ಸಿಬ್ಬಂದಿ ಜಾಸ್ತಿ ಇದ್ರೂ ಕೆಲಸ ಕಡಿಮೆ ಆಗಿಲ್ಲ: ಬಸವರಾಜು

KannadaprabhaNewsNetwork |  
Published : Apr 03, 2026, 01:15 AM IST
ಚಿತ್ರದುರ್ಗ  ಎರಡನೇ ಪುಟದಲೀಡ್        | Kannada Prabha

ಸಾರಾಂಶ

1993ರಲ್ಲಿ ನಾನು ಭರಮಸಾಗರ ಠಾಣೆಯಲ್ಲಿದ್ದಾಗ ಕೇವಲ 15 ಜನ ಸಿಬ್ಬಂದಿ 98 ಹಳ್ಳಿಗಳ ವ್ಯಾಪ್ತಿ ನೋಡಿಕೊಳ್ಳುತ್ತಿದ್ದೆವು. ಅಂದು ಅಪರಾಧಗಳ ಸಂಖ್ಯೆ ಕಡಿಮೆ ಇತ್ತು, ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದೆವು. ಆದರೆ ಇಂದು ಸಿಬ್ಬಂದಿ ಸಂಖ್ಯೆ 65ಕ್ಕೇರಿದ್ದರೂ, ಕೆಲಸದ ಒತ್ತಡ ಹತ್ತಾರು ಪಟ್ಟು ಹೆಚ್ಚಾಗಿದೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

1993ರಲ್ಲಿ ನಾನು ಭರಮಸಾಗರ ಠಾಣೆಯಲ್ಲಿದ್ದಾಗ ಕೇವಲ 15 ಜನ ಸಿಬ್ಬಂದಿ 98 ಹಳ್ಳಿಗಳ ವ್ಯಾಪ್ತಿ ನೋಡಿಕೊಳ್ಳುತ್ತಿದ್ದೆವು. ಅಂದು ಅಪರಾಧಗಳ ಸಂಖ್ಯೆ ಕಡಿಮೆ ಇತ್ತು, ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದೆವು. ಆದರೆ ಇಂದು ಸಿಬ್ಬಂದಿ ಸಂಖ್ಯೆ 65ಕ್ಕೇರಿದ್ದರೂ, ಕೆಲಸದ ಒತ್ತಡ ಹತ್ತಾರು ಪಟ್ಟು ಹೆಚ್ಚಾಗಿದೆ

ಹೀಗೆಂದು ಕಳವಳ ವ್ಯಕ್ತಪಡಿಸಿದವರು ನಿವೃತ್ತ ಪಿಎಸ್ಐ ಎಲ್.ಆರ್ ಬಸವರಾಜು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಕೆಲಸದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾನಸಿಕ ಶಾಂತಿ ಹಾಗೂ ದೈಹಿಕ ಆರೋಗ್ಯಕ್ಕಾಗಿ ಸಿಬ್ಬಂದಿ ಯೋಗ ಮತ್ತು ಧ್ಯಾನವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.

ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರನ್ನು ಪ್ರೀತಿ ಮತ್ತು ತಾಳ್ಮೆಯಿಂದ ನಡೆಸಿಕೊಳ್ಳಿ. ಅವರ ಸಮಸ್ಯೆಗಳನ್ನು ಶಾಂತವಾಗಿ ಆಲಿಸಿ ಕಾನೂನು ಚೌಕಟ್ಟಿನಲ್ಲಿ ನೆರವು ನೀಡಬೇಕು. ಪೊಲೀಸರು ನೀಡುವ ಗೌರವವೇ ಇಲಾಖೆಗೆ ಸಿಗುವ ದೊಡ್ಡ ಹೆಗ್ಗಳಿಕೆ. ಠಾಣೆಯ ಸಿಬ್ಬಂದಿಗಳೆಲ್ಲರೂ ಒಂದು ಕುಟುಂಬದಂತೆ ತಂಡವಾಗಿ ಕೆಲಸ ಮಾಡಿದರೆ ಅಪರಾಧ ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಇಂದು ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸಿಬ್ಬಂದಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ತರಬೇತಿ ನೀಡುವ ಅಗತ್ಯವಿದೆ. ಕೆಳಹಂತದ ಪೊಲೀಸ್ ಸಿಬ್ಬಂದಿ ಅನಿವಾರ್ಯ ಕಾರಣಗಳಿಗಾಗಿ ರಜೆ ಕೇಳಿದಾಗ ಹಿರಿಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇದು ಅವರ ಕೆಲಸದ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಸಲಹೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ್ ಮಾತನಾಡಿ, ಪೊಲೀಸ್ ಇಲಾಖೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅತ್ಯಂತ ಶಿಸ್ತುಬದ್ಧ ಹಾಗೂ ಅನುಕರಣೀಯ. ನಿವೃತ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗೌರವಿಸುವ ಇಲಾಖೆಯ ಈ ಸಂಪ್ರದಾಯ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಹಬ್ಬ-ಹರಿದಿನಗಳಲ್ಲಿ ಎಲ್ಲಾ ಇಲಾಖೆಯ ನೌಕರರು ರಜೆ ಪಡೆದು ಕುಟುಂಬದೊಂದಿಗೆ ಸಂಭ್ರಮಿಸಿದರೆ, ಪೊಲೀಸ್ ಸಿಬ್ಬಂದಿ ಮಾತ್ರ ಸಾರ್ವಜನಿಕರ ರಕ್ಷಣೆಗಾಗಿ ಮೈದಾನದಲ್ಲಿರುತ್ತಾರೆ. ಈ ಒತ್ತಡದಿಂದಾಗಿ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗುವುದು ಸಹಜ. ಆದರೂ ಆ ಒತ್ತಡ ನಿಭಾಯಿಸಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ನಿಮ್ಮ ಗುಣ ಅಭಿನಂದನೀಯ. ಬದಲಾದ ಕಾಲಕ್ಕೆ ತಕ್ಕಂತೆ ಅಪರಾಧಗಳ ಸ್ವರೂಪವೂ ಬದಲಾಗಿದ್ದು, ಇಲಾಖೆಯ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪೊಲೀಸ್ ಸಿಬ್ಬಂದಿಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಇಲಾಖೆ ವಿಶೇಷ ಕಾಳಜಿ ವಹಿಸಿದ್ದು, 2025-26ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಒಟ್ಟು 89 ಮಕ್ಕಳಿಗೆ ಪೊಲೀಸ್ ಕಲ್ಯಾಣ ನಿಧಿಯಿಂದ 28 ಲಕ್ಷ ರು. ಶೈಕ್ಷಣಿಕ ಧನಸಹಾಯ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 650 ನಿವೃತ್ತ ಸಿಬ್ಬಂದಿ ಆರೋಗ್ಯ ಭಾಗ್ಯ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯುತ್ತಿದ್ದಾರೆ. ಮೃತಪಟ್ಟ ಆರು ಮಂದಿ ಸಿಬ್ಬಂದಿ, 12 ಮಂದಿ ನಿವೃತ್ತ ಸಿಬ್ಬಂದಿಗಳ ಕುಟುಂಬಕ್ಕೆ ಅಂತ್ಯಸಂಸ್ಕಾರಕ್ಕಾಗಿ ಒಟ್ಟು 2.10 ಲಕ್ಷ ರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಡಿಆರ್ ಕೇಂದ್ರ ಸ್ಥಾನದಲ್ಲಿರುವ ಪೊಲೀಸ್ ಕ್ಯಾಂಟೀನ್ ಮೂಲಕ ಜಿಲ್ಲೆಯ 1,568 ಸಿಬ್ಬಂದಿ ಸೌಲಭ್ಯ ಪಡೆಯುತ್ತಿದ್ದಾರೆ. ಇದಲ್ಲದೆ ಮೆಡಿಕಲ್ ಮತ್ತು ಜನರಲ್ ಸ್ಟೋರ್ ಗಳಲ್ಲಿ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಪೊಲೀಸ್ ಸಮುದಾಯ ಭವನದಲ್ಲಿ ಸಿಬ್ಬಂದಿ ಮಕ್ಕಳ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪೊಲೀಸರು ಸಾರ್ವಜನಿಕ ಸೇವೆಯಲ್ಲಿ ನಿಷ್ಠೆಯಿಂದ ತೊಡಗಿಸಿಕೊಳ್ಳುವ ಜೊತೆಗೆ ಜನಸ್ನೇಹಿಯಾಗಿ ವರ್ತಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಐಮಂಗಲ ತರಬೇತಿ ಶಾಲೆಯ ಪ್ರಾಂಶುಪಾಲ ಪಾಪಣ್ಣ, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ