ಅಜೀಜಅಹ್ಮದ ಬಳಗಾನೂರ
ಕಾಯಿಪಲ್ಲೆ ಮಾರಾಕ ಅಂಗಡಿ ಕೊಡ್ತೀನಂತ ಬರೀ ಹೇಳೋದ ಆತ್ರಿ. ಇಲ್ಲಿವರೆಗೂ ಕೊಟ್ಟಿಲ್ಲ. ಬರೋ ದೀಪಾವಳಿ ಹಬ್ಬದೊಳಗಾದ್ರೂ ಅಂಗಡಿ ಕೊಟ್ರ ನಾಲ್ಕು ಕಾಸಾದ್ರು ದುಡ್ಕೋತಿವ್ರಿ...
ಇದು ಇಲ್ಲಿನ ಜನತಾ ಬಜಾರ್‌ನ ಮುಂಭಾಗದಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ದ್ಯಾಮವ್ವ ಎಂಬ ವೃದ್ಧೆಯ ಅಳಲಿದು. ಜನನಿಬಿಡ ಪ್ರದೇಶವಾಗಿರುವ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿರುವ ಜನತಾ ಬಜಾರ್ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಉದ್ಘಾನೆಯಾಗಿ ಒಂದು ವರ್ಷ ಕಳೆದರೂ ವ್ಯಾಪಾರಸ್ಥರಿಗೆ ಮಾತ್ರ ಮಳಿಗೆ ಹಂಚಿಕೆಯಾಗಿಲ್ಲ.ಹು-ಧಾ ಸ್ಮಾರ್ಟ್‌ಸಿಟಿ ಯೋಜನೆಯ ಅಡಿ ₹ 18.5 ಕೋಟಿ ವೆಚ್ಚದಲ್ಲಿ 2019ರಲ್ಲೇ ಕಾಮಗಾರಿ ಪ್ರಾರಂಭಿಸಿ 2022 ಅಕ್ಟೋಬರ್‌ನಲ್ಲಿ ಪೂರ್ಣಗೊಳಿಸಿದ್ದು, 2023ರ ಫೆಬ್ರುವರಿ 19ರಂದು ಉದ್ಘಾಟಿಸಲಾಗಿದೆ. ಇದಾದ ಬಳಿಕ ಸ್ಮಾರ್ಟ್‌ಸಿಟಿಯಿಂದ ಮಹಾನಗರ ಪಾಲಿಕೆಗೂ ಈ ಕಟ್ಟಡ ಹಸ್ತಾಂತರವಾಗಿದೆ. ಆದರೆ, ಈ ವರೆಗೂ ವ್ಯಾಪಾರಸ್ಥರಿಗೆ ಹಂಚಿಕೆಯಾಗಿಲ್ಲ.
ಈ ಕಟ್ಟಡವು ಎರಡು ಅಂತಸ್ತು ಹೊಂದಿದ್ದು, ಒಟ್ಟು ತರಕಾರಿ ಮಾರಾಟದ 177 ಕಟ್ಟೆ, 57 ಮಳಿಗೆ ನಿರ್ಮಿಸಲಾಗಿದೆ. ಇನ್ನೂ 56 ವ್ಯಾಪಾರಸ್ಥರಿಗೆ ಕಟ್ಟೆಗಳ ವ್ಯವಸ್ಥೆ ಮಾಡಿಲ್ಲ. ಇದಕ್ಕಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ, ಆ ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ವ್ಯಾಪಾರಸ್ಥರು ಜನತಾ ಬಜಾರಿನ ಹೊರಗಿನ ರಸ್ತೆ ಮೇಲೆ ವ್ಯಾಪಾರ ಮಾಡುವಂತಾಗಿದೆ.
ಈ ನೂತನ ಕಟ್ಟಡ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಹೊರಗಿನಿಂದ ಸುಂದರವಾಗಿ ಕಾಣುತ್ತದೆ. ಒಳಹೊಕ್ಕರೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಇಸ್ಪೀಟ್ ಎಲೆಗಳ ಕಟ್ಟು, ನಿರೋಧ ಕಣ್ಣಿಗೆ ರಾಚುತ್ತವೆ. ಅಂದರೆ, ಪ್ರತಿನಿತ್ಯ ರಾತ್ರಿ ಅನಧಿಕೃತ ಬಾರ್, ಇಸ್ಪೀಟ್ ಅಡ್ಡೆಯಾಗುತ್ತದೆ. ಕಟ್ಟಡದೊಳಗೆ ಹಾಕಲಾಗಿದ್ದ ಎಲೆಕ್ಟ್ರಿಕಲ್ ಸ್ವಿಚ್ ಬೋರ್ಡ್, ಟೈಲ್ಸ್‌ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಿಡಕಿ, ಗ್ಲಾಸ್‌ಗಳ ಸ್ಥಿತಿಯಂತೂ ಹೇಳತೀರದಾಗಿದೆ.
ಸ್ಮಾರ್ಟ್‌ಸಿಟಿ ಅಧಿಕಾರಿಗಳು ಈ ಮಾರುಕಟ್ಟೆಯನ್ನು ಹಸ್ತಾಂತರಿಸಿ ಕೈ ತೊಳೆದುಕೊಂಡಿದ್ದಾರೆ. ಆದರೆ, ವ್ಯಾಪಾರಸ್ಥರಿಗೆ ಹಂಚಿಕೆ ಮಾಡಿ ಸುಸ್ಥಿತಿಯಲ್ಲಿ ಇಡಬೇಕಾದ ಮಹಾನಗರ ಪಾಲಿಕೆ ಮಾತ್ರ ಮೌನಕ್ಕೆ ಜಾರಿದೆ. ಇದರಿಂದಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಲಾಗಿರುವ ಜನತಾ ಬಜಾರ್ ಸೂಕ್ತ ಬಳಕೆಯಾಗುತ್ತಿಲ್ಲ.
ಸಚಿವರ ಮಾತಿಗೂ ಬೆಲೆಯಿಲ್ಲ: