ಮಳೆ ಕೈ ಕೊಟ್ಟರೂ, ನೀರು-ಮೇವಿಗೆ ಬರ ಇಲ್ಲ: ಜಾರ್ಜ್

KannadaprabhaNewsNetwork |  
Published : Jul 01, 2026, 02:30 AM IST
ಹಾನಗಲ್ಲ ತಾಲೂಕು ನರೇಗಲ್‌ ಗ್ರಾಮದಲ್ಲಿ ಸೋಮವಾರ ಕಾರ ಹುಣ್ಣಿಮೆ ಸಂದರ್ಭದಲ್ಲಿ ನಡೆದ ಗಲಾಟೆ ಸಂಬಂಧವಾಗಿ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿರುವುದು. | Kannada Prabha

ಸಾರಾಂಶ

ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದರೂ ಹವಾಮಾನ ಇಲಾಖೆ ಪ್ರಕಾರ ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಆಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದ್ದು, ಯಾವುದೇ ಆತಂಕ ಬೇಡ ಎಂದು ಇಂಧನ, ಪ್ರವಾಸೋದ್ಯಮ, ಪ್ರಕೃತಿ ವಿಕೋಪ ನಿರ್ವಹಣೆ ಮೇಲುಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

- ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆ ಅಗತ್ಯ ಕ್ರಮ । ಜನರಿಗೆ ಯಾವುದೇ ಆತಂಕ ಬೇಡವೆಂಬ ಅಭಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದರೂ ಹವಾಮಾನ ಇಲಾಖೆ ಪ್ರಕಾರ ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಆಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದ್ದು, ಯಾವುದೇ ಆತಂಕ ಬೇಡ ಎಂದು ಇಂಧನ, ಪ್ರವಾಸೋದ್ಯಮ, ಪ್ರಕೃತಿ ವಿಕೋಪ ನಿರ್ವಹಣೆ ಮೇಲುಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿ.ಪಂ.ನಿಂದ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಂಗಾರು ಕೊರತೆಯನ್ನು ಎದುರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದ್ದು, ಕುಡಿಯುವ ನೀರು, ಮೇವಿಗೆ ಯಾವುದೇ ತೊಂದರೆಯೂ ಆಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಜಲ ಸಂಕಷ್ಟವಾಗುವ ಆತಂಕವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.58ರಷ್ಟು ಮಳೆಯ ಕೊರತೆಯಾಗಿದೆ. ಜೂನ್‌ನಲ್ಲಿ ವಾಡಿಕೆ ಮಳೆ ಗಣನೀಯವಾಗಿ ಕುಸಿದಿದೆ. ಈವರೆಗೆ ಕೇವಲ ಶೇ.8ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಗೆ ಶೇ.60-65ರಷ್ಟು ಬಿತ್ತನೆಯಾಗಿತ್ತು ಎಂದು ಹೇಳಿದರು.

ಭದ್ರಾ ಡ್ಯಾಂನಲ್ಲಿ ನೀರಿನ ಲಭ್ಯತೆ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ 186 ಅಡಿ ಇದ್ದ ನೀರಿನ ಮಟ್ಟ ಈಗ 136 ಅಡಿಗೆ ಇಳಿದಿದೆ. ಡ್ಯಾಂನ ಒಳ ಹರಿವು ಕಳೆದ ವರ್ಷ 12 ಸಾವಿರ ಕ್ಯೂಸೆಕ್ ಇತ್ತು.ಈಗ ಕೇವಲ 211 ಕ್ಯುಸೆಕ್ ಮಾತ್ರ ಇದೆ. ಡ್ಯಾಂನಲ್ಲಿ ಕನಿಷ್ಠ 15 ಟಿಎಂಸಿ ನೀರು ಸಂಗ್ರಹವಾಗದಿದ್ದರೆ ಕುಡಿಯುವ ನೀರಿಗೂ ಭಾರೀ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರಿನ ಮಿತ ಬಳಕೆಗೂ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಮುಂದಿನ 4 ತಿಂಗಳಿಗಾಗುವಷ್ಟು ದಾಸ್ತಾನಿದೆ ಎಂದು ಅವರು ವಿವರಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಮಾತನಾಡಿ, ಜಿಲ್ಲೆಯ 194 ಗ್ರಾ.ಪಂ.ಗಳ ಪೈಕಿ 14 ಗ್ರಾಪಂಗಳು ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗಿವೆ. ಸದ್ಯ ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ, 13 ಕಡೆ ಬೋರ್‌ವೆಲ್‌ ಬಾಡಿಗೆ ಪಡೆದು, ನೀರೊದಗಿಸಲಾಗುತ್ತಿದೆ. ಮುಂದೆ ಮಳೆ ಬರದಿದ್ದರೆ ಸುಮಾರು 48 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಬಹುದು. ನೀರಿನ ಸಮಸ್ಯೆ ನಿವಾರಣೆಗೆ ₹3 ಕೋಟಿ ತುರ್ತುನಿಧಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ₹1 ಕೋಟಿ ಬಳಸಿ, ಶಾಸಕರ ನೇತೃತ್ವದ ಟಾಸ್ಕ್‌ ಫೋರ್ಸ್ ಮೂಲಕ ಕಾಮಗಾರಿ ಕೈಗೊಂಡಿದೆ. 36 ಹೊಸ ಕೊಳವೆಬಾವಿ ಕೊರೆಸಿದ್ದು, 30 ಯಶಸ್ವಿಯಾಗಿವೆ ಎಂದು ತಿಳಿಸಿದರು.

ಕಲುಷಿತ ನೀರಿನ ಸಮಸ್ಯೆ ತಡೆಗೆ ಪ್ರತಿದಿನ ಮೈಕ್ರೋ ಬಯಾಲಾಜಿಕಲ್ ಮತ್ತು ಕೆಮಿಕಲ್ ಲ್ಯಾಬ್‌ಗಳಲ್ಲಿ ನೀರಿನ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಓವರ್ ಹೆಡ್‌ ಟ್ಯಾಂಕ್‌ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿ, ಜಿಪಿಎಸ್ ಪೋಟೋ ಅಪ್ ಲೋಡ್‌ ಮಾಡಲು ಸೂಚಿಸಲಾಗಿದೆ. ಸಾರ್ವಜನಿಕ ಸಹಾಯವಾಣಿಗೆ ಬಂದಿದ್ದ 45 ದೂರುಗಳನ್ನು ಈಗಾಗಲೇ ಪರಿಹರಿಸಲಾಗಿದೆ ಎಂದು ಅವರು ಸಭೆ ಗಮನಕ್ಕೆ ತಂದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನದಿ, ಕಾಲುವೆ ನೀರನ್ನು ಪಂಪ್‌ಸೆಟ್, ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ಅನಧಿಕೃತವಾಗಿ ಎತ್ತುತ್ತಿರುವುದರಿಂದ ಕಾಲುವೆ ಕೊನೆ ಭಾಗದ ರೈತರ ಜಮೀನಿಗೆ ನೀರು ತಲುಪುತ್ತಿಲ್ಲ. ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಪತ್ತೆ ಹಚ್ಚುವಂತೆ ನೀರಾವರಿ ಇಲಾಖೆಯಲ್ಲೂ ಅಕ್ರಮ ನೀರು ಎತ್ತುವಿಕೆ ತಡೆಗೆ ಕಠಿಣ ನಿಗಾ ವಹಿಸುವ ವಿಶೇಷ ಕಾರ್ಯಪಡೆ ರಚಿಸಬೇಕು ಎಂದು ಒತ್ತಾಯಿಸಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಮಳೆ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಹರಿಹರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಬ್ಯಾರೇಜ್ ಸ್ಥಳದಿಂದ ಹರಿಹರ ನಗರಕ್ಕೆ ನೀರೊದಗಿಸುವ ಯೋಜನೆ ರೂಪಿಸಬೇಕು ಮನವಿ ಮಾಡಿದರು.

ಮಾಜಿ ಸಚಿವ, ಉತ್ತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕರಾದ ಬಸವರಾಜ ವಿ.ಶಿವಗಂಗಾ, ಕೆ.ಎಸ್. ಬಸವಂತಪ್ಪ, ಎಂ.ಪಿ.ಲತಾ ಮಲ್ಲಿಕಾರ್ಜುನ, ಸಮರ್ಥ ಎಂ.ಶಾಮನೂರು ಸೇರಿದಂತೆ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

- - -

(ಕೋಟ್ಸ್‌) ಸದ್ಯಕ್ಕೆ ಚನ್ನಗಿರಿಗೆ ಸೂಳೆಕೆರೆ ಮೇಲೆ ಶೇ.70ರಷ್ಟು ಅವಲಂಬಿತವಾಗಿದ್ದು, ನೀರಿನ ಆತಂಕ ಹೆಚ್ಚಾಗಿದೆ. ಚನ್ನಗಿರಿ ತಾಲೂಕು ಇಂಫೌಂಡಿಂಗ್ ಜಲಾಶಯದ ಮೇಲೆ ಅವಲಂಬಿತವಾಗಿದ್ದು, ಮಾಯಾಕೊಂಡದ ಜೆಜೆಎಂ ಯೋಜನೆಗಳಿಗೆ ಕೇವಲ 15ರಿಂದ 20 ದಿನಕ್ಕೆ ಆಗುವಷ್ಟು ಮಾತ್ರ ನೀರಿದೆ. ಹೊಸ ಬೋರ್‌ವೆಲ್‌ ಕೊರೆಸಲು ಅನುಮತಿ ನೀಡಿ, ನೀರಿನ ಅಭಾವ ತಪ್ಪಿಸಬೇಕು. - ಬಸವರಾಜ ವಿ. ಶಿವಗಂಗಾ, ಚನ್ನಗಿರಿ ಶಾಸಕ.

- - -ಮಾಯಕೊಂಡ ಕ್ಷೇತ್ರದಲ್ಲಿ ನೀರಿನ ಆತಂಕ ಹೆಚ್ಚಾಗಿದೆ. 25 ಹಳ್ಳಿಗೆ ನೀರಿನ ಸಮಸ್ಯೆ ಇದೆ. 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಮೊದಲು ಕೆರೆಗಳ ಹೂಳೆತ್ತಿಸುವ ಕೆಲಸ ಮಾಡಬೇಕು. ಏತ ಯೋಜನೆ ಪೈಪ್‌ಲೈನ್ ಎಲ್ಲಿ ಎಲ್ಲಿ ಹಾಳಾಗಿದೆಯೋ ದುರಸ್ತಿಪಡಿಸಬೇಕು. ಕೆರೆ ಹೂಳೆತ್ತಿಸಿದರೆ ನೀರಿನ ಸಂಗ್ರಹ ಹೆಚ್ಚಾಗಿ, ಅಂತರ್ಜಲ ವೃದ್ಧಿಯಾಗುತ್ತದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು.

- ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ.

- - - ದೀರ್ಘಕಾಲೀನ ನೀರಿನ ಭದ್ರತೆ, ಮಳೆ ನೀರು ಕೊಯ್ಲು ಮುಂದಿನ 5 ವರ್ಷದಲ್ಲಿ ಎದುರಾಗಬಹುದಾದ ''''ಎಲ್‌ ನಿನೋ''''ದಂತಹ ಬರ ಪರಿಸ್ಥಿತಿ ಎದುರಿಸಲು ದೀರ್ಘಕಾಲೀನ ಯೋಜನೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ, ಮುನ್ನೆಚ್ಚರಿಕೆಗಳನ್ನು ಸರ್ಕಾರ ಕೈಗೊಳ್ಳಬೇಕು.

- ಸಮರ್ಥ ಎಂ.ಶಾಮನೂರು, ದಾವಣಗೆರೆ ದಕ್ಷಿಣ ಶಾಸಕ.

- - -

-(ಫೋಟೋ ಬರಲಿವೆ).

-30ಕೆಡಿವಿಜಿ17, 18, 19:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಸ್ಪತ್ರೆಯಲ್ಲಿ ಸಿಲಿಂಡರ್‌ ಸ್ಪೋಟ, ಅಗ್ನಿ ಅವಘಡ
ಸುರಕ್ಷತೆಗೆ ಒತ್ತು ನೀಡಿ: ಶಾಸಕ ಬಸವಂತಪ್ಪ