ಲೋಕಾಯುಕ್ತ ನ್ಯಾಯಾಧೀಶರೇ ಸುಮೋಟೋ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ್ದರೂ ಕ್ರಮವಿಲ್ಲ

KannadaprabhaNewsNetwork | Published : Jan 11, 2024 1:31 AM

ಸಾರಾಂಶ

ಅಕ್ರಮ ಮರಳು ಗಣಿಗಾರಿಕೆ ತಡೆಯದ ಪೊಲೀಸರ ವಿರುದ್ಧ ಶಾಸಕ ಎಚ್.ಟಿ.ಮಂಜು ಆಕ್ರೋಶ, ಲೋಕಾಯುಕ್ತ ನ್ಯಾಯಾಧೀಶರೇ ಸುಮೋಟೋ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ್ದರೂ ಯಾವ ಪ್ರಯೋಜವಿಲ್ಲ. ಶಾಸಕನಾಗಿ ನಾನು ಎಂದಿಗೂ ಯಾವುದೇ ಇಲಾಖೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕರ್ನಾಟಕ ಲೋಕಾಯುಕ್ತ ನ್ಯಾಯಾಧೀಶರೇ ಸುಮೋಟೋ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ್ದರೂ ಪೊಲೀಸರು ಮರಳು ಗಣಿಗಾರಿಕೆ ತಡೆಗಟ್ಟಲು ಕ್ರಮ ವಹಿಸದಿರುವ ಬಗ್ಗೆ ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮರಳು ಗಣಿಗಾರಿಕೆ ವಿಚಾರವಾಗಿ ಪೊಲೀಸ್ ಇಲಾಖೆ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಲೋಕಾಯುಕ್ತ ನ್ಯಾಯಾಧೀಶರೇ ಪತ್ರಿಕಾ ವರದಿ ಅಧರಿಸಿ ತಾಲೂಕಿನ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದೆ. ಯಾವುದೇ ಮರಳು ಗಣಿಗಾರಿಕೆ ಪರ ನಾನು ನಿಮಗೆ ಕನಿಷ್ಠ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಆದರೂ ಏಕೆ ಕ್ರಮ ವಹಿಸಿಲ್ಲ ಎಂದು ಪ್ರಶ್ನಿಸಿದರು.

ಶಾಸಕನಾಗಿ ನಾನು ಎಂದಿಗೂ ಯಾವುದೇ ಇಲಾಖೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಕ್ಷೇತ್ರದ ಅಭಿವೃದ್ದಿ ದೃಷ್ಠಿಯಿಂದ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದೇನೆ. ಅಕ್ರಮ ಮರಳು ಗಣಿಗಾರಿಕೆಯಿಂದ ಕೆರೆ-ಕಟ್ಟೆಗಳು ಹಾಳಾಗುತ್ತಿವೆ. ಇದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬರುತ್ತಿದೆ ಎಂದರು.

ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಲು ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಆದರೂ ನಿರಂತರವಾಗಿ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಮರಳು ಗಣಿಗಾರಿಕೆ ತಡೆಗಟ್ಟಲು ವಿಫಲರಾದರೆ ನಾನೇ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.

ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಬದಲಾಗಬೇಕು. ಠಾಣೆಗೆ ಬಂದ ಅಸಹಾಯಕರ ದೂರುಗಳನ್ನು ಸ್ವೀಕರಿಸಬೇಕು. ಪಟ್ಟಣದ ಉದ್ಯೋಗಿಯೊಬ್ಬರು ಕಾನೂನು ಬದ್ದವಾಗಿ ಮನೆ ಕ್ರಯಕ್ಕೆ ತೆಗೆದುಕೊಂಡು ವಾಸಿಸುತ್ತಿದ್ದು ಎಲ್ಲಾ ದಾಖಲೆಗಳಿದ್ದರೂ ಅವರನ್ನು ಬೆದರಿಸಿ ಮನೆ ಖಾಲಿ ಮಾಡಿಸಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು.

ಪುರ ಗ್ರಾಮದ ಸರ್ಕಾರಿ ಶಾಲೆ ಸಿಲಿಂಡರ್ ಕಳ್ಳತನದ ಬಗ್ಗೆ ದೂರು ನೀಡಲು ಶಿಕ್ಷಕರುಠಾಣೆಗೆ ಬಂದರೆ ನೀವೇ ಏಕೆ ಕದ್ದಿರಬಾರದು? ಎಂದು ಅಸಭ್ಯವಾಗಿ ವರ್ತಿಸಿದ್ದೀರಿ. ಪೊಲೀಸ್ ಇಲಾಖೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಸಹಾಯಕರು ಮತ್ತು ದುರ್ಬಲರ ಧ್ವನಿಯಾಗಬೇಕೆಂದು ಶಾಸಕರು ಎಚ್ಚರಿಸಿದರು.

ಕಾನೂನಿನ ಭಯವಿಲ್ಲ:

ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ಅಕ್ರಮ ಮರಳು ಅಡ್ಡಗಳ ಮೇಲೆ ದಾಳಿ ಮಾಡಿ ವಾಹನಗಳನ್ನು ಜಪ್ತಿ ಮಾಡಿದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಒಂದಷ್ಟು ದಂಡ ಕಟ್ಟಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ ಕಾನೂನಿನ ಭಯವಿಲ್ಲವಾಗಿದೆ ಎಂದು ಅಳಲು ತೋಡಿಕೊಂಡರು.

ನಿರ್ಮಿತಿ ಕೇಂದ್ರದ ಕಾರ್ಯಲೋಪ ಬಯಲು:

ಪಟ್ಟಣದ ತಾಲೂಕು ಕ್ರೀಡಾಂಗಣದೊಳಗಿರುವ ಒಳಾಂಗಣ ಕ್ರೀಡಾಂಗಣಕ್ಕೆ ಯಾವುದೇ ತಾಂತ್ರಿಕ ಅನುಮೋದನೆ ಇಲ್ಲದಿದ್ದರೂ ನೆಲಹಾಸು ಮತ್ತು ಜಿಮ್ ಉಪಕರಣಗಳನ್ನು ಅಳವಡಿಸಿ 1.92 ಕೋಟಿ ರು ಅಕ್ರಮ ಬಿಲ್ ಮಾಡಲಾಗಿದೆ. ಅರಸು ಭವನ ನಿರ್ಮಾಣಕ್ಕಾಗಿ ಬಿಸಿಎಂ ಇಲಾಖೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ 1 ಕೋಟಿ ಹಣ ನೀಡಿದ್ದರೂ ನಿರ್ಮಿತಿ ಕೇಂದ್ರದವರು ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ಕನಕ ಭವನ ಮತ್ತು ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರ ಯಾವುದೇ ಹಣಕಾಸು ಮಂಜೂರಾತಿ ಮಾಡಿಲ್ಲ ಶಾಸಕರು ತಿಳಿಸಿದರು.

ಈ ಹಿಂದಿನ ಶಾಸಕರ ಒತ್ತಡಕ್ಕೆ ಮಣಿದು ನಿಮ್ಮ ಇಲಾಖೆ ಉಳಿತಾಯ ಖಾತೆ ಹಣ ಬಳಕೆ ಮಾಡಿ ಕಾಮಗಾರಿ ಆರಂಭಿಸಿದ್ದೀರಿ. ಈಗ ಹಣಕಾಸಿನ ಸೌಲಭ್ಯವಿಲ್ಲದೆ ಕನಕ ಭವನ ಮತ್ತು ವಾಲ್ಮೀಕಿ ಭವನಗಳ ಕಾಮಗಾರಿ ಸ್ಥಗಿತಗೊಂಡಿದೆ. ಬಹುತೇಕ ಕಟ್ಟಡ ಕಾಮಗಾರಿಗಳು ಕಳಪೆಯಾಗಿದೆ. ಗುತ್ತಿಗೆದಾರರು ಮನಸೋ ಇಚ್ಚೆ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿ ಪರಿಶೀಲಿಸಿ ಅನಂತರ ಬಿಲ್ ಪಾಸ್ ಮಾಡಿ ಇಲ್ಲದಿದ್ದರೆ ಸರ್ಕಾರದ ಹಣ ಪೋಲಾಗುತ್ತದೆ ಎಂದು ಎಚ್ಚರಿಸಿದರು.

ಸ್ಲಂ ಬೋರ್ಡಿನಿಂದ ಪಟ್ಟಣಕ್ಕೆ 500 ಮನೆಗಳು ಮಂಜೂರಾಗಿವೆ. ಮನೆ ಕಟ್ಟಿಕೊಡುವುದಾಗಿ ಹೇಳಿ ಸ್ಲಂ ನಿವಾಸಿಗಳ ಮನೆ ಖಾಲಿ ಮಾಡಿಸಿದ್ದು, ನಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕೇವಲ 10 ಮನೆಗಳು ಮಾತ್ರ ಮುಕ್ತಾಯದ ಹಂತದಲ್ಲಿವೆ. ಉಳಿದ ಮನೆಗಳನ್ನು ಯಾವಾಗ ನಿರ್ಮಿಸುತ್ತೀರಿ ಎಂದು ಸ್ಲಂ ಬೋರ್ಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೊಸ ಯೋಜನೆಗಳನ್ನು ತರುವುದೇ ಪ್ರಯಾಸವಾಗಿರುವಾಗ ಅನುಮೋದನೆಗೊಂಡ ಹಳೇ ಯೋಜನೆಗಳನ್ನು ಪೂರ್ಣಗೊಳಿಸುವ ಇಚ್ಚಾಶಕ್ತಿಯನ್ನು ಅಧಿಕಾರಿಗಳು ಪ್ರದರ್ಶಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಆಡಳಿತಾಧಿಕಾರಿ ರಾಜಮೂರ್ತಿ, ಇಒ ಬಿ.ಎಸ್.ಸತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಲೂಕಿನ 16 ಇಲಾಖೆಗಳ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯನ್ನು ಗಂಭೀರವಾಗಿ ಪರಿಗಣಿಸದೆ ಯಾವುದೇ ಪ್ರಗತಿ ವಿವರವನ್ನು ನೀಡಿರಲಿಲ್ಲ. ಈ ಪ್ರಗತಿ ವರದಿ ನೀಡದ ಇಲಾಖೆಗಳಿಗೆ ನೊಟೀಸ್ ನೀಡಲು ಸಭೆ ನಿರ್ಧರಿಸಿತು.

Share this article