ಆಧುನಿಕದಲ್ಲೂ ರಂಗಭೂಮಿ ಪರಂಪರೆ ಅಳಿಯದು: ಡಾ.ವಿಶ್ವನಾಥ ಇಲಕಲ್‌

KannadaprabhaNewsNetwork | Published : Mar 16, 2025 1:50 AM

ಸಾರಾಂಶ

ಶತಮಾನಕ್ಕೂ ಅದಿಕ ಇತಿಹಾಸವಿರುವ ರಂಗಭೂಮಿಗೆ ಅದರದ್ದೇ ಆದ ಪರಂಪರೆ ಇದ್ದು, ಪ್ರಸ್ತುತ ಸಿನಿಮಾ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ರಂಗಭೂಮಿಯ ಗೀಳು ಜನರಿಗೆ ಇರದೇ ಇರಬಹುದಾದರೂ ರಂಗಭೂಮಿ ಕಣ್ಮರೆಯಾಗಿಲ್ಲ, ಅಗುವುದೂ ಇಲ್ಲ ಎಂದು ರಂಗ ಚಿಂತಕ ಡಾ.ವಿಶ್ವನಾಥ ವಂಶಾಕೃತಮಠ ಇಲಕಲ್ ತಿಳಿಸಿದರು.

ರಾಷ್ಟ್ರೀಯ ವೃತ್ತಿ ರಂಗೋತ್ಸವ । ಬದಲಾಗುತ್ತಿರುವ ರಂಗಸ್ವರೂಪದ ಬಗ್ಗೆ ಮಾತು

ಕನ್ನಡಪ್ರಭ ವಾರ್ತೆ ದಾವಣಗೆರೆ

ಶತಮಾನಕ್ಕೂ ಅದಿಕ ಇತಿಹಾಸವಿರುವ ರಂಗಭೂಮಿಗೆ ಅದರದ್ದೇ ಆದ ಪರಂಪರೆ ಇದ್ದು, ಪ್ರಸ್ತುತ ಸಿನಿಮಾ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ರಂಗಭೂಮಿಯ ಗೀಳು ಜನರಿಗೆ ಇರದೇ ಇರಬಹುದಾದರೂ ರಂಗಭೂಮಿ ಕಣ್ಮರೆಯಾಗಿಲ್ಲ, ಅಗುವುದೂ ಇಲ್ಲ ಎಂದು ರಂಗ ಚಿಂತಕ ಡಾ.ವಿಶ್ವನಾಥ ವಂಶಾಕೃತಮಠ ಇಲಕಲ್ ತಿಳಿಸಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ವೃತ್ತಿ ರಂಗಭೂಮಿ ರಂಗಾಯಣ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೃತ್ತಿ ರಂಗೋತ್ಸವದಲ್ಲಿ ಪರಂಪರೆಯ ಕಣ್ಮರೆ-ಬದಲಾಗುತ್ತಿರುವ ವೃತ್ತಿ ರಂಗಸ್ವರೂಪ ವಿಷಯದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಸಿನಿಮಾ, ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ರಂಗಭೂಮಿ ಸದ್ಯ ತೆರೆಗೆ ಸರಿದಿದ್ದರೂ, ಹಿರಿಯರು ಹಾಕಿಕೊಟ್ಟ ಪರಂಪರೆ ಮಾಯವಾಗುವುದಿಲ್ಲ ಎಂದರು.

ರಂಗಭೂಮಿ ರೀತಿ ರಿವಾಜು, ನಾಗರಿಕತೆ ಕಣ್ಮರೆಯಾಗದು. ಬದಲಾವಣೆಯೊಂದಿಗೆ ಸ್ವರೂಪ ಬದಲಿಸಿಕೊಂಡು, ಮತ್ತೊಂದು ರೂಪದಲ್ಲಿ ನಮ್ಮ ಮುಂದಿರುತ್ತದೆ. ರಂಗಭೂಮಿಗೆ ಅದರದ್ದೇ ಆದ ಐತಿಹ್ಯವಿದೆ. ರಂಗಭೂಮಿ ಹುಟ್ಟಿಕೊಂಡಿದ್ದೇ ದೈವಭಕ್ತಿಯ ನೆಲೆಯಲ್ಲಿ. ಕರಾವಳಿಯಲ್ಲಿ ಯಕ್ಷಗಾನದಂತಹ ಕಲೆಗಳಿಂದ ದೇವರ ಆರಾಧನೆ ಮಾಡಿದರೆ ಉತ್ತರ ಕರ್ನಾಟಕದಲ್ಲಿ ಸುಡುಗಾಡು ಸಿದ್ಧರು, ಬಯಲಾಟ, ಜನಪದ ಸೇರಿ ಇತರೆ ವೇದಿಕೆಗಳಿಂದ ಧರ್ಮ, ದೇವರ ಆರಾಧನೆ ಪ್ರದರ್ಶಿಸಲಾಗುತ್ತಿತ್ತು ಎಂದು ಹೇಳಿದರು.

ಹಿಂದೆಲ್ಲಾ ರಂಗಭೂಮಿ ನಾಟಕಗಳನ್ನು ಆಡುವಂತಹ ಪುರುಷ ಕಲಾವಿದರೆ ಹೆಣ್ಣಿನ ವೇಷ ಹಾಕಿಕೊಂಡು, ಹೆಣ್ಣಿನ ಪಾತ್ರದಲ್ಲೂ ಗಮನ ಸೆಳೆಯುತ್ತಿದ್ದರು. ಸಂಗೀತಕ್ಕೆ ಆಗೆಲ್ಲಾ ಹೆಚ್ಚು ಪ್ರಾಧಾನ್ಯತೆ ಇರುತ್ತಿತ್ತು. ಈಗ ರಂಗಭೂಮಿಯ ಮಗ್ಗಲು ಬದಲಿಸಿ, ಹೊಸ ರೂಪ ತಾಳಿವೆ. ಹಿಂದೆ ಇದ್ದಂತಹ ಶುದ್ಧ ಮನರಂಜನೆ ಈಗ ನಾಟಕಗಳಲ್ಲಿ ಮಾಯವಾಗಿ, ಅಶ್ಲೀಲ ಸಂಗೀತಗಳು ರಾರಾಜಿಸುತ್ತಿವೆ. ಹಳೆ ನಾಟಕಗಳಿಗೆ ಹೊಸ ಹೆಸರು ನೀಡಿ, ಜಾತ್ರೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮೌಲ್ಯಗಳ ಕುಸಿತದಿಂದ, ಸೃಜನಶೀಲತೆ ಕಡಿಮೆಯಾಗಿರುವುದರಿಂದ ಸದಭಿರುಚಿಯ ನಾಟಕಗಳು ಪ್ರದರ್ಶನಗೊಳ್ಳುತ್ತಿಲ್ಲ. ರಂಗಭೂಮಿ ಉಳಿದು, ಬೆಳೆಯಬೇಕೆಂದರೆ ಹೊಸ ತಲೆಮಾರಿಗೆ ಅದನ್ನು ಕೊಂಡೊಯ್ಯುವ ಜವಾಬ್ಧಾರಿ ರಂಗಕರ್ಮಿಗಿಗಳಿಗೆ ಇದೆ. ಸೃಜನಶೀಲತೆಯಿಂದ ನಾಟಕಗಳ ರಚನೆ, ಪ್ರಸ್ತುತಿಪಡಿಸಿದಾಗ ಮಾತ್ರವೇ ನಾಟಕಗಳ ವೀಕ್ಷಕರ ಸಂಖ್ಯೆಯೂ ಅದಿಕವಾಗುತ್ತದೆ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ.ಎಸ್.ಹಾಲಪ್ಪ ಮಾತನಾಡಿ, ನೂರು ವರ್ಷಗಳ ಇತಿಹಾಸವು ವೃತ್ತಿ ರಂಗಭೂಮಿಗೆ ಇದ್ದು, ಇದರ ಹಿಂದಿನ ಪರಂಪರೆಯನ್ನು ನೋಡಿದರೆ ರಾಜಕುಮಾರರಂತಹ ಹಲವಾರು ಹಿರಿಯ ಕಲಾವಿದರು ನೆನಪಾಗುತ್ತಾರೆ. ಅಲ್ಲಿಂದ ಈ‍ರೆಗೂ ಒಂದು ಸಮಗ್ರ ಚಿತ್ರವನ್ನು ರಂಗಭೂಮಿ ಕಟ್ಟಿಕೊಟ್ಟಿದೆ ಎಂದು ಸ್ಮರಿಸಿದರು.

ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಮಹಮ್ಮದ್ ಅಲಿ ಹೊಸೂರ, ಹಾವೇರಿಯ ಸತೀಶ ಕುಲಕರ್ಣಿ ವಿಷಯ ಮಂಡನೆ ಮಾಡಿದರು. ರಂಗಾಯಣದ ವಿಶೇಷಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ವೇದಿಕೆಯಲ್ಲಿದ್ದರು. ಹಿರಿಯ ಗಾಯಕಿ ರುದ್ರಾಕ್ಷಿ ಬಾಯಿ ಪ್ರಾರ್ಥಿಸಿ, ಕಾರ್ಯಕ್ರಮ ನಡೆಸಿಕೊಟ್ಟರು. ರಂಗಭೂಮಿಯ ತವರೆಂದರೆ ಅದು ದಾವಣಗೆರೆ. ಇಲ್ಲಿ ವೃತ್ತಿ ರಂಗಭೂಮಿ ಸಮುಚ್ಛಯ, ಥಿಯೇಟರ್ ನಿರ್ಮಿಸಬೇಕೆಂಬುದು ಹಲವಾರು ದಶಕಗಳ ಒತ್ತಾಸೆಯಾಗಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಇಲ್ಲಿವರೆಗೆ ಸಾಧ್ಯವಾಗಿರಲಿಲ್ಲ.ಇದೀಗ ಮಲ್ಲಿಕಾರ್ಜುನ ಕಡಕೋಳ ನಿರ್ದೇಶಕರಾಗಿ ಬಂದ ನಂತರ ಸರ್ಕಾರಕ್ಕೆ ನಿರಂತರ ಬೆನ್ನು ಹತ್ತಿ, ಸಮುಚ್ಛಯ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದ್ದು ಅಭಿನಂದನೀಯ.

ಡಾ.ವಿಶ್ವನಾಥ ವಂಶಾಕೃತಮಠ ಇಲಕಲ್, ರಂಗ ಚಿಂತಕ.

Share this article