ಡೇರಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆದ್ದರೂ ಸದ್ಯಕ್ಕೆ ಅಧಿಕೃತ ಘೋಷಣೆ ಇಲ್ಲ...!

KannadaprabhaNewsNetwork | Published : Jan 15, 2024 1:47 AM

ಸಾರಾಂಶ

ಮೇಲುಕೋಟೆ ಡೇರಿಗೆ 12 ಮಂದಿ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 7, ಕಾಂಗ್ರೆಸ್ ರೈತಸಂಘದ ಬೆಂಬಲಿತರು 5 ಸ್ಥಾನ ಪಡೆದಿದ್ದಾರೆ ಎಂದು ಮತ ಎಣಿಕೆಯಲ್ಲಿ ತಿಳಿದಿದ್ದರೂ ಹೈಕೋರ್ಟ್ ಆದೇಶದಂತೆ ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಿಲ್ಲ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಗೆಲುವು ಸಾಧಿಸಿದ್ದ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.

ಹೈಕೋರ್ಟ್ ಅಂತಿಮ ಆದೇಶದ ನಂತರ ಗೆದ್ದ ಅಭ್ಯರ್ಥಿಗಳ ಅಧಿಕೃತವಾಗಿ ಘೋಷಣೆ ಹೊರಬಿದ್ದ ನಂತರ ಒಗ್ಗಟ್ಟಾಗಿ ಡೇರಿಯ ಅಭಿವೃದ್ಧಿಗೆ ಶ್ರಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ನಿಮಗೆ ಒಳಿತು ಮಾಡಲಿ ಎಲ್ಲರೂ ಎಂದು ಹಾರೈಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಎನ್. ಸೋಮಶೇಖರ್‌, ಉಪಾಧ್ಯಕ್ಷ ತಿರುಮಲೈ, ಸದಸ್ಯ ಜಿ.ಕೆ ಕುಮಾರ್, ಆನಂದಾಳ್ವಾರ್ ಅವ್ವಗಂಗಾಧರ್ ಇತರರು ಇದ್ದರು.

ಅಧಿಕೃತವಾಗಿ ಘೋಷಣೆಯಾಗದ ಫಲಿತಾಂಶ:

ಸಂಘದ 12 ಮಂದಿ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 7, ಕಾಂಗ್ರೆಸ್ ರೈತಸಂಘದ ಬೆಂಬಲಿತರು 5 ಸ್ಥಾನ ಪಡೆದಿದ್ದಾರೆ ಎಂದು ಮತ ಎಣಿಕೆಯಲ್ಲಿ ತಿಳಿದಿದ್ದರೂ ಹೈಕೋರ್ಟ್ ಆದೇಶದಂತೆ ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಿಲ್ಲ.

ಡೇರಿಯಲ್ಲಿ ಒಟ್ಟು 345 ಮಂದಿ ಮತದಾರರ ಪೈಕಿ 230 ಮಂದಿ ಅರ್ಹರು 114 ಜನ ಅನರ್ಹರು ಎಂದು ತೀರ್ಮಾನಿಸಿದ ಕಾಡೇನಹಳ್ಳಿ ರಾಮಚಂದ್ರು ಅಧ್ಯಕ್ಷತೆಯ ಆಡಳಿತ ಸಮಿತಿ ಅನರ್ಹರು ಚುನಾವಣೆಗೂ ನಿಲ್ಲುವಂತಿಲ್ಲ. ಮತದಾನ ಪ್ರಕ್ರಿಯೆಯಲ್ಲೂ ಭಾಗವಹಿಸುವಂತಿಲ್ಲ. ಅರ್ಹರು ಮತದಾನ ಮಾಡಲು ಮತ್ತು ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ ಎಂದು ನಿರ್ಧಾರ ಮಾಡಿತ್ತು. ಈ ನಿರ್ಧಾರದ ವಿರುದ್ಧ ಆಕ್ಷೇಪ ಎತ್ತಿದ ಹಲವರು ಆಡಳಿತ ಮಂಡಳಿ ಒಂದು ಗುಂಪಿನ ಸದಸ್ಯರನ್ನು ಮಾತ್ರ ಗುರಿಯಾಗಿಸಿ ಅನರ್ಹತೆಯ ಪಟ್ಟ ಕಟ್ಟಿ ಕೆಲವರನ್ನು ಕೈಬಿಟ್ಟಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಪೈಕಿ ಲಕ್ಷೀನರಸಿಂಹನ್, ನರಸಿಂಹಯ್ಯ ಅರ್ಹರ ಪಟ್ಟಿಯಲ್ಲಿದ್ದರೂ ಚುನಾವಣೆಗೆ ನಿಲ್ಲುವಂತಿಲ್ಲ ಎಂದೂ ಆಡಳಿತ ಸಮಿತಿ ತೀರ್ಮಾನಿಸಿತ್ತು. ಆಡಳಿತ ಸಮಿತಿ ನಿರ್ಧಾರದ ವಿರುದ್ಧ ಹೈಕೋರ್ಟ್ ಮೊರೆ ಹೋದ ಲಕ್ಷೀನರಸಿಂಹನ್, ನರಸಿಂಹಯ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೋರಿ ಅನರ್ಹರಿಗೆ ಮತದಾನದ ಅವಕಾಶ ಕೋರಿದ್ದರು.

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಸಂಘದ ಆಡಳಿತ ಸಮಿತಿಯ ತೀರ್ಮಾನಕ್ಕೆ ತಡೆ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ ಅನರ್ಹರಿಗೂ ಮತದಾನಕ್ಕೆ ಅವಕಾಶ ನೀಡಿತ್ತಾದರೂ ಅಂತಿಮ ಆದೇಶ ಹೊರಡಿಸುವವರೆಗೆ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಬಾರದು ಎಂದು ಆದೇಶಿತ್ತು.

ಈ ಹಿನ್ನೆಲೆಯಲ್ಲಿ ಸುಸುತ್ರವಾಗಿ ಚುನಾವಣೆ ನಡೆಸಿ ಅಭ್ಯರ್ಥಿಗಳ ಮುಂದೆಯೇ ಮತ ಎಣಿಕೆಯನ್ನೂ ಮಾಡಿಸಿದ ಚುನಾವಣಾಧಿಕಾರಿ ಆನಂದ ನಾಯಕ ಮತ ಎಣಿಕೆ ವಿವರಗಳನ್ನು ಪೆಟ್ಟಿಗೆಯಲ್ಲಿ ಮೊಹರು ಮಾಡಿ ಎರಡೂ ಕಡೆಯವರಿಗೆ ಚುನಾವಣೆ ಎಲ್ಲ ಪ್ರಕ್ರಿಯೆಯನ್ನೂ ಮುಕ್ತಾಯಗೊಳಿಸಲಾಗಿದೆ. ಆದರೆ, ಹೈಕೋರ್ಟ್ ಆದೇಶದಂತೆ ಫಲಿತಾಂಶವನ್ನು ಘೋಷಣೆ ಮಾಡಿಲ್ಲ. ಹೈಕೋರ್ಟ್ ನ ಅಂತಿಮ ಆದೇಶದ ನಂತರವಷ್ಟೇ ಅಧಿಕೃತವಾಗಿ ಚುನಾವಣಾ ಫಲಿತಾಂಶ ಪ್ರಕಟಿಸಲಾಗುತ್ತದೆ.

ಹೈಕೋರ್ಟ್ ಆದೇಶ ತಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಲಕ್ಷ್ಮೀನರಸಿಂಹನ್ ಪರಾಭವಗೊಂಡಿದ್ದರೆ ನರಸಿಂಹಯ್ಯ ಗೆಲವು ಸಾಧಿಸಿದ್ದಾರೆ. ಇದೀಗ ಹೈಕೋರ್ಟ್ ನೀಡುವ ಆದೇಶ ಕುತೂಹಲ ಮೂಡಿಸಿದೆ.

Share this article