ಮಹದೇವಪ್ಪ ಎಂ. ಸ್ವಾಮಿ
ಪಟ್ಟಣದ ಹೃದಯ ಭಾಗದಲ್ಲಿರುವ ಈ ಶಾಲೆಯ ಬಹುತೇಕ ಕೊಠಡಿಗಳ ಹೆಂಚುಗಳು ಕಿತ್ತು ಹೋಗಿದ್ದು, ಆತಂಕದಲ್ಲಿಯೇ ಮಕ್ಕಳು ನಿತ್ಯ ಪಾಠ ಆಲಿಸುವಂತಾಗಿದೆ. ಅಲ್ಲಲ್ಲಿ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಚಾವಣಿಯ ಹೆಂಚುಗಳು ಕಳಚಿ ಬೀಳುತ್ತಿದೆ. ಶಾಲಾ ಕಾಂಪೌಂಡ್ ಕೂಡ ಸಂಪೂರ್ಣ ಹಾಳಾಗಿದೆ. ಕಟ್ಟಡವನ್ನು ದುರಸ್ತಿ ಮಾಡಿ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿರುವ ಒಟ್ಟು ೨೧ ಕೊಠಡಿಗಳ ಪೈಕಿ ೫ ಕೊಠಡಿಗಳು ಮಾತ್ರ ಸುರಕ್ಷಿತವಾಗಿವೆ. ೬ ಹೆಂಚಿನ ಕೊಠಡಿಗಳು ಸಂಪೂರ್ಣ ಸೋರುತ್ತಿವೆ. ಒಟ್ಟು ೧೩೦ ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಈ ಕೊಠಡಿಯಲ್ಲಿ ಕೂರಿಸಲು ಶಿಕ್ಷಕರು ಹಾಗೂ ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಕಟ್ಟಡದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಪಟ್ಟಣದ ಹೃದಯ ಭಾಗದ ಶಾಲೆಯ ಸ್ಥಿತಿಯೇ ಹೀಗಿದ್ದರೆ ಗ್ರಾಮೀಣ ಭಾಗದ ಶಾಲೆಗಳ ಕೊಠಡಿಗಳ ಸ್ಥಿತಿಯಂತೂ ಹೇಳತೀರದಾಗಿದೆ.ಮಕ್ಕಳ ಗೋಳು: ಇದೇ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ಕಳೆದ ೭ ವರ್ಷಗಳಿಂದ ಮೌಲಾನಾ ಆಜಾದ ಮಾದರಿ ಶಾಲೆಯ ೨೪೦ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಎಲ್ಲ ಮಕ್ಕಳು ೭ ಕೊಠಡಿಗಳಲ್ಲಿ ಓದುತ್ತಿದ್ದು, ಎಲ್ಲವೂ ಸೋರುತ್ತಿವೆ. ಕೆಲವು ಹೆಂಚುಗಳು ಹಾರಿ ಹೋಗಿವೆ. ಮಳೆ ಬಂದರೆ ಸಾಕು, ಮಕ್ಕಳು ಭಯಪಟ್ಟು ಕೊಠಡಿಗಳಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಜಲ್ಲಿಗೇರಿ ತಾಂಡಾದ ಸ.ಕಿ. ಪ್ರಾ. ಶಾಲೆ , ಕುಸಲಾಪುರದ ಸ.ಹಿ. ಪ್ರಾ. ಶಾಲೆ, ವರವಿಯ ಸ.ಹಿ.ಪ್ರಾ. ಶಾಲೆ, ಮಜ್ಜೂರಿನ ಸ.ಹಿ.ಪ್ರಾ. ಶಾಲೆ, ಮಾಚೇನಹಳ್ಳಿಯ ಸ.ಹಿ.ಪ್ರಾ. ಶಾಲೆ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿಯ ಶಾಲೆ ಕೊಠಡಿಗಳು ದುರಸ್ತಿಗಾಗಿ ಕಾಯುತ್ತಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರಲ್ಲಿ ಆತಂಕ ಹೆಚ್ಚಾಗಿದೆ.
ಜಿಪಂನ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಹಾಗೂ ಆಡಳಿತಾಧಿಕಾರಿಗಳು ತಾಪಂ ಶಿರಹಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಕೊಠಡಿಗಳ ದುರಸ್ತಿಗೆಂದು ಸರ್ಕಾರ ₹೨೦.೫೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ. ತಕ್ಷಣ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯುಂತೆ ತಿಳಿಸಿದ್ದರೂ ಅಧಿಕಾರಿಗಳು ಬೇಜವಾಬ್ದಾರಿ ತೋರಿರುವುದು ಸದ್ಯದ ಶಾಲಾ ಕೊಠಡಿಗಳ ಸ್ಥಿತಿ ಗಮನಿಸಿದರೆ ಗೊತ್ತಾಗುತ್ತದೆ.