ಕುಷ್ಟಗಿ:
ಸಂವಿಧಾನ ಬದಲಾಯಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿರುವುದನ್ನು ಖಂಡಿಸಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಡಿಸಿಎಂ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರ ಅವಕಾಶ ನೀಡದೆ ಇರುವುದರಿಂದ ವಾಗ್ವಾದ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಈ ವೇಳೆ ಮಾತನಾಡಿ ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವು ಸಾರ್ವಭೌಮವಾಗಿದೆ. ಸಾರ್ವತ್ರಿಕವಾದ ಸಂವಿಧಾನವಾಗಿದ್ದು ಅದನ್ನು ಬದಲಾವಣೆ ಮಾಡಲು ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರ ಬರೀ ಓಲೈಕೆ ರಾಜಕಾರಣ ಮಾಡುತ್ತಿದೆ. ಇದೀಗ ಮುಸ್ಲಿಂಮರಿಗೆ ಹೆಚ್ಚಿನ ಮೀಸಲಾತಿ ನೀಡಲು ಸಂವಿಧಾನ ಬದಲಿಸುವ ಮಾತನ್ನು ಉಪಮುಖ್ಯಮಂತ್ರಿ ಹೇಳಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ ಸಿಡಿ ಮಾಡುವ ಮೂಲಕ ಸಿನಿಮಾ ತೆಗೆಯಲು ಹೊರಟ್ಟಿದ್ದಾರೆ ಎಂದು ಆರೋಪಿಸಿರುವ ಮಹಾಂತೇಶ, ಸಚಿವ ರಾಜಣ್ಣ ಹನಿಟ್ರ್ಯಾಪ್‌ನ್ನು ನಮ್ಮವರೇ ನನ್ನ ಮೇಲೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿಕೆಶಿ ವಿರುದ್ಧ ಆರೋಪಿಸಿದ್ದಾರೆ ಎಂದರು.ಈ ಸರ್ಕಾರಕ್ಕೆ ಬಡವರ, ದೀನ ದಲಿತರ, ಹಿಂದುಳಿದವರ ಅಭಿವೃದ್ಧಿ ಬೇಕಾಗಿಲ್ಲ. ಇವರ ಆಡಳಿತಕ್ಕೆ ಜನ ಬೇಸತ್ತು ಹೋಗಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳಿಪಟ ಆಗುವುದು ನಿಶ್ಚಿತ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ರವಿಕುಮಾರ ಹಿರೇಮಠ, ನಬಿಸಾಬ್ ಕುಷ್ಟಗಿ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ಬಸವರಾಜ್ ಬುಡಕುಂಟಿ, ಶಶಿಧರ ಕವಲಿ, ಪ್ರಭುಶಂಕರಗೌಡ ಪಾಟೀಲ, ಕಲ್ಲೇಶ ತಾಳದ, ಚರಣರಾಜ್ ಮೇಲಿನಮನಿ, ರಾಜು ನಾಯಕ, ನಂಜಯ್ಯ ಗುರುವಿನ, ಜೆ.ಜೆ. ಆಚಾರ, ವೀರೇಶ ಕಲಕಬಂಡಿ, ಅಂಬಣ್ಣ ಭಜಂತ್ರಿ, ರಾಜೇಶ ಪತ್ತಾರ, ಸುಕುಮನಿ ಸ್ವಾಮಿ ಗುರುವಿನ, ಬಸವರಾಜ್ ಚೌಡ್ಕಿ, ದೊಡ್ಡಪ್ಪ ನಾಯಕ, ನಾಗರಾಜ ನಂದಾಪುರ, ಹುಲ್ಲಪ್ಪ ಟಕ್ಕಳಕಿ, ಮಲ್ಲು ಹಿರೇಮನಿ, ಸಂಗಮೇಶ ಮೇಟಿ, ಶರಣು ಮಡಿವಾಳರ, ಪ್ರಕಾಶ ತಾಳಕೇರಿ, ದ್ಯಾಮಣ್ಣ ತಳವಾರ, ಅನಂತ ನಾಯಕ, ಮೌನೇಶ ನಾಯಕ, ಬಸವರಾಜ ತಳವಾರ ಸೇರಿದಂತೆ ಇತರರು ಇದ್ದರು.ಡಿಕೆಶಿ ಪ್ರತಿಕೃತಿ ಸುಡಲು ಬಿಡದ ಪೊಲೀಸರು
ಪ್ರತಿಭಟನಾಕಾರರು ಡಿಕೆಶಿ ಪ್ರತಿಕೃತಿ ಹೊತ್ತು ತಂದು ಸುಡಲು ಯತ್ನಿಸಿದರು. ಈ ವೇಳೆ ಕೆಲಕಾಲ ಹೈಡ್ರಾಮಾ ನಡೆಯಿತು. ಪಿಎಸ್ಐ ಹನಮಂತಪ್ಪ ತಳವಾರ ಯಾವುದೇ ಪ್ರತಿಕೃತಿ ಸುಡಲು ಬಿಡುವುದಿಲ್ಲ. ನಿಮ್ಮ ಹೋರಾಟ, ಪ್ರತಿಭಟನೆ ಶಾಂತಿಯುತವಾಗಿರಲಿ ಎಂದರು. ಇದಕ್ಕೆ ಕೇಳದ ಪ್ರತಿಭಟನಾಕಾರರು ಕೆಲಕಾಲ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು, ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ನೆಲಕ್ಕೆ ಕುಳಿತು ಪ್ರತಿಭಟಿಸಿದರು. ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರ ಪ್ರತಿಕೃತಿ, ಪೋಟೋ ಸುಟ್ಟರೂ ಏನೂ ಮಾಡಲಿಲ್ಲ. ಕುಷ್ಟಗಿಯಲ್ಲಿ ಮಾತ್ರ ಬಿಜೆಪಿಗರನ್ನು ಹತ್ತಿಕ್ಕುವ ಕೆಲಸ ಪೊಲೀಸರಿಂದ ಆಗುತ್ತಿದೆ ಎಂದು ವಾಗ್ವಾದ ನಡೆಸಿದರು. ಕಾಂಗ್ರೆಸ್‌ನವರಿಗೆ ಒಂದು, ಬಿಜೆಪಿಗರಿಗೆ ಒಂದು ರೀತಿ ತಾರತಮ್ಯ ಮಾಡುವ ಕೆಲಸ ಪೊಲೀಸ್‌ರಿಂದ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.