ನರಗುಂದ: ಚುನಾವಣೆಯಲ್ಲಿ ಸೋತ ರಾಜಕಾರಣಿಯೊಬ್ಬ ದುಡ್ಡು ಮಾಡೋದು ಹೇಗೆ ಎಂಬುದನ್ನು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರಿಂದ ಕಲಿಯಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಲೇವಡಿ ಮಾಡಿದರು.
ದುಡ್ಡು ಮಾಡುವುದಕ್ಕಾಗಿ, ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಎಂದು ಹೇಳಿ ಗುತ್ತಿಗೆದಾರರ ಬಿಲ್ ತಡೆ ಹಿಡಿದು ಅವರ ಜತೆ ಸಭೆ ನಡೆಸಿ ಹೊಂದಾಣಿಕೆ ಮಾಡಿಕೊಂಡು ಐದಾರು ಕೋಟಿ ಹಣ ಪಡೆದಿರುವ ವಿಷಯ ಗುತ್ತಿಗೆದಾರರ ಬಾಯಿಯಿಂದಲೇ ಕೇಳಿದ್ದೇನೆ ಎಂದರು.
ನಾಲ್ಕುಬಾರಿ ಸೋಲಿಸಿರುವೆ: ಬಿ.ಆರ್. ಯಾವಗಲ್ಲ ನನ್ನ ವಿರುದ್ಧ 6 ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಸೋತಿದ್ದಾರೆ. ಮೊದಲ ಬಾರಿ ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ಮತ್ತು 2013 ರಲ್ಲಿ ಗುಂಡೇಟು ಬಿದ್ದು ಆಸ್ಪತ್ರೆಯಲ್ಲಿದ್ದಾಗ ಸೋತಿದ್ದೇನೆ. ಅವರ ವಿರುದ್ಧ ಸದಾ ಗೆಲುವನ್ನೇ ಕಂಡಿದ್ದೇನೆ. ಹಿರಿಯರಾದ ಇವರಿಗೆ ಗೌರವ ಕೊಟ್ಟು ಯಾವುದೇ ಟೀಕೆ ಟಿಪ್ಪಣಿ ಮಾಡದೇ ನಿಷ್ಕ್ರಿಯ ರಾಜ್ಯ ಸರ್ಕಾರದಲ್ಲಿ ಜನರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.ನವಲಗುಂದ ತಾಲೂಕಿನ ಜಾವೂರಿನಿಂದ ನರಗುಂದ ಮತಕ್ಷೇತ್ರಕ್ಕೆ ಬಂದಾಗ ಹಿರಿಯರಾದ ಎಲ್.ಎಸ್.ಪಾಟೀಲ ನಿಮ್ಮನ್ನು ಕರೆದುಕೊಂಡು ನರಗುಂದ ಜನತೆಯ ಪರಿಚಯ ಮಾಡಿಸಿ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿ 5 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಅವರ ಆಶೀರ್ವಾದ ಇಲ್ಲದಿದ್ದರೆ ತಾವು ಶಾಸಕರಾಗುತ್ತಿರಲಿಲ್ಲ. ನಿಮಗಾಗಿ ಹಗಲಿರಳು ಕೆಲಸ ಮಾಡಿದ ಕಾರ್ಯಕರ್ತರನ್ನು ಅಧ್ಯಕ್ಷ ಮಾಡುವ ಬದಲು ನಿಮ್ಮ ಮಕ್ಕಳನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂದು ಹರಿಹಾಯ್ದರು.
₹200 ಕೋಟಿ ಬಿಡುಗಡೆ: ನನ್ನನ್ನು ಆಯ್ಕೆ ಮಾಡಿದ ಜನತೆಯ ಋಣ ತೀರಿಸಲು ಎಚ್.ಕೆ. ಪಾಟೀಲ ಹಾಗೂ ಸಿಎಂ ಬಳಿ ಅನುದಾನಕ್ಕಾಗಿ ಅಲೆದಾಡಿದ ಮಾತ್ರಕ್ಕೆ ಇದು ಹೊಂದಾಣಿಕೆ ರಾಜಕಾರಣ ಹೇಗೆ ಆಗುತ್ತದೆ? ಕಾಂಗ್ರೆಸ್ ಶಾಸಕ ರಾಜು ಕಾಗೆ, ಗವಿಯಪ್ಪ ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜಮೀರ ಅಹ್ಮದ್ ಅವರ ಬಳಿ, ನಮ್ಮ ಕ್ಷೇತ್ರಕ್ಕೆ ಒಂದಾದರೂ ಮನೆ ನೀಡುವಂತೆ ಕೇಳಿದರೆ 2025 ರ ನಂತರ ಕೇಳ್ರಿ ಅನ್ನುತ್ತಾರೆ. ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ಕಾರ್ಯ ಮಾಡದೇ ಸಂದಿಗ್ಧ ಸ್ಥಿತಿಯಲ್ಲಿದೆ ಎಂದು ಸಿ.ಸಿ.ಪಾಟೀಲ ಲೇವಡಿ ಮಾಡಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಅಜ್ಜಪ್ಪ ಹುಡೇದ, ಬಿ.ಬಿ. ಐನಾಪೂರ, ಸೋಮಾಪುರ, ಎಸ್.ಆರ್. ಪಾಟೀಲ, ಚಂದ್ರು ದಂಡಿನ, ಗುರಣ್ಣ ಆದೆಪ್ಪನವರ, ಸಂಗನಗೌಡ ಪಾಟೀಲ, ದೇವಣ್ಣ ಕಲಾಲ, ಬಸಪ್ಪ ಮಳಗಿ, ಕಿರಣ ಮುಧೋಳೆ, ನವೀನ ಪಾಟೀಲ, ರಾಚನಗೌಡ ಪಾಟೀಲ, ನಾಗನಗೌಡ ತಿಮ್ಮನಗೌಡ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.