ಕನಕಗಿರಿ ಪಟ್ಟಣಕ್ಕೆ ಶನಿವಾರ ಆಗಮಿಸಿದ್ದ ಸಂವಿಧಾನ ಜಾಗೃತಿ ರಥಯಾತ್ರೆ ಭಾನುವಾರವೂ ತಾಲೂಕು ವ್ಯಾಪ್ತಿಯ ಗ್ರಾಪಂ ಕೇಂದ್ರಗಳಿಗೆ ಸಾಗಿದ್ದು, ಗ್ರಾಮೀಣ ಪ್ರದೇಶ ಜನ ಕುಂಭ, ಕಳಸದೊಂದಿಗೆ ರಥವನ್ನು ವೈಭವಯುತವಾಗಿ ಬರಮಾಡಿಕೊಂಡರು.
ಕನಕಗಿರಿ: ಪಟ್ಟಣಕ್ಕೆ ಶನಿವಾರ ಆಗಮಿಸಿದ್ದ ಸಂವಿಧಾನ ಜಾಗೃತಿ ರಥಯಾತ್ರೆ ಭಾನುವಾರವೂ ತಾಲೂಕು ವ್ಯಾಪ್ತಿಯ ಗ್ರಾಪಂ ಕೇಂದ್ರಗಳಿಗೆ ಸಾಗಿದ್ದು, ಗ್ರಾಮೀಣ ಪ್ರದೇಶ ಜನ ಕುಂಭ, ಕಳಸದೊಂದಿಗೆ ರಥವನ್ನು ವೈಭವಯುತವಾಗಿ ಬರಮಾಡಿಕೊಂಡರು.
ಹಿರೇಖೇಡ, ಸುಳೇಕಲ್, ಜರ‍್ಹಾಳ, ಚಿಕ್ಕಡಂಕನಕಲ್ ಹಾಗೂ ಕರಡೋಣ ಗ್ರಾಪಂ ಕೇಂದ್ರಗಳಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆ ಸಂಚರಿಸಿತು. ಶಾಲಾ ಮಕ್ಕಳು ಭಾರತಮಾತೆ, ಅಂಬೇಡ್ಕರ, ಬಸವೇಶ್ವರ ಹಾಗೂ ಬುದ್ಧನ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಿವಿಧೆಡೆ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸುವ ಮುಖೇನ ಸಾರ್ವಜನಿಕರಲ್ಲಿ ಸಂವಿಧಾನದ ಆಶಯದ ಕುರಿತು ಜಾಗೃತಿ ಮೂಡಿಸಲಾಯಿತು.
ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬರುವ ದಾರ್ಶನಿಕರ ವೃತ್ತಗಳಿಗೂ ಪುಷ್ಪ ನಮನ ಸಲ್ಲಿಸಲಾಯಿತು. ನಾನಾ ಗ್ರಾಮಗಳಲ್ಲಿ ಡೊಳ್ಳು ಕುಣಿತ ಹಾಗೂ ಶಾಲಾ ಮಕ್ಕಳಿಂದ ಅಂಬೇಡ್ಕರ ಕುರಿತು ಜಾಗೃತಿ ಗೀತೆಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಪಿಡಿಒಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮ ಇಂದು: ತಾಲೂಕಿನ ೧೧ ಗ್ರಾಪಂ ಕೇಂದ್ರಗಳಲ್ಲಿ ಸಂಚರಿಸಿದ ರಥಯಾತ್ರೆ ಫೆ.೧೨ರಂದು ನವಲಿ ಗ್ರಾಮದಲ್ಲಿ ಮುಕ್ತಾಯವಾಗಲಿದೆ. ತಹಶೀಲ್ದಾರ ವಿಶ್ವನಾಥ ಮುರುಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ, ತಾಪಂ ಇಒ ಚಂದ್ರಶೇಖರ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.