ದೀಪಾವಳಿ ಬಂದರೂ ಬೆಳಕು ಕಾಣದ ಕಲಘಟಗಿ

KannadaprabhaNewsNetwork |  
Published : Oct 21, 2025, 01:00 AM IST
ಕಲಘಟಗಿ ಪಟ್ಟಣದ ಪೊಲೀಸ್ ಠಾಣೆಯಿಂದ ಹಿಡಿದು ತಡಸ ಕ್ರಾಸ್ ವರೆಗೂ ಇರುವ ಬೀದಿದೀಪಗಳು ಬಂದಾಗಿರುವುದು. | Kannada Prabha

ಸಾರಾಂಶ

ಕಲಘಟಗಿ ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಪಟ್ಟಣದ ಪೊಲೀಸ್ ಠಾಣೆಯಿಂದ ತಡಸ ಕ್ರಾಸ್ ವರೆಗೂ 50ಕ್ಕೂ ಹೆಚ್ಚು ಬೀದಿದೀಪಗಳು ಬೆಳಗದೆ ಹಲವು ದಿನಗಳೇ ಗತಿಸಿದೆ. ಇದರಿಂದ ಅಪಘಾತವಾಗುವ ಜನರು ಒಬ್ಬಂಟಿ ಮಹಿಳೆಯರು ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ಶಂಕರಗುರು ರಬಕವಿ

ಕಲಘಟಗಿ:

ಮಲೆನಾಡ ಅಂಚಿನಲ್ಲಿರುವ ಕಲಘಟಗಿ ಸುತ್ತಮುತ್ತಲಿನ ಪರಿಸರ ಹಗಲಿನಲ್ಲಿ ಸದಾ ಹಸಿರಿನಿಂದ ಕಂಗೊಳಿಸಿದರೆ, ರಾತ್ರಿಯಾಗುತ್ತಿದ್ದಂತೆ ಕಗ್ಗತ್ತಲು ಆವರಿಸುತ್ತದೆ.

ಹೌದು. ಪಟ್ಟಣ ಪಂಚಾಯಿತಿ ಹಾಗೂ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಪಟ್ಟಣದಲ್ಲಿರುವ ಬೀದಿದೀಪ ಬೆಳಗುತ್ತಿಲ್ಲ. ಹೀಗಾಗಿ ಜನರ ದೀಪಾವಳಿಯನ್ನು ಕತ್ತಲಿನಲ್ಲೇ ಆಚರಿಸುವ ಪರಿಸ್ಥಿತಿ ಎದುರಾಗಿದೆ.

ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಪಟ್ಟಣದ ಪೊಲೀಸ್ ಠಾಣೆಯಿಂದ ತಡಸ ಕ್ರಾಸ್ ವರೆಗೂ 50ಕ್ಕೂ ಹೆಚ್ಚು ಬೀದಿದೀಪಗಳು ಬೆಳಗದೆ ಹಲವು ದಿನಗಳೇ ಗತಿಸಿದೆ. ಇದರಿಂದ ಅಪಘಾತವಾಗುವ ಜನರು ಒಬ್ಬಂಟಿ ಮಹಿಳೆಯರು ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಬೀದಿದೀಪ ಅಳವಡಿಸುವಂತೆ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಆದೇಶಕ್ಕೂ ಕಿಮ್ಮತ್ತಿಲ್ಲ:

ಬೀದಿದೀಪಗಳ ಅಳವಡಿಸುವ ಕುರಿತು ಸಚಿವ, ಕ್ಷೇತ್ರದ ಶಾಸಕ ಸಂತೋಷ ಲಾಡ್‌ ಅವರ ಪಟ್ಟಣದ ಮನೆಯಲ್ಲಿ ಸಭೆ ನಡೆಸಲಾಗಿತ್ತು. ಅಂದು ಹಬ್ಬದೊಳಗೆ ಬೀದಿದೀಪದ ಸಮಸ್ಯೆ ಬಗೆಹರಿಸುವಂತೆ ಪಟ್ಟಣ ಪಂಚಾಯಿತಿ ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿತ್ತು. ಸಭೆ ನಡೆದ ಹಲವು ದಿನಗಳು ಕಳೆದರೂ ಸಹ ಬೀದಿದೀಪ ಮಾತ್ರ ಬೆಳೆಗುತ್ತಿಲ್ಲ.

ಜನರಿಗೆ ಭಯ:

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪಟ್ಟಣದ ಪ್ರಮುಖ ವೃತ್ತವಾದ ಯುವಶಕ್ತಿ ಸರ್ಕಲ್‌ನಂತಹ ಸ್ಥಳಗಳಲ್ಲೂ ಬೀದಿದೀಪ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ರಾತ್ರಿಯಾಗುತ್ತಿದ್ದಂತೆ ಕಳ್ಳರ ಹಾವಳಿ ಹೆಚ್ಚಾಗಿದ್ದು ಮಹಿಳೆಯರು ರಾತ್ರಿಯಾಗುತ್ತಿದ್ದಂತೆ ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕತ್ತಲು ಆವರಿಸುವುದರಿಂದ ಸಣ್ಣ ಪುಟ್ಟ ಅಪಘಾತಗಳಾಗಿದ್ದು ಹಲವರು ಗಾಯಗೊಂಡ ಆಸ್ಪತ್ರೆ ಸೇರಿದ್ದಾರೆ. ಆದರೂ ಸಹ ಪಟ್ಟಣ ಪಂಚಾಯಿತಿ ಮಾತ್ರ ಕಣ್ತೆರೆದು ನೋಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಿ ಬೀದಿದೀಪ ಅಳವಡಿಸಲು ಕ್ರಮಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.ಬೆಳಗ್ಗೆಯಿಂದ ಸಂಜೆ ವರೆಗೂ ದುಡಿದು ಮನೆ ಸೇರಬೇಕೆಂದರೆ ಕಗ್ಗತ್ತಲು ಆವರಿಸಿದ ರಸ್ತೆಯಲ್ಲಿ ಭಯದಲ್ಲಿಯೇ ಸಂಚರಿಸುವಂತಾಗಿದೆ. ಈಗಲಾದರೂ ಪಪಂ, ಸಂಬಂಧಿಸಿದ ಅಧಿಕಾರಿಗಳು ಬೀದಿದೀಪ ದುರಸ್ತಿಗೊಳಿಸಲಿ.

ನಾಗವೇಣಿ ಕುಂಬಾರ, ಸ್ಥಳೀಯ ನಿವಾಸಿ ಬೀದಿದೀಪಗಳ ದುರಸ್ತಿ ಕಾರ್ಯ ಆರಂಭವಾಗಿದ್ದು ಕೆಲವೆಡೆ ದುರಸ್ತಿ ಮಾಡಬೇಕಿದೆ. ಶೀಘ್ರವೇ ದುರಸ್ತಿಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು.

ಚಂದ್ರು ಬಿ, ಕಲಘಟಗಿ ಪಪಂ ಮುಖ್ಯಾಧಿಕಾರಿ

PREV

Recommended Stories

ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ: ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ
ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಬೆಳೆಸಬೇಕಿದೆ: ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ