ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿ, ಚುನಾವಣೆ ವೇಳೆ ಜನರು ತೆಗೆದುಕೊಳ್ಳುವ ತೀರ್ಮಾನಕ್ಕೆ ಸರ್ಕಾರದ ಅಧಿಕಾರಿಗಳೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ಹೊಣೆಯಲ್ಲ. ಯಾರನ್ನು ಆಯ್ಕೆ ಮಾಡಿದರೆ ಈ ದೇಶ, ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಅನುಕೂಲವಾಗುತ್ತದೆ ಎಂಬುದನ್ನು ಯೋಚಿಸುವ ಶಕ್ತಿ ನಿಮ್ಮ ಕೈಲಿದೆ ಎಂದು ಹೇಳಿದರು.
ನಾನು ಶಾಸಕನಾದ ತಕ್ಷಣ ಎಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಚುನಾವಣೆಯಲ್ಲಿ ಸೋತಾಗ ಯಾವ ಸಮಸ್ಯೆಯೂ ಜನರಿಗೆ ಕಾಣಿಸುವುದಿಲ್ಲ. ದಿನ ಬೆಳಗಾದರೆ ನನಗೆ ಒತ್ತಡ ಹಾಕುತ್ತೀರಿ. ಒಂದು ಸರ್ಕಾರದಲ್ಲಿ ಒಬ್ಬ ಮಂತ್ರಿ ಎಷ್ಟು ಕೆಲಸ ಮಾಡಬಹುದೆಂಬುದನ್ನು ಯೋಚಿಸಬೇಕು ಎಂದರು.ಕಳೆದ 2013 ರಿಂದ 2018ರ ವರೆಗಿನ ಅವಧಿಯಲ್ಲಿ ಶೇ.70ರಷ್ಟು ರಸ್ತೆ ಅಭಿವೃದ್ಧಿಪಡಿಸಿದ್ದೇನೆ. ಈಗ ಅವೆಲ್ಲವೂ ಹಾಳಾಗಿವೆ. ಉಳಿದ ಎಲ್ಲಾ ಹಳ್ಳಿಗಳ ರಸ್ತೆಗಳನ್ನೂ ಅಭಿವೃದ್ಧಿಪಡಿಸುತ್ತೇನೆ. ಆದರೆ, ನಮಗೆ ಈಗಲೇ ಎಲ್ಲಾ ಹಳ್ಳಿಗಳಿಗೂ ರಸ್ತೆ ಆಗಬೇಕೆಂದು ಕೇಳ್ತೀರಾ. ನೀವು ಎಷ್ಟು ಬುದ್ದಿವಂತರು?, ಎಷ್ಟು ತಾಳ್ಮೆ ಇದೆ ನಿಮಗೆ?, ನೀವು ನನ್ನನ್ನು ಪರೀಕ್ಷೆ ಮಾಡುತ್ತೀರಾ? ಕ್ಷೇತ್ರದ ಜನರು ಕೇಳಿದರೆ ನನಗೆ ಬೇಸರವಿಲ್ಲ. ನನ್ನೊಂದಿಗಿರುವ ಮುಖಂಡರು, ಬುದ್ದಿವಂತರು ಕೇಳ್ತಿರಲ್ಲಾ. ನನಗೆ ಕೋಪ ಬರುವುದಿಲ್ಲವೇ ಬೇಸರ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯಲ್ಲಿ ನನಗೆ ಬಹಳ ಜವಾಬ್ದಾರಿ ಇದೆ. ಇದು ಬಹಳ ಸೂಕ್ಷ್ಮವಾದ ಇಲಾಖೆ. ರಾಜ್ಯದ 224 ಕ್ಷೇತ್ರಗಳ 31 ಜಿಲ್ಲೆಗಳನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಮೂರು ಬಾರಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.
ಇಡೀ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಹೋಬಳಿ ಮಟ್ಟದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಒಬ್ಬ ವ್ಯಕ್ತಿಯ ಒಂದು ದಿನದ ಊಟಕ್ಕೆ 67 ರು. ಟೆಂಡರ್ ಆಗಿದೆ. ಈ ಕ್ಯಾಂಟಿನ್‌ನಲ್ಲಿ ಒಬ್ಬ ವ್ಯಕ್ತಿ ಕೇವಲ 25 ರು. ಕೊಟ್ಟು ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. ಇನ್ನುಳಿದ 42 ರು.ಗಳನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.