇರಿ ನಿರ್ಮಾಣ ಅಥವಾ ಸಾರ್ವಜನಿಕವಾಗಿ ಈ ಸ್ಥಳವನ್ನು ಮೀಸಲಿರಿಸಬೇಕು ಎಂಬ ಕೂಗು ಜನಸಾಮಾನ್ಯರಿಂದ ಬಹಳ ವರ್ಷಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಪ್ರತಿಯಾಗಿ ಪುರಸಭೆಯ ಕೆಲ ಸದಸ್ಯರು ಕೈಜೋಡಿಸಿದ ಪರಿಣಾಮ ಸೋಮವಾರ ಅನಧಿಕೃತ 29 ಅಂಗಡಿಗಳು ತೆರವುಗೊಂಡವು.

ಇಲ್ಲಿನ ವ್ಯಾಪಾರಸ್ಥರಿಗೆ ತಾವು ಈ ಹಿಂದೆ ಬಾಡಿಗೆದಾರರಾಗಿದ್ದರೆ ಅಥವಾ ಸೂಕ್ತ ದಾಖಲೆ ಇದ್ದರೆ ನೀಡುವಂತೆ ಪುರಸಭೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ಕಾಲಾವಕಾಶ ನೀಡಿದ್ದರು. ಅಂಗಡಿಗಳನ್ನು ಉಳಿಸಿಕೊಳ್ಳಲು ಇಲ್ಲಿನ ವ್ಯಾಪಾರಿಗಳು ನ್ಯಾಯಾಲಯದ ಮೊರೆಯನ್ನೂ ಸಹ ಹೋಗಿದ್ದರು.

ಸಮರ್ಪಕ ದಾಖಲೆಗಳನ್ನು ಪುರಸಭೆಗೆ ಸಲ್ಲಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಪೊಲೀಸರ ಸಹಾಯದಿಂದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ತೆರವುಗೊಂಡ ಜಾಗವನ್ನು ಪುರಸಭೆ ವಶಕ್ಕೆ ಪಡೆದರು.

ಸೋಮವಾರ ಮುಂಜಾನೆ ಜೆಸಿಬಿ ಯಂತ್ರ ಸಮೇತ ಪುರಸಭೆ ಅಧಿಕಾರಿಗಳು, ಪೋಲಿಸರು ಹಾಗೂ ಪೌರಕಾರ್ಮಿಕರು ಸ್ಥಳಕ್ಕೆ ಹೋಗಿ ನಿಲ್ಲುತ್ತಿದಂತೆ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ತಮ್ಮ ಅಂಗಡಿ ಮುಗಟ್ಟುಗಳನ್ನು ಸ್ವತಃ ತಾವೇ ತೆರವು ಮಾಡಿಕೊಳ್ಳಲು ಮುಂದಾದರು.

ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ಕೆ.ಎಸ್.ನಿರಂಜನ್, ಪಟ್ಟಣ ಪೋಲಿಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಸೇರಿದಂತೆ 100 ಕ್ಕೂ ಹೆಚ್ಚು ಮಂದಿ ಪೋಲಿಸರು, ಪುರಸಭೆ ಅಧಿಕಾರಿಗಳಾದ ಕಿರಣ್‌ಕುಮಾರ್, ವೆಂಕಟೇಶ್, ನಾಗರಾಜು, ನಂದೀಶ್, ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.

ಪುರಸಭೆಯಿಂದ ನೂತನವಾಗಿ ನಿರ್ಮಿಸಲಾಗಿರುವ ಸೂಪರ್‌ ಮಾರ್ಕೆಟ್ ಕಟ್ಟಡದಲ್ಲಿ 76 ಮಳಿಗೆಗಳಿವೆ. ಅವುಗಳ ಪ್ರಾರಂಭಕ್ಕೆ ಸುತ್ತ ಮುತ್ತಲಿನ ಅಂಗಡಿ ಮುಂಗಟ್ಟುಗಳು ಸಮಸ್ಯೆ ಉಂಟು ಮಾಡುತ್ತಿದ್ದ ಕಾರಣ ಕಾಂಪ್ಲೆಕ್ಸ್ ಆಸುಪಾಸಿನಲ್ಲಿದ್ದ ಅಂಗಡಿಗಳನ್ನು ತೆರವು ಮಾಡಲಾಗಿದೆ. ಶೀಘ್ರ ವಾಣಿಜ್ಯ ಮಳಿಗೆಗಳನ್ನು ಹರಾಜು ಹಾಕಲಾಗುವುದು. ಆಗ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಪಡೆದುಕೊಳ್ಳಬಹುದು.

- ರಮೇಶ್, ಪುರಸಭೆ ಸದಸ್ಯರು, ನಾಗಮಂಗಲ

ತೆರವುಗೊಳಿಸಿರುವ 29 ಅಂಗಡಿಗಳಿಂದ ಪುರಸಭೆಗೆ ಯಾವುದೇ ನೆಲಬಾಡಿಗೆ ಬರುತ್ತಿರಲಿಲ್ಲ. ಅಲ್ಲದೇ, ಜನಸಾಮಾನ್ಯರ ಓಡಾಟಕ್ಕೆ ಹಾಗೂ ನೂತನ ಸೂಪರ್‌ ಮಾರ್ಕೆಟ್ ವಾಣಿಜ್ಯ ಮಳಿಗೆ ಕಟ್ಟಡ ಪ್ರಾರಂಭಕ್ಕೆ ಅಡಚಣೆಯಾಗುತ್ತಿತ್ತು. ಸೂಪರ್‌ ಮಾರ್ಕೆಟ್ ಆರಂಭಗೊಂಡರೆ ಪ್ರತಿ ತಿಂಗಳು ಕನಿಷ್ಠ 25 ಲಕ್ಷಕ್ಕೂ ಹೆಚ್ಚು ಅದಾಯ ಬರುತ್ತದೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತೆರವುಗೊಳಿಸಲಾಗಿದೆ.- ಶ್ರೀನಿವಾಸ್, ಮುಖ್ಯಾಧಿಕಾರಿ, ಪುರಸಭೆ, ನಾಗಮಂಗಲ.

Share this article